ಅಂಕೋಲ: ತಾಲ್ಲೂಕಿನ ಗುಂಡಬಾಳಾ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದಗೊಳ್ಳುವವರಿಗೆ ಸಹಾಯವಾಗುವಂತಹ “ದುರ್ಗಾಂಬಾ ಸಾರ್ವಜನಿಕ ಗ್ರಂಥಾಲಯ” ಉದ್ಘಾಟನೆಗೊಂಡಿದೆ. ಉಚಿತ ಗ್ರಂಥಾಲಯ ಇದಾಗಿದ್ದು ಶಾಲಾ-ಕಾಲೇಜು ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಕಲಿಸುವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಬು ಸುಂಕೇರಿ ಗ್ರಂಥಾಲಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಸತೀಶ್ ಸೈಲ್, ಎಲ್‌ಐಸಿ ಏಜೆಂಟ್ ಆಗಿದ್ದ ತಾನು ತನಗೆ ದೊರೆತ ಶಿಕ್ಷಣ, ಮಾಡಿದ ಪ್ರಯತ್ನ ಮತ್ತು ಧೈರ್ಯವಾಗಿ ಮುನ್ನುಗ್ಗುವ ಚಾತಿಯಿಂದಾಗ ಈ ಹಂತಕ್ಕೆ ತಲುಪಲು ಸಾಧ್ಯವಾಯಿತು. ಹಾಗಾಗಿ ಓದು ಮತ್ತು ಶಿಕ್ಷಣ ಬಹುಮುಖ್ಯ, ಪ್ರತಿಯೊಬ್ಬರೂ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು ಅಂದರು.
ಉತ್ತರ ಕನ್ನಡ ಜಿಲ್ಲೆ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ಹಿಂದುಳಿದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಗೋಕರ್ಣ ಪೋಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ನಾಯ್ಕ, ಇಂತಹ ಗ್ರಂಥಾಲಯ ಪ್ರಾರಂಭವಾವುದರಿಂದ ಔದ್ಯೋಗಿಕ ಜಾಗೃತಿ ಮೂಡುತ್ತದೆ, ಈಗಿನ ಯುವಜನತೆ ಮೊಬೈಲ್ ಗೀಳು ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಬೇಕು ಅಂದರು.
ಗ್ರಂಥಾಲಯದ ರೂವಾರಿ ರಮಾನಂದ ನಾಯ್ಕ ಮಾತನಾಡಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರು ತಮ್ಮ ಊರಿನಲ್ಲಿ ಪ್ರಾರಂಭಿಸಿದ ಗ್ರಂಥಾಲಯ ನೋಡಿ ಅದರಿಂದ ಪ್ರೇರಣೆಗೊಂಡು ನಾನು ಇಂತಹ ಪ್ರಯತ್ನಕ್ಕೆ ಕೈಹಾಕಿದೆ. ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳ ಮತ್ತು ಮಾಸ ಪತ್ರಿಕೆಗಳು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಮುಂದುವರಿಯಲಿದೆ. ಇದನ್ನು ಡಿಜಿಟಲ್ ಗ್ರಂಥಾಲಯವನ್ನಾಗಿ ಮಾಡುವ ಪ್ರಯತ್ನವೂ ಚಾಲ್ತಿಯಲ್ಲಿದೆ ಎಂದು ಅವರು ತಿಳಿಸಿದರು.
ಪಿಡಿಓ ಮಂಜುನಾಥ ನಾಯಕ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಬಿ, ಸತೀಶ ಕಾಂಬ್ಳೆ ಹಾಗೂ ಹಿಲ್ಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಟಿ ನಾಯಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಧಾರವಾಡದ ಸ್ಪರ್ಧಾ ಜೀನಿಯಸ್ ಸಂಸ್ಥೆಯ ಸಿದ್ದಣ್ಣ ದಳವಾಯಿ “ಪಿಯುಸಿ ನಂತರ ಮುಂದೇನು?” ಎಂಬ ಔದ್ಯೋಗಿಕ ಮತ್ತು ಶೈಕ್ಷಣಿಕ ಅರಿವು ಕಾರ್ಯಕ್ರಮ ನಡೆಸಿಕೊಟ್ಟರು. ರಮಾನಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ನಲಿನಿ ನಾಯ್ಕ ಸ್ವಾಗತಿಸಿದರು , ಶ್ರೀಕಾಂತ್ ಗೌಡ ವಂದಿಸಿದರು.