ಗುಂಡು ಹೊಡೆಯುವುದಾಗಿ ಬಹಿರಂಗ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ ಮುತಾಲಿಕ್

  • ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡದ ಮಸೀದಿಗಳು
  • ಸರ್ಕಾರದ ಮೇಲೆ ಮುತಾಲಿಕ್‌ ವಾಗ್ದಾಳಿ
  • ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ- ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯ

ಹುಬ್ಬಳ್ಳಿ: ಪದೇ ಪದೇ ಒಂದಲ್ಲಾ ಒಂದು ವಿವಾದಗಳನ್ನು ಹುಟ್ಟುಹಾಕಿ ಕೋಮು ಭಾವನೆಗಳಿಗೆ ಪ್ರಚೋದನೆ ನೀಡುತ್ತಿರುವ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಇಂದು (ಜೂನ್‌ 02) ಧ್ವನಿವರ್ದಕ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ವಿವಾದಿತ ಹೇಳಿಕೆಯನ್ನು ನೀಡಿದ್ದು, ʻಸುಪ್ರೀಂ ಆದೇಶ ಪಾಲಿಸದವರ ಮೇಲೆ ಗುಂಡು ಹೊಡಿತೀವಿʼ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್‌ ಮುತಾಲಿಕ್‌ ಧ್ವನಿವರ್ಧಕಗಳ ವಿಚಾರವಾಗಿ ಸರ್ಕಾರ ನೀಡಿದ್ದ ಕಾಲಾವಕಾಶ ಮುಗಿದಿದೆ. ಆದರೂ ಸರ್ಕಾರ ಏನು ಮಾಡಿತ್ತಿದೆ ಎಂಬುದು ತಿಳಿಯುತ್ತಿಲ್ಲ, ಹಾಗಾಗಿ ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದ ನಿಮಗೆ ಈ ಬಗ್ಗೆ ಅರಿವು ಇಲ್ವಾ? ಧ್ವನಿವರ್ಧಕದ ವಿರುದ್ಧ ಕ್ರಮತೆಗೆದುಕೊಳ್ಳಲು ನಿಮಗೆ ಧಮ್ ಇಲ್ವಾ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಒಂದು ವರ್ಷದಿಂದ ನಾವು ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಇದರ ವಿರುದ್ಧ ಮುಂದಿನ ಪ್ರತಿಕ್ರಿಯೆಯಾಗಿ ನಾವು ಭಜನೆ ಹಾಗೂ ಭಕ್ತಿಗೀತೆಗಳ ಅಭಿಯಾನಕ್ಕೂ ಚಾಲನೆ ನೀಡಿದ್ದೇವೆ. ಆದರೆ ಸರ್ಕಾರ ಕೇವಲ ಒಂದು ಪತ್ರ ಕಳುಹಿಸಿ ತಮ್ಮ ಕೆಲಸ ಮುಗಿಯಿತು ಎಂದುಕೊಂಡಿದೆ, ಆದರೆ ಅಷ್ಟಕ್ಕೆ ಈ ವಿಷಯವನ್ನ ನಾವು ಸುಮ್ಮನೆ ಬಿಡುವುದಿಲ್ಲಾ ಎಂದಿದ್ದಾರೆ.

ನಮಗೆ ಹಲವು ಹಿಂದೂ ಸಂಘಟನೆಗಳ ಬೆಂಬಲವಿದೆ. ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ನಿಮಗೆ ಇದರ ಬಗ್ಗೆ ಅರಿವು ಇಲ್ವಾ? ಇನ್ನು ಮುಂದೆ ನಮಗೂ ನಿಮ್ಮ ಮೇಲೆ ನಂಬಿಕೆ ಇರುವುದಿಲ್ಲ. ಜೂನ್ ತಿಂಗಳ  8 ರಿಂದ ಬಿಜೆಪಿಯ ಎಲ್ಲಾ ಶಾಸಕರ ಕಚೇರಿ ಎದುರು ಧರಣಿ ನಡೆಸುತ್ತೇವೆ. ನಿಮ್ಮ ನಾಟಕ ಬಟಬಯಲು ಮಾಡುತ್ತೇವೆ ಎಂದಿದ್ದಾರೆ.

ಧ್ವನಿವರ್ಧಕದ ವಿಚಾರದಲ್ಲಿ ಯಾರು ಕಾನೂನು ಪಾಲನೆ ಮಾಡುತ್ತಿಲ್ಲವೋ, ಅವರಿಗೆ ಗುಂಡು ಹೊಡೆಯಬೇಕು. ನಿಮ್ಮಿಂದ ಸಾಧ್ಯವಿಲ್ಲ ಎಂದರೆ ನನಗೆ ಅಧಿಕಾರ ಕೊಡಿ, ನಾನು ಗುಂಡು ಹೊಡೆಯುತ್ತೇನೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹೊಡೆಯುವೆ ಎಂದು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನೇರ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಏನೂ ನಿಮ್ಮಪ್ಪನದ್ದಲ್ಲ. ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿರುವುದು. ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ. ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯ. ಇದು ಹೀಗೇ ಮುಂದುವರಿದರೆ ಇಡೀ  ಹಿಂದೂ ಸಮಾಜ ಒಟ್ಟಾಗಿ ʻಚಲೋ ಕಾಶ್ಮೀರ ಚಳುವಳಿʼ ನಡೆಸಬೇಕಾಗುತ್ತದೆ ಎಂದು  ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *