– ವಸಂತರಾಜ ಎನ್ ಕೆ
ಬಿಜೆಪಿ ಯಲ್ಲಿ ಸೀಟು ಹಂಚಿಕೆಯ ನಂತರ ಭುಗಿಲೆದ್ದ ಬಂಡಾಯದ ಸ್ಫೋಟದ ಪ್ರಮಾಣವು ಅಭೂತಪೂರ್ವವಾಗಿದೆ. ಬಿಜೆಪಿ ನಾಯಕತ್ವ ತನ್ನ ಚುನಾವಣಾ ಕಾರ್ಯತಂತ್ರದಲ್ಲಿ, ನಿರ್ದಿಷ್ಟವಾಗಿ ಸೀಟು ಹಂಚಿಕೆಯಲ್ಲಿ ಎಡವಿದೆಯೇ ? ಚುನಾವಣಾ ಫಲಿತಾಂಶಗಳ ಮೇಲೆ ಈ ಬಂಡಾಯದ ಪರಿಣಾಮ ಏನು? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವಿದು.
ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ಇಬ್ಬರು ಸಂಸದರು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ರಾಜೀನಾಮೆ, ಬಂಡಾಯ, ಇತರ ಪಕ್ಷಗಳಿಗೆ ಸೇರ್ಪಡೆಯಾದದ್ದು ಕಳೆದ ವಾರ ಕರ್ನಾಟಕ ಚುನಾವಣಾ ರಂಗದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಬಿಜೆಪಿಯ ಮಾಜಿ ಸಿಎಂ ಮತ್ತು ಆರು ಬಾರಿ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವಂತೆ ಕೇಳಲಾಯಿತು, ಅದನ್ನು ಅವರು ನಿರಾಕರಿಸಿದರು. ಅವರು ತಮ್ಮ ಹಿಂಬಾಲಕರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿದರು. ಅವರಿಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂತು, ತಮ್ಮದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಸಿದ್ದಾರೆ. ನಾನು ‘ಶುದ್ಧ’ನಾಗಿರುವುದರಿಂದ ಐಟಿ/ಇಡಿ ದಾಳಿಗಳಿಗೆ ಹೆದರುವುದಿಲ್ಲ ಎಂದು ಶೆಟ್ಟರ್ ಬಿಜೆಪಿಗೆ ಟಾಂಟ್ ಕೊಟ್ಟಿದ್ದಾರೆ. ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು ಮತ್ತು ಆರ್‌ಎಸ್‌ಎಸ್/ಬಿಜೆಪಿ ಕುಟುಂಬದಿಂದ ಬಂದವರು, ಪಕ್ಷದ ಶಿಸ್ತಿನ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಸಹ ಇದನ್ನು ನಿರೀಕ್ಷಿಸಲೂ ಸಾಧ್ಯವಿರಲಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದಿದ್ದಾರೆ.
ಒಟ್ಟಾರೆ ಬಿಜೆಪಿ ಯಲ್ಲಿ ಸೀಟು ಹಂಚಿಕೆಯ ನಂತರ ಭುಗಿಲೆದ್ದ ಬಂಡಾಯದ ಸ್ಫೋಟದ ಪ್ರಮಾಣವು ಅಭೂತಪೂರ್ವವಾಗಿದೆ. ಕಳೆದ ಬಾರಿ ಎರಡನೇ ಸ್ಥಾನ ಪಡೆದಿರುವ ಅಥವಾ ಗೆಲ್ಲುವ ಸಾಮರ್ಥ್ಯ ಹೊಂದಿದ್ದ ಮತ್ತು 18 ಹಾಲಿ ಶಾಸಕರು ಮತ್ತು ಹಲವು ಪ್ರಬಲ ಆಕಾಂಕ್ಷಿಗಳಿಗೆ ಟಿಕೆಟ್ ನಿರಾಕರಿಸಲಾಗಿದೆ ಕನಿಷ್ಠ 20 ಕ್ಷೇತ್ರಗಳಲ್ಲಿ ಬಿಜೆಪಿ ಕಛೇರಿಗಳ ಒಳಗೆ ಅಥವಾ ಎದುರು ತೀವ್ರ ಪ್ರತಿಭಟನೆ, ಹಿಂಸಾಚಾರ/ಗಲಾಟೆಗಳು ನಡೆದಿವೆ ಎಂದು ವರದಿಯಾಗಿದೆ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗಂಭೀರ ಬಂಡಾಯ/ರಾಜೀನಾಮೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಚುನಾವಣಾ ಫಲಿತಾಂಶಗಳ ಮೇಲೆ ಈ ಬಂಡಾಯದ ಪರಿಣಾಮ ಏನು? ಬಿಜೆಪಿ ನಾಯಕತ್ವ ತನ್ನ ಚುನಾವಣಾ ಕಾರ್ಯತಂತ್ರದಲ್ಲಿ, ನಿರ್ದಿಷ್ಟವಾಗಿ ಸೀಟು ಹಂಚಿಕೆಯಲ್ಲಿ ಎಡವಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.
ಬಿಜೆಪಿ ತನ್ನ ಚುನಾವಣಾ ಕಾರ್ಯತಂತ್ರದಲ್ಲಿ ಎಡವಿದೆಯೇ?
ಬಿಜೆಪಿ ನಾಯಕತ್ವವು ತನ್ನ ಚುನಾವಣಾ ತಂತ್ರದಲ್ಲಿ ಎಡವಿದೆಯೇ? ಈ ಪ್ರಶ್ನೆಗೆ ಉತ್ತರಿಸಲು ಮೂರು ಥೀಯರಿಗಳನ್ನು ಮುಂದಿಡಲಾಗುತ್ತಿದೆ. ‘ಚಾಣಕ್ಯ ಪೆದ್ದನಲ್ಲ, ಭಾರೀ ಚಾಣಾಕ್ಷ’ ಎಂಬುದು ಈ ಮೂರಕ್ಕೂ ಥೀಯರಿಗೂ ಸಾಮಾನ್ಯವಾಗಿರುವ ಅಂಶ.
ಮೊದಲ ಥಿಯರಿಯ ಪ್ರಕಾರ, ಗುಜರಾತ್‌ನಲ್ಲಿ ಬಳಸಿದ ಚುನಾವಣಾ ತಂತ್ರವನ್ನು ಅಂದರೆ, ‘ಗುಜರಾತ್ ಮಾದರಿ’ಯನ್ನು ಕರ್ನಾಟಕದಲ್ಲಿ ಅಳವಡಿಸಲಾಯಿತು. ಏಕೆಂದರೆ ಎರಡೂ ಪರಿಸ್ಥಿತಿಗಳು ಒಂದೇ ರೀತಿಯಾಗಿವೆ. 2019 ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಗೆಲುವು ದಕ್ಕಿದೆ. ಮತ್ತು ರಾಜ್ಯ ಸರ್ಕಾರ ಗಂಭೀರವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಅದಕ್ಕೆ ಹೂಡಲಾದ ಕಾರ್ಯತಂತ್ರವೆಂದರೆ – ಕಳಂಕಿತ ಅಥವಾ ಗಂಭೀರ ಆಡಳಿತ-ವಿರೋಧಿ ಆಕ್ರೋಶವನ್ನು ಎದುರಿಸುತ್ತಿರುವ ಶಾಸಕರನ್ನು ಕೈಬಿಡುವುದು, ಬಣಗಳನ್ನು ಸೃಷ್ಟಿಸುವ ಮತ್ತು ಕೇಂದ್ರ / ಆರ್‌ಎಸ್‌ಎಸ್ ನಿರ್ದೇಶನಗಳನ್ನು ನಿರ್ಲಕ್ಷಿಸುವ ಸಾಧ್ಯತೆಯಿರುವ ಜಾತಿ/ಜನಸಮೂಹ ನೆಲೆ ಹೊಂದಿರುವ ಹಳೆಯ ಪ್ರಬಲ ನಾಯಕರನ್ನು ಹೊರಹಾಕುವುದು, ಕೋಮುವಾದವನ್ನು ನಿರ್ಲಜ್ಜವಾಗಿ ಮುನ್ನಡೆಸಬಲ್ಲ ಮತ್ತು ಕೇಂದ್ರ/ಆರ್‌ಎಸ್‌ಎಸ್ ನಿರ್ದೇಶನಗಳನ್ನು ಪಾಲಿಸುವ, ಉಗ್ರವಾದಿ ‘ಹೊಸ ತಾಜಾ’ ಮುಖಗಳನ್ನು ತರುವುದು. ಈ ‘ಗುಜರಾತ್ ಮಾದರಿ’ಯನ್ನು ಹೊರದಬ್ಬಲ್ಪಟ್ಟ ನಾಯಕರು ಶಿಸ್ತಿನಿಂದ ನಮ್ರವಾಗಿ ಸ್ವೀಕರಿಸುತ್ತಾರೆ ಎಂಬುದು ನಿರೀಕ್ಷೆಯಾಗಿತ್ತು. ಆದರೆ ಅನಿರೀಕ್ಷಿತವಾಗಿ ಹಲವು ಹಿರಿಯ ನಾಯಕರು ಶಿಸ್ತು ಉಲ್ಲಂಘಿಸಿದ್ದರಿಂದ ‘ಗುಜರಾತ್ ಮಾದರಿ’ಗೆ ತೀವ್ರ ಸವಾಲು ಎದುರಾಗಿದೆ.
‘ಗುಜರಾತ್ ಮಾದರಿಯನ್ನು ಜಾರಿಗೊಳಿಸುವ ಹೆಸರಿನಲ್ಲಿ ಬಿಜೆಪಿಯ ಒಂದು ಬಣ, ತನ್ನದೇ ಆದ ಬಣದ ಉದ್ದೇಶಗಳನ್ನು ಪೂರೈಸಿದೆ ಎಂಬುದು ಎರಡನೇ ಥೀಯರಿಯ ಹೂರಣ. ಬಿ ಎಲ್ ಸಂತೋಷ್ ಮತ್ತು ಪ್ರಹ್ಲಾದ್ ಜೋಶಿ ನೇತೃತ್ವದ ಬಣವು ಕೇಂದ್ರ ನಾಯಕತ್ವವನ್ನು ಸೂಕ್ತವಾಗಿ ದಾರಿ ತಪ್ಪಿಸುವ ಮೂಲಕ, ಇತರ ಬಣಗಳ ಮೇಲೆ ಮೇಲುಗೈ ಸಾಧಿಸಲು ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿತ್ತು. ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಲಿಂಗಾಯತ ಮತ್ತು ಇತರ ಕೆಲವು ನಾಯಕರು ಸಾಕಷ್ಟು ಪ್ರಾಬಲ್ಯ ಹೊಂದಿದ್ದರು. ಅವರಲ್ಲಿ ಹೆಚ್ಚಿನವರು ಆಯಾ ಜಾತಿ/ಜನಸಮೂಹಗಳ ನೆಲೆಯನ್ನು ಹೊಂದಿದ್ದರು. ಪ್ರಬಲ ಲಿಂಗಾಯತ ನಾಯಕರೂ ಪ್ರಬಲ ಜನಸಮೂಹ ನೆಲೆ ಹೊಂದಿದ್ದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಮೂಲಕ ಈ ಬಣ ತನ್ನ ಕಾರ್ಯತಂತ್ರ ಆರಂಭಿಸಿದೆ. ಈ ಬಣ ಸ್ವತಂತ್ರ ಜಾತಿ/ಸಾಮೂಹಿಕ ನೆಲೆಯನ್ನು ಹೊಂದಿರುವ ಎಲ್ಲ ನಾಯಕರನ್ನು ಒಂದಲ್ಲ ಒಂದು ನೆಪದಲ್ಲಿ ಹೊರಹಾಕಲು (ಅಂತಿಮವಾಗಿ ಸೀಟು ಹಂಚಿಕೆಯಲ್ಲಿ) ಪ್ರಯತ್ನಿಸಿತು. ಸಂಭಾವ್ಯ ಸಿಎಂ ಆಕಾಂಕ್ಷಿಗಳು ಮತ್ತು ತಮ್ಮ ಅನುಯಾಯಿಗಳಿಗೆ ಟಿಕೆಟ್‌ಗಾಗಿ ಒತ್ತಾಯ ಹೇರಬಲ್ಲ ಶೆಟ್ಟರ್, ಸವದಿ (ಲಿಂಗಾಯತ ನಾಯಕರು), ಈಶ್ವರಪ್ಪ (ಒಬಿಸಿ ನಾಯಕ), ಲಿಂಬಾವಳಿ (ದಲಿತ ಮುಖಂಡರು) ಅವರುಗಳಿಗೆ ಟಿಕೆಟ್ ನಿರಾಕರಿಸಲಾಯಿತು. ಸೋಮಣ್ಣ (ಲಿಂಗಾಯತ ನಾಯಕ) ಮತ್ತು ಆರ್ ಅಶೋಕ್ (ಒಕ್ಕಲಿಗ ನಾಯಕ) ಮೇಲೆ ಹೊರಿಸಲಾದ ಸವಾಲಿನ ‘ಎರಡು ಸೀಟು ಪ್ರಯೋಗ ಕೂಡ ಇದೇ ತಂತ್ರದ ಭಾಗವಾಗಿತ್ತು. ಈ ಕಾರ್ಯತಂತ್ರಕ್ಕೆ ‘ಗುಜರಾತ್ ಮಾದರಿ;ಯ ಹೆಸರಲ್ಲಿ ಕೇಂದ್ರ ನಾಯಕತ್ವದ ೊಪ್ಪಿಗೆ ಪಡೆಯಲಾಯಿತು. ಈ ಕಾರ್ಯತಂತ್ರಕ್ಕೆ ಬಂಡಾಯವನ್ನು ನಿರೀಕ್ಷಿಸಲಾಗಿತ್ತು. ಹೊರದಬ್ಬಲ್ಪಟ್ಟ ನಾಯಕರು ಅದನ್ನು ಶಿಸ್ತಿನಿಂದ ಸ್ವೀಕರಿಸುತ್ತಾರೆ ಅಥವಾ ಪಕ್ಷ ಬಿಟ್ಟು ಹೋಗುತ್ತಾರೆ (ತೊಲಗಿದರೆ ಪೀಡೆ ಕಳೆಯಿತು!) ಮತ್ತು ಸ್ವತಂತ್ರವಾಗಿ ಅಥವಾ ಇತರ ಪಕ್ಷಗಳ ಮೂಲಕ ಸ್ಪರ್ಧಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಟಿಕೆಟ್‌ಗಳನ್ನು ಹೆಚ್ಚಾಗಿ ಹೊಸ ‘ತಾಜಾ ಮುಖ’ಗಳಿಗೆ ಅಥವಾ ತಮ್ಮದೇ ಆದ ನೆಲೆಯ ಕೊರತೆಯಿಂದ ಕೇಂದ್ರ/ಆರ್‌ಎಸ್‌ಎಸ್ ನಿರ್ದೇಶನಗಳನ್ನು’ಜೀ ಹುಜೂರ್’ ಎಂದು ಪಾಲಿಸುವವರಿಗೆ ನೀಡಲಾಯಿತು. ಬಿಎಲ್ ಸಂತೋಷ್ ಅಥವಾ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು. ಈ ಬಣದ ತಂತ್ರವು ಇತರ ಎಲ್ಲ ಜಾತಿ ಲಾಬಿಗಳನ್ನು ದುರ್ಬಲಗೊಳಿಸುವ ಮತ್ತು ಅಧೀನಗೊಳಿಸುವ ಮೂಲಕ ಬಿಜೆಪಿಯಲ್ಲಿ ಆರೆಸ್ಸೆಸ್/ಬ್ರಾಹ್ಮಣ ಲಾಬಿಯ ಪ್ರಾಬಲ್ಯವನ್ನು ಮರು ಸ್ಥಾಪಿಸುವ ತಂತ್ರ ಎಂದೂ ವ್ಯಾಖ್ಯಾನಿಸಲಾಗಿದೆ.
ಮೂರನೆಯ ಥಿಯರಿ, ಬಿಜೆಪಿ ಬಹುಮತವನ್ನು ಪಡೆಯುವುದಿಲ್ಲ ಮತ್ತು ಅದು ಅತಂತ್ರ ವಿಧಾನಸಭೆ ಆಗಬಹುದು ಎಂಬ ನಿರೀಕ್ಷೆಯೊಂದಿಗೆ ಈ ಕಾರ್ಯತಂತ್ರವು ಒಂದು ಚಾಣಾಕ್ಷ ‘ಮಾಸ್ಟರ್ ಪ್ಲಾನ್’ ಆಗಿದೆ ಎಂದು ಪರಿಗಣಿಸುತ್ತದೆ. ಹೀಗಾಗಿ ಬಿಜೆಪಿ ತನ್ನ ನಾಯಕರನ್ನು, ಸದಸ್ಯರನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ‘ಟ್ರೋಜನ್ ಹಾರ್ಸ್ ಆಗಿ ಕಳುಹಿಸಿದೆ. ಬಂಡಾಯ, ರಾಜೀನಾಮೆ, ಇತರ ಪಕ್ಷಗಳಿಗೆ ಸೇರುವುದು – ಇವು ಎಲ್ಲಾ ಈ ಮಾಸ್ಟರ್ ಪ್ಲಾನ್ ನ ಭಾಗಗಳೇ. ಸೂಕ್ತ ಸಮಯದಲ್ಲಿ, ಅವರು ಅಗತ್ಯವಿರುವಂತೆ ಇತರರೊಂದಿಗೆ ‘ಘರ್-ವಾಪ್ಸಿ ಮಾಡುತ್ತಾರೆ. ಫಲಿತಾಂಶ ಏನೇ ಬರಲಿ. ಬಿಜೆಪಿ ಸರಕಾರ ರಚನೆಯಾಗುತ್ತದೆ.
ಲಭ್ಯವಿರುವ ಸತ್ಯಗಳು ಮತ್ತು ಮಾಹಿತಿ ಎರಡನೇ ಥಿಯರಿಗೆ ಹೆಚ್ಚು ಸರಿಯಾಗಿ ಹೊಂದಿಕೊಳ್ಳುತ್ತವೆ. ಶೆಟ್ಟರ್ ತಮ್ಮ ಮತ್ತು ಇತರ ನಾಯಕರನ್ನು ಹೊರದಬ್ಬಿದ್ದಕ್ಕಾಗಿ ಸಂತೋಷ್ ಮತ್ತು ಜೋಶಿಯನ್ನು ಬಹಿರಂಗವಾಗಿ ಆರೋಪಿಸಿದ್ದಾರೆ. ಮಾಧ್ಯಮಗಳು ಕೂಡ ‘ಸಂತೋಷ್ ಪಾತ್ರ’ದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿವೆ, ಅದು ಮೊದಲು ಗುಸು-ಗುಸು ಮಟ್ಟದಲ್ಲೇ ಇತ್ತು. ಆದರೆ ಇತರ ಎರಡು ಊಹೆಗಳನ್ನು ಈಗಿನಿಂದಲೇ ತಳ್ಳಿಹಾಕಲಾಗುವುದಿಲ್ಲ.
ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತು ಅದರ ಸರ್ಕಾರದ ಮೇಲೆ ಆರೆಸ್ಸೆಸ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 2019 ರ ಲೋಕಸಭೆಯಲ್ಲಿ ಹಿಂದುತ್ವ ಮತ್ತು ಮೋದಿಯ ಮೇಲಿನ ಗೆಲುವು ಅದಕ್ಕೆ ಮತ್ತಷ್ಟು ಧೈರ್ಯ ತುಂಬಿದೆ. ಪಕ್ಷದ ಮೇಲೆ ಯಡಿಯೂರಪ್ಪನವರ ಪ್ರಾಬಲ್ಯವನ್ನು ಒಂದು ಅಡಚಣೆ ಎಂದು ಪರಿಗಣಿಸಲಾಗಿದೆ ಮತ್ತು ಅದನ್ನು ನಿಭಾಯಿಸಿದ ನಂತರ ಅವರು ಇತರ ಅಡೆತಡೆಗಳನ್ನು ತೆಗೆದು ಹಾಕಲು ಮುಂದಾದರು.
ಬಿಜೆಪಿ ಬಂಡಾಯದ ಪರಿಣಾಮವೇನು?
ಈ ಬಂಡಾಯದ ನಂತರ ಬಿಜೆಪಿ ಹಿಂಜರಿತ ಅನುಭವಿಸುವುದೇ ಅಥವಾ ಅದರ ಕತೆ ಮುಗಿಯಿತು ಎನ್ನಬಹುದೇ? ಕೆಲವು ವೀಕ್ಷಕರು ಹೇಳುತ್ತಿರುವುದಕ್ಕೆ ವಿರುದ್ಧವಾಗಿ, ಯಾರೂ ಆ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನಿಜ, ಬಂಡಾಯದಿಂದಾಗಿ ಬಿಜೆಪಿಗೆ ನಷ್ಟವಾಗಿದೆ. ಆದರೆ – ಬಿಜೆಪಿ, ಕಾಂಗ್ರೆಸ್, ಜಿಡಿ-ಎಸ್ – ಈ ಮೂರು ಪಕ್ಷಗಳ ನಡುವೆ ಬಂಡಾಯ, ರಾಜೀನಾಮೆ ಮತ್ತು ‘ಆಯಾ ರಾಮ್, ಗಯಾ ರಾಮ್’ ರಾಜ್ಯದಲ್ಲಿ ಹೊಸದೇನಲ್ಲ. ಬಿಜೆಪಿಗೆ ಈ ಪ್ರಮಾಣದಲ್ಲಿ ಎದುರಾಗಿರುವುದು ಮಾತ್ರ ಹೊಸದು. ಆದರೆ ಬಿಜೆಪಿ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಸಾಮ-ಬೇಧ-ದಂಡ (ಐಟಿ/ಇಡಿ ದಾಳಿಗಳ ಬೆದರಿಕೆ ಇತ್ಯಾದಿ) ಇವು ಗಳಿಂದ ಬಂಡಾಯವನ್ನು ಇನ್ನೂ ನಿರ್ವಹಿಸಬಹುದು ಮತ್ತು ಹಾನಿ ನಿಯಂತ್ರಣವನ್ನು (ಉದಾ. ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸುವುದು, ಪ್ರಚಾರ ಮಾಡದಿರುವುದು) ಮಾಡಬಹುದು. ಯಾವುದೇ ಸನ್ನಿವೇಶವನ್ನು ನಿಭಾಯಿಸುವಲ್ಲಿ ಬಿಜೆಪಿ ನಾಯಕತ್ವದ ನಿರ್ದಯತೆ, ನಿಖರತೆ, ಸೂಕ್ಷ್ಮತೆ, ಮತ್ತು ಅದರ ಸುಸಜ್ಜಿತ ಚುನಾವಣಾ ಯಂತ್ರವನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಆ ಪಕ್ಷಕ್ಕೆ ಇದು ಎದುರಿಸಲಾಗದ ಸವಾಲೇನಲ್ಲ. ಬಿಜೆಪಿಯ ಹಲವು ಅಭ್ಯರ್ಥಿಗಳು ಮತ್ತು ನಾಯಕರು ಸಂಭವನೀಯ ಪ್ರತಿಕೂಲ ಪರಿಣಾಮಗಳನ್ನು ಲೆಕ್ಕಿಸದೆ, ಅನಿರೀಕ್ಷಿತವಾಗಿ ಶಿಸ್ತನ್ನು ಧಿಕ್ಕರಿಸಿ ಬಂಡಾಯವೆದ್ದಿದ್ದು, ಬಹುಶಃ ಬಿಜೆಪಿ ಪಕ್ಷದ ಸರಕಾರದ ಕಾರ್ಯವೈಖರಿಯಿಂದ ಉಂಟಾಗಿರುವ ಜನರ ಕೋಪ/ಹತಾಶೆಯ ಭಯದ ಪ್ರತಿಬಿಂಬವಾಗಿದೆ. ಬಿಜೆಪಿ ಎದುರಿಸುತ್ತಿರುವ ‘ಆಡಳಿತ-ವಿರೋಧೀ’ ಅಲೆ ಮತ್ತು ಇತರ ಸವಾಲುಗಳೊಂದಿಗೆ ಇದೂ ಒಂದು ಎಂದಷ್ಟೇ ಹೇಳಬಹುದು.
‘ಲಿಂಗಾಯತರ ದೊಡ್ಡ ನಾಯಕರಿಗೆ ಅವಮಾನ ಎಂಬ ಚರ್ಚೆಯೊಂದಿಗೆ ಬಿಜೆಪಿಯ ಲಿಂಗಾಯತ ತಳಹದಿಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ. ಆದರೆ ಲಿಂಗಾಯತರ ಅತಿ ದೊಡ್ಡ ನಾಯಕ ಯಡಿಯೂರಪ್ಪನವರಿಗೆ ಇದನ್ನು ಬಹಳ ಮಟ್ಟಿಗೆ ಪರಿಹರಿಸಲು ಸಾಧ್ಯವಾಗಬಹುದು.
ಕಾಂಗ್ರೆಸ್ ಪಕ್ಷದಲ್ಲಿ ಸಹ ಬಂಡಾಯ ಮತ್ತು ಗುಂಪುಗಾರಿಕೆ ಸವಾಲೇ ಆಗಿದೆ. ಬಿಜೆಪಿ ಭಿನ್ನಮತೀಯರಿಗೆ ಅದರ ಮುಕ್ತ ಸ್ವಾಗತವು, ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ಅದರ ಜಾತ್ಯತೀತ ಬೆಂಬಲಿಗರಿಗೆ ಇರುಸು ಮುರುಸು ಉಂಟು ಮಾಡಬಹುದು. ಮತನಷ್ಟಕ್ಕೂ ಕಾರಣವಾಗಬಹುದು ಬಿಜೆಪಿ ಬಂಡಾಯದ ನಂತರ ಸಂಭ್ರಮದಲ್ಲಿರುವ ಕಾಂಗ್ರೆಸ್, ಬಹುಶಃ ಆಮದು ಮಾಡಿಕೊಂಡ ನಾಯಕರನ್ನು ಅಸಮಾಧಾನಗೊಳಿಸಬಾರದೆಂದೇನೋ, ಕೋಮುವಾದದ ವಿರುದ್ಧ ಪ್ರಚಾರವನ್ನು ಇನ್ನಷ್ಟು ದುರ್ಬಲಗೊಳಿಸಿದೆ!! ‘ಭ್ರಷ್ಟಾಚಾರ-ವಿರೋಧಿ’ ಮತ್ತು ಇತರ ‘ಆಡಳಿತ ವಿರೋಧಿ’ ಅಂಶಗಳ ಮೇಲೆ ಸಹ ಮೊದಲಿನಷ್ಟು ಒತ್ತು ಕೊಡುತ್ತಿಲ್ಲ. ಅದರ ಅತಿಯಾದ ಆತ್ಮವಿಶ್ವಾಸ ಮತ್ತು ಆತ್ಮತೃಪ್ತಿ ಅದಕ್ಕೆ ನಷ್ಟವುಂಟು ಮಾಡಬಹುದು.
ಸ್ಪರ್ಧೆಗಳ ಸ್ವರೂಪದಲ್ಲಿ ಬಹುಶಃ ಬದಲಾವಣೆಗಳಾಗುತ್ತವೆ. ಮೊದಲು ಹೆಚ್ಚಿನ ಸ್ಥಾನಗಳಲ್ಲಿ (2018 ರಲ್ಲಿ ಅದು 88% ಆಗಿತ್ತು). ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 2018ರಲ್ಲಿದ್ದಂತೆ ನೇರಸ್ಪರ್ಧೆ ಎಂದು ಪರಿಗಣಿಸಲಾಗಿತ್ತು. ಜೆಡಿಎಸ್ ಸ್ಪರ್ಧೆ ಮಾಡಿರುವ ಮತ್ತು ಇತರ ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಲಿದೆಯೆಂದು ನಿರೀಕ್ಷಿಸಲಾಗಿತ್ತು. ಆದರೆ ಬಲಿಷ್ಠ ಭಿನ್ನಮತೀಯರು ಸ್ವತಂತ್ರ ಅಭ್ಯರ್ಥಿಗಳಾಗಿ ಅಥವಾ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧೆ ಮಾಡುವುದರಿಂದ ಬಹುಕೋನ ಸ್ಪರ್ಧೆಗಳು ಹೆಚ್ಚಾಗಬಹುದು. ಇದು ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು.
ಒಟ್ಟಿನಲ್ಲಿ ಬಿಜೆಪಿ ಬಂಡಾಯದ ಪರಿಣಾಮ ಸ್ಪರ್ಧೆ ಮತ್ತು ಫಲಿತಾಂಶಗಳ ಮೇಲೆ ಅಂದಾಜು ಮಾಡುವುದು ಕಷ್ಟ. ಇದನ್ನು ಕಾಂಗ್ರೆಸ್ ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬಿಜೆಪಿ ತೀವ್ರ ಹಿಂಜರಿತ ಅನುಭವಿಸುತ್ತಿದೆ ಅಥವಾ ಅದರ ಕತೆ ಮುಗಿಯಿತು ಎಂದು ಹಿಗ್ಗಿದರೆ ಕಾಂಗ್ರೆಸ್ಸೇ ಖಂಡಿತ ನಷ್ಟ ಅನುಭವಿಸಬಹುದು. ಅದು ಬಿಜೆಪಿಯ ಎಲ್ಲಾ ‘ಆಡಳಿತ ವಿರೋಧಿ’ ಅಂಶಗಳನ್ನು ಬಯಲಿಗೆಳೆಯುವುದರಲ್ಲಿ ಮತ್ತು ಸಕಾರಾತ್ಮಕ ಕಾರ್ಯಸೂಚಿಯನ್ನು ಪ್ರಸ್ತುತಪಡಿಸುವುದರಲ್ಲಿ ಮುಗ್ಗರಿಸಿದರೆ ಬಿಜೆಪಿ ಬಂಡಾಯ ಅದನ್ನು ರಕ್ಷಿಸಲಾರದು.