ಬಹು ಚರ್ಚಿತ ಏಕರೂಪ ನಾಗರಿಕ ಸಂಹಿತೆಯ ವಿಚಾರಗಳು ಹಲವು ವ್ಯಾಖ್ಯಾನಗಳನ್ನು ಒಳಗೊಂಡಿದ್ದು, ಅದರ ಸಾಧಕ ಬಾಧಕಗಳು ಚರ್ಚೆಯಲ್ಲಿವೆ. ನ್ಯಾಯಾಲಯದಲ್ಲಿಯೂ ವಿಚಾರಣೆಯ ಹಂತದಲ್ಲಿವೆ. ಇದೇ ಸಂದರ್ಭದಲ್ಲಿ ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಗಳು ಘೋಷಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಗುಜರಾತ್ ರಾಜ್ಯ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿ ಸಮಿತಿಯನ್ನು ರಚನೆ ಮಾಡಿದೆ.
ಚುನಾವಣೆಗೂ ಮುಂಚಿತವಾಗಿಯೇ ಬಿಜೆಪಿ ಸರ್ಕಾರ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯ ಪ್ರತಿಯೊಂದು ಅಂಶವನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಹರ್ಷ ಸಾಂಘ್ವಿ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಗೃಹ ಸಚಿವ ಹರ್ಷ್ ಸಾಂಘ್ವಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿ ಸಂಬಂಧ ಸಮಿತಿ ರಚಿಸುವ ಪ್ರಸ್ತಾವನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಸಮಿತಿಯು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿರುತ್ತದೆ ಮತ್ತು ಮೂರರಿಂದ ನಾಲ್ಕು ಸದಸ್ಯರನ್ನು ಹೊಂದಿರುತ್ತದೆ ಎಂದು ವರಿದಿಯಾಗಿದೆ.
ಚುನಾವಣೆ ಗೆಲುವಿಗಾಗಿ ಹಲವು ಪ್ರಯೋಗಗಳನ್ನು ಮುಂದು ಮಾಡುತ್ತಿರುವ ಬಿಜೆಪಿ ಪಕ್ಷವು, ಮರಳಿ ಅಧಿಕಾರಕ್ಕೆ ಬರಬೇಕೆಂದು, ಚುನಾವಣಾ ಅಬ್ಬರ ಆರಂಭಕ್ಕೂ ಮುನ್ನ ಮತ ಧ್ರುವೀಕರಣಕ್ಕೆ ಸದ್ದಿಲ್ಲದೇ ಕೈಹಾಕಿದೆ. ಬಿಜೆಪಿಯ ಮೂಲ ಅಜೆಂಡಾಗಳಲ್ಲಿ ಒಂದಾದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ಕೈಗೊಂಡಿದೆ. ಈ ಮೂಲಕ ಬಿಜೆಪಿ ಪಕ್ಷವು ಮತ್ತೊಮ್ಮೆ ಧರ್ಮಾಧಾರಿತ ಅಸ್ತ್ರ ಪ್ರಯೋಗಿಸಿದೆ.
ವಿಧಾನಸಭೆ ಚುನಾವಣೆಯ ದಿನಾಂಕಗಳು ಘೋಷಣೆಯಾದ ಕೂಡಲೇ ಗುಜರಾತ್‌ನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ಇದಕ್ಕೂ ಮೊದಲು, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಬಿಜೆಪಿ ಆಡಳಿತದ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಎರಡು ಪಕ್ಷಗಳು ವಿರೋಧಿಸುವ ಸ್ಥಿತಿಯಲ್ಲಿಲ್ಲ. ಬದಲಾಗಿ, ಸಂವಿಧಾನದ ಪ್ರಕಾರ ಈ ಕಾಯ್ದೆ ಜಾರಿ ಆಗಬೇಕಿರೋದು ಸಂಸತ್ನಲ್ಲಿ ಅಂತ ಅಭಿಪ್ರಾಯ ಪಟ್ಟಿವೆ. ಗುಜರಾತ್ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ ಅಂತ ಕಾಂಗ್ರೆಸ್, ಎಎಪಿ ವ್ಯಾಖ್ಯಾನಿಸುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲಿನ ಸಂಘ ಪರಿವಾರದ ಕಾರ್ಯಸೂಚಿಯಾದ ಏಕರೂಪ ನಾಗರಿಕ ಸಂಹಿತೆ ಈವರೆಗೂ ಜಾರಿಗೆ ತರಲಾಗದಿರುವುದರಿಂದ, ಹಿಂದೂ ಮತಗಳ ಕ್ರೂಢೀಕರಣಕ್ಕಾಗಿ ರಾಜ್ಯ ಸರ್ಕಾರದ ಮೂಲಕ ಅಸ್ತ್ರಗಳನ್ನು ಪ್ರಯೋಗಿಸಲಾಗುತ್ತಿದೆ.
ಈ ಹಿಂದೆ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಬಿಜೆಪಿ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಯುಸಿಸಿಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದವು.