ಗುವಾಹತಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ದೊರೆತಿದೆ. ಆದರೆ, ಜೀಮೀನು ನೀಡಿದ ಬೆನ್ನಲ್ಲಿಯೇ ಅಸ್ಸಾಂ ಪೊಲೀಸ್ ಹೊಸ ಕೇಸ್ ನಲ್ಲಿ ಜಿಗ್ನೇಶ್ ಮೇವಾನಿಯನ್ನು ಬಂಧಿಸಿದೆ.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಾಲಯ ಜಾಮೀನು ನೀಡಿದ್ದು, ನಿನ್ನೆ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ಇಂದು ಜಾಮೀನು ನೀಡಲಾಗಿತ್ತು. ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಲು ಬಂದಿದ್ದ ಅಸ್ಸಾಂನ ಬರ್ಪೇಟಾ ಪೊಲೀಸರು ಯಾವ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿದೆ ಎನ್ನುವ ಮಾಹಿತಿಯನ್ನು ಈವರೆಗೂ ನೀಡಿಲ್ಲ.
ಅಸ್ಸಾಂನ ಕೊಕ್ರಜಾರ್‌ನ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಮೇವಾನಿ ವಿರುದ್ಧ ದೂರು ದಾಖಲಿಸಿದ ನಂತರ ಅಸ್ಸಾಂ ಪೊಲೀಸರ ತಂಡವು ಗುರುವಾರ ಗುಜರಾತ್‌ನ ಪಾಲನ್‌ಪುರದಿಂದ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿದ್ದರು.
ಇದನ್ನು ಓದಿ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ
ಪ್ರಧಾನಿ ಮೋದಿಯವರ ಸಾಮಾನ್ಯ ವಿಮರ್ಶಕರಾದ ಜಿಗ್ನೇಶ್ ಮೇವಾನಿ ಅವರ ಬಂಧನವನ್ನು “ಪ್ರಧಾನಿ ಕಚೇರಿ ನಿಂದ ಸೇಡಿನ ರಾಜಕೀಯ” ಎಂದು ವಿಪಕ್ಷಗಳು ಟೀಕಿಸಿದ್ದವು.
“ಮೋದಿ ಜೀ, ನೀವು ರಾಜ್ಯ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸಬಹುದು. ಆದರೆ ನೀವು ಎಂದಿಗೂ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಜಾಮೀನು ಲಭಿಸಿದ ನಂತರ ಜಿಗ್ನೇಶ್ ಮೇವಾನಿ ಮಾತನಾಡಿ ‘ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಷಡ್ಯಂತ್ರ. ಅವರು ನನ್ನ ವರ್ಚಸ್ಸನ್ನು ಹಾಳುಮಾಡಲು ಈ ರೀತಿ ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಿದ್ದಾರೆ. ಇದೇ ರೀತಿಯ ಷಡ್ಯಂತ್ರವನ್ನು ಅವರು ರೋಹಿತ್ ವೇಮುಲಾಗೆ ಮಾಡಿದ್ದರು, ಚಂದ್ರಶೇಖರ್ ಆಜಾದ್ ಅವರ ಮೇಲೂ ಷಡ್ಯಂತ್ರ ಪ್ರಯೋಗಿಸಿದ್ದರು. ಈಗ ಅವರು ನನ್ನನ್ನು ಗುರಿಯಾಗಿಸುತ್ತಿದ್ದಾರೆʼʼ ಎಂದಿದ್ದರು.
41 ವರ್ಷ ವಯಸ್ಸಿನ ಮೇವಾನಿ ಮೇಲೆ ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳಕ್ಕೆ ಸಂಬಂಧಿಸಿದ ಅಪರಾಧ, ಧಾರ್ಮಿಕ ಭಾವನೆಗಳಿ ಧಕ್ಕೆ ತಂದಿರುವುದು ಮತ್ತು ಶಾಂತಿ ಭಂಗಕ್ಕೆ ಕಾರಣವಾಗಬಹುದಾದ ಪ್ರಚೋದನೆಯ ಆರೋಪಗಳನ್ನು ಹೊರಿಸಲಾಗಿದೆ.
ಜಿಗ್ನೇಶ್ ಮೇವಾನಿ ಅವರ ಟ್ವೀಟ್‌ಗಳು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನಸಾಮಾನ್ಯರನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂಬುದು ಬಿಜೆಪಿ ಆರೋಪ.
ಜಿಗ್ನೇಶ್ ಮೇವಾನಿ ಬಂಧನದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು, 1995 ರಿಂದ ಬಿಜೆಪಿ ಆಡಳಿತ ನಡೆಸುತ್ತಿರುವ ಗುಜರಾತ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೂರು ನೀಡಿದ 24 ಗಂಟೆಗಳಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿತ್ತು.
ಹಿಂದೊಮ್ಮೆ ಕರ್ನಾಟಕದ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಜಿಗ್ನೇಶ್ ಮೇವಾನಿ, ನನಗೆ ಮೋದಿ ಯಾರು ಎಂದೇ ಗೊತ್ತಿಲ್ಲ ಎಂದು ಹೇಳಿದ್ದರು. ಪ್ರಧಾನಿ ಮೋದಿ ಚಹಾ ಮಾರಿದ ಮಾತು ಚೈಲ್ಡಿಶ್, ಜೋಕ್ ಆಫ್ ದಿ ಸಂಚೂರಿ. ಚಹಾ ಮಾರಿದ್ದಾರೋ ಇಲ್ಲವೋ ಈಗ ದೇಶ ಮಾರುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು.
ಗುಜರಾತ್ ನ ಬನಸ್ಕಾಂತದ ವಡ್ಗಾಮ್ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.