ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯ ವಿಚಾರಣೆಯಿಂದ ಕೂಡಾ ಅವರು ಹಿಂದೆ ಸರಿದಿದ್ದರು
ಅಹಮದಾಬಾದ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ತಮ್ಮ ವಿರುದ್ಧ ಹೂಡಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯಿಂದ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಸಮೀರ್ ಜೆ.ದವೆ ಅವರು ಗುರುವಾರ ಹಿಂದೆ ಸರಿದಿದ್ದಾರೆ.
ತೀಸ್ತಾ ಅವರ ವಕೀಲರು ನ್ಯಾಯಾಲಯದಲ್ಲಿ ಪ್ರಕರಣವನ್ನು ವಿಚಾರಣೆಗೆ ತಂದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದವೆ, “ಇದನ್ನು ನನ್ನ ಮುಂದೆ ಅಲ್ಲ. ಇನ್ನೊಂದು ಪೀಠಕ್ಕೆ ಸಂಭವನೀಯ ವರ್ಗಾವಣೆಗಾಗಿ ಮುಖ್ಯ ನ್ಯಾಯಮೂರ್ತಿಯ ಮುಂದೆ ಇರಿಸಿ” ಎಂದು ಹೇಳಿದ್ದಾರೆ. ಹೀಗಾಗಿ ಪ್ರಕರಣವನ್ನು ಸರಿಯಾದ ಪೀಠದ ಮುಂದೆ ತರಲು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಆದೇಶದ ಅಗತ್ಯವಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಕೂಡಾ ನ್ಯಾಯಮೂರ್ತಿ ದವೆ ಅವರು ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಇದನ್ನೂ ಓದಿ: ಪುಕ್ಕ ತೊಯಿಸಿ ಬೆಂಕಿ ನಂದಿಸುವ ತೀಸ್ತಾ
2002 ರಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ಗೋಧ್ರಾ ಗಲಭೆ ಪ್ರಕರಣದಲ್ಲಿ SIT ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ, ಗಲಭೆಯಲ್ಲಿ ಕೊಲ್ಲಲ್ಪಟ್ಟ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ 2022ರ ಜೂನ್ 24 ರಂದು ತಿರಸ್ಕರಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಅಹಮದಾಬಾದ್ ಡಿಟೆಕ್ಷನ್ ಆಫ್ ಕ್ರೈಮ್ ಬ್ರಾಂಚ್ (ಡಿಸಿಬಿ) ಹೋರಟಗಾರ್ತಿ ತೀಸ್ತಾ ಸೆಟಲ್ವಾಡ್, ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ. ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಸಂಜೀವ್ ಭಟ್ ವಿರುದ್ಧ 2002 ರ ಗುಜರಾತ್ ಗಲಭೆಯಲ್ಲಿ ಅಮಾಯಕರನ್ನು ಸಿಲುಕಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದೆ.
ತೀಸ್ತಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 468 (ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ) ಮತ್ತು 194 (ಮರಣದಂಡನೆಯ ಅಪರಾಧಕ್ಕಾಗಿ ಶಿಕ್ಷೆಯನ್ನು ಪಡೆಯುವ ಉದ್ದೇಶದಿಂದ ಸುಳ್ಳು ಪುರಾವೆಗಳನ್ನು ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದರ ನಂತರ ಸುಪ್ರೀಂ ಕೋರ್ಟ್ ತೀಸ್ತಾ ಸೆಟಲ್ವಾಡ್ ಅವರಿಗೆ ಸೆಪ್ಟೆಂಬರ್ 2022 ರಲ್ಲಿ ಮಧ್ಯಂತರ ಜಾಮೀನು ನೀಡಿತು. ಆದಾಗ್ಯೂ, ಗುಜರಾತ್ ಹೈಕೋರ್ಟ್ 2023ರ ಜುಲೈ 1 ರಂದು ಅವರ ಸಾಮಾನ್ಯ ಜಾಮೀನನ್ನು ತಿರಸ್ಕರಿಸಿತು. ಹಾಗಾಗಿ ಸೆಟಲ್ವಾಡ್ ಮಧ್ಯಂತರ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜುಲೈ 19 ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದೆ.
ವಿಡಿಯೊ ನೋಡಿ: SEP TSP : ದಲಿತರಿಗೆ ಮೀಸಲಿಟ್ಟ ಹಣದ ಮೇಲೆ ಗ್ಯಾರಂಟಿ ಕಣ್ಣು! Janashakthi Media