ಗುಜರಾತ್: ಇಲ್ಲಿನ ಮೊರ್ಬಿ ಜಿಲ್ಲೆಯ ಶ್ರೀಸೋಖ್ದಾ ಪ್ರಾಥಮಿಕ ಶಾಲೆಯಲ್ಲಿನ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಮಕ್ಕಳು ದಲಿತ ಮಹಿಳೆ ಅಡುಗೆ ಮಾಡಿದ್ದಾರೆ ಎಂದು ಆರೋಪಿಸಿ ಮಧ್ಯಾಹ್ನದ ಬಿಸಿಯೂಟವನ್ನು ನಿರಾಕರಿಸಿದ್ದಾರೆ.
ಹಿಂದುಳಿದ ವರ್ಗಗಳ ಸಮುದಾಯದ 153 ವಿದ್ಯಾರ್ಥಿಗಳ ಪೈಕಿ 147 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು ನಿರಾಕರಣೆ ಮಾಡಿದ್ದಾರೆ. ಬಿಸಿಯೂಟ ತಯಾರಿಸುವ ಕೆಲಸವನ್ನು ಕಳೆದ ಜೂನ್‌ನಲ್ಲಿ ದಲಿತ ಮಹಿಳೆ ಧಾರಾ ಮಕ್ವಾನಾ ಅವರಿಗೆ ಶಾಲಾ ಅಧಿಕಾರಿಗಳು ಗುತ್ತಿಗೆ ನೀಡಿದರು. ಆ ನಂತರದಲ್ಲಿ ವಿದ್ಯಾರ್ಥಿಗಳ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡದಂತೆ ತಡೆದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ದಲಿತ ಮಹಿಳೆಯ ಪತಿ ಗೋಪಿ ಪ್ರತಿಕ್ರಿಯೆ ನೀಡಿದ್ದು, “ವಿದ್ಯಾರ್ಥಿಗಳು ಊಟಕ್ಕೆ ಬರುತ್ತಿರಲಿಲ್ಲ. ನಂತರ ಪೋಷಕರನ್ನು ಪ್ರಶ್ನಿಸಲಾಯಿತು. ದಲಿತ ಮಹಿಳೆ ಬೇಯಿಸಿದ ಆಹಾರವನ್ನು ನಮ್ಮ ಮಕ್ಕಳು ತಿನ್ನಲು ಬಿಡುವುದಿಲ್ಲ ಎಂದು ಹೇಳಿದರು” ಎಂದು ಬೇಸರ ವ್ಯಕ್ತಪಡಿಸಿದ ಅವರು, ಧಾರಾ ಮಾಕ್ವಾನಾ ತಯಾರಿಸಿದ ದೊಡ್ಡ ಪ್ರಮಾಣದ ಆಹಾರ ವ್ಯರ್ಥವಾಗುತ್ತಿದೆ ಎಂದರು.
ಘಟನೆಯ ನಂತರ, ಗೋಪಿ ಪೊಲೀಸರಿಗೆ ದೂರು ನೀಡಿದ್ದು, ಅದನ್ನು ಪೊಲೀಸ್ ಉಪಾಧೀಕ್ಷಕರಿಗೆ ವರ್ಗಾಯಿಸಲಾಗಿದೆ. “ಆದರೆ, ಇದು ಶಾಲಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಡುವಿನ ವಿಷಯವಾಗಿರುವುದರಿಂದ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಶಾಲೆಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಪೋಷಕರ ನಡುವೆ ಈ ವಿಷಯದ ಬಗ್ಗೆ ಎರಡು ಭಾರಿ ಸಭೆಗಳನ್ನು ನಡೆಸಲಾಗಿದೆ. ಆದರೆ ತಮ್ಮ ನಿಲುವನ್ನು ಬದಲಾಯಿಸಲು ಪೋಷಕರು ನಿರಾಕರಿಸಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದಾರೆ.
“ಜಾತಿವಾದಿ ಧೋರಣೆ ಬೇಡ. ಎಲ್ಲರೂ ಸಮಾನರು. ಯಾರೂ ಅಸ್ಪೃಶ್ಯರಲ್ಲ ಎಂದು ನಾವು ಮಕ್ಕಳಿಗೆ ಕಲಿಸಬಹುದು. ದುಃಖಕರವೆಂದರೆ, ನಾವು ಅವರ ಪೋಷಕರನ್ನು ಮನವೊಲಿಸಲು ಸಾಧ್ಯವಿಲ್ಲ” ಎಂದು ಪ್ರಾಂಶುಪಾಲರು ವಿಷಾದಿಸಿದ್ದಾರೆ.