ಅಹಮದಾಬಾದ್: ಮಾರ್ಚ್ 5 ರಂದು ನಡೆಯಲಿರುವ ತನ್ನ ಸೋದರಳಿಯನ ಮದುವೆಯಲ್ಲಿ ಪಾಲ್ಗೊಳ್ಳಲು ಬಿಲ್ಕೀಸ್ ಬಾನೋ ಪ್ರಕರಣದ ಅಪರಾಧಿ ರಮೇಶ್ ಚಂದನಾಗೆ ಗುಜರಾತ್ ಹೈಕೋರ್ಟ್ ಶುಕ್ರವಾರ 10 ದಿನಗಳ ಪೆರೋಲ್ ನೀಡಿದೆ. ಜನವರಿ 21ರಂದು ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ 11 ಅಪರಾಧಿಗಳು ಶರಣಾದ ನಂತರ ಪೆರೋಲ್ ಪಡೆದ ಪ್ರಕರಣದ 2ನೇ ಅಪರಾಧಿ ಆಗಿದ್ದಾನೆ. ಚಂದನಾ ಕಳೆದ ವಾರ ಪೆರೋಲ್‌ಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು.
2002 ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕೀಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಅವರ ಸಣ್ಣ ಹೆಣ್ಣು ಮಗು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಕೊಂದ ಪ್ರಕರಣದಲ್ಲಿ ಚಂದನಾ ಸೇರಿದಂತೆ 11 ದುಷ್ಕರ್ಮಿಗಳನ್ನು ದೋಷಿಗಳೆಂದು ಘೋಷಿಸಲಾಗಿತ್ತು.
ಇದನ್ನೂ ಓದಿ: ಚಲೋ ದೆಹಲಿ | ರೈತ ಮುಖಂಡರ ಮೇಲೆ ಎನ್‌ಎಸ್‌ಎ ಜಾರಿ ಮಾಡಲ್ಲ ಎಂದ ಹರಿಯಾಣ ಸರ್ಕಾರ
“ಈ ಅರ್ಜಿಯ ಮೂಲಕ, ಅಪರಾಧಿ ಅರ್ಜಿದಾರನು ತನ್ನ ಸಹೋದರಿಯ ಮಗನ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಆಧಾರದ ಮೇಲೆ ಪೆರೋಲ್ ರಜೆಗಾಗಿ ಪ್ರಾರ್ಥಿಸುತ್ತಾನೆ. ಈ ಅರ್ಜಿಯಲ್ಲಿ ಒತ್ತಾಯಿಸಲಾದ ಆಧಾರಗಳನ್ನು ಪರಿಗಣಿಸಿ, ಅರ್ಜಿದಾರ ಆರೋಪಿಯನ್ನು ಹತ್ತು ದಿನಗಳ ಅವಧಿಗೆ ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ” ಎಂದು ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಸರ್ಕಾರದ ಅಫಿಡವಿಟ್ ಪ್ರಕಾರ, ಅಪರಾಧಿ ಚಂದನಾ 2008ರಲ್ಲಿ ಸೆರೆವಾಸದಿಂದ 1,198 ದಿನಗಳವರೆಗೆ ಪೆರೋಲ್ ಮತ್ತು 378 ದಿನಗಳ ಫರ್ಲೋ ಅನುಭವಿಸಿದ್ದಾನೆ.
ಇದಕ್ಕೂ ಮುನ್ನ, ಪ್ರಕರಣದ ಮತ್ತೊಬ್ಬ ಅಪರಾಧಿ ಪ್ರದೀಪ್ ಮೋಧಿಯಾ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ಹೈಕೋರ್ಟ್ ಅನುಮತಿಸಿತ್ತು. ಹೀಗಾಗಿ ಫೆಬ್ರವರಿ 7 ರಿಂದ 11 ರವರೆಗೆ ಗೋಧ್ರಾ ಜೈಲಿನಿಂದ ಆತನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಬಿಲ್ಕೀಸ್ ಬಾನೊ ಪ್ರಕಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ 11 ಅಪರಾಧಿಗಳಿಗೆ 2022ರ ಆಗಸ್ಟ್ ತಿಂಗಳಲ್ಲಿ ಜೈಲಿನಿಂದ ಅಕಾಲಿಕ ಬಿಡುಗಡೆಯನ್ನು ನೀಡಲಾಯಿತ್ತು. ಜೈಲಿನಲ್ಲಿ ಅವರ ‘ಉತ್ತಮ ನಡತೆ’ಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ 1992 ರ ನೀತಿಗೆ ಅನುಗುಣವಾಗಿ ಅವರಿಗೆ ಕ್ಷಮಾದಾನ ನೀಡಲಾಗಿತ್ತು. ಆದರೆ ಗುಜರಾತ್ ಸರ್ಕಾರದ ಈ ನಿರ್ಧಾರ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಆದರೆ ಇದರ ವಿರುದ್ಧ ಸಂತ್ರಸ್ತೆ ಬಿಲ್ಕೀಸ್ ಬಾನೂ ಸೇರಿದಂತೆ ಇತರ ಹೋರಾಟಗಾರರು ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, 2002ರ ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದ ಕಾರಣ, ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂಬ ತೀರ್ಪನ್ನು ಜನವರಿ 8 ರಂದು ನೀಡಿದ್ದು, ಎಲ್ಲಾ 11 ಅಪರಾಧಿಗಳಿಗೆ ನೀಡಿದ್ದ ಕ್ಷಮಾದಾನವನ್ನು ರದ್ದುಗೊಳಿಸಿತ್ತು. ಅಪರಾಧಿಗಳು ಎರಡು ವಾರಗಳಲ್ಲಿ ಜೈಲಿಗೆ ಹಿಂತಿರುಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
14 ವರ್ಷಗಳ ಕಾಲ ಜೈಲಿನಲ್ಲಿದ್ದ ಅಪರಾಧಿಗಳು 2022 ರ ಸ್ವಾತಂತ್ರ್ಯ ದಿನದಂದು ಗೋಧ್ರಾ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಈ ವೇಳೆ ಬಿಜೆಪಿಯನ್ನು ಬೆಂಬಲಿಸುವ ಮಹಿಳೆಯರು ಅವರನ್ನು ಜೈಲಿನ ಹೊರಗೆ ಸಿಹಿ ತಿನಿಸಿ, ಹಾರ ಹಾಕಿ ಸ್ವಾಗತಿಸಿದ್ದರು. ಅಷ್ಟೆ ಅಲ್ಲದೆ, ಬಿಜೆಪಿಯ ಸಹಸಂಘಟನೆ ವಿಎಚ್‌ಪಿ ಕೂಡಾ ಅವರಿಗೆ ಸನ್ಮಾನ ಮಾಡಿತ್ತು. ಅದಾಗ್ಯೂ, ಸುಪ್ರೀಂಕೋರ್ಟ್ ಅವರ ಕ್ಷಮಾದಾನ ರದ್ದುಗೊಳಿಸಿದ್ದರಿಂದ ಎಲ್ಲಾ 11 ಅಪರಾಧಿಗಳು ಜನವರಿ 21 ರಂದು ಗೋಧ್ರಾ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದರು.
ವಿಡಿಯೊ ನೋಡಿ: 🔴 Liveಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ : 10ನೇ ದಿನ, ಫೆಬ್ರವರಿ 23