-
ಗುಜರಾತ್‌ನ 170 ಪುರಸಭೆಗಳ ಪೈಕಿ 68 ಪುರಸಭೆಗಳಿಂದ ಮಾಹಿತಿ ಸಂಗ್ರಹ
-
ಸರಕಾರ ಹೇಳಿರುವ ಸಾವಿನ ಸಂಖ್ಯೆಗಿಂತ 27 ಪಟ್ಟು ಹೆಚ್ಚು
-
ಕೋವಿಡ್ ಸಾವಿನ ಎಣಿಕೆಯ ಮೇಲೆ ಬೆಳಕು ಚೆಲ್ಲಿರುವ ವರದಿ
ಭಾರತದ ಇತರೆ ರಾಜ್ಯಗಳ ರೀತಿಯಲ್ಲಿಯೇ ಗುಜರಾತ್‌ನ ಎಲ್ಲ ಪಟ್ಟಣಗಳಲ್ಲಿಯೂ ಕೋವಿಡ್-19ರ ಎರಡನೇ ಅಲೆ ತೀವ್ರವಾಗಿತ್ತು. ಸಾವಿನ ಸಂಖ್ಯೆಯೂ ಗರಿಷ್ಠ ಮಟ್ಟದಲ್ಲಿಯೇ ಇತ್ತು. ಸಾವಿನ ನಿಖರ ದತ್ತಾಂಶ ಇರಿಸಿಕೊಳ್ಳಬೇಕು ಎಂದು ಗುಜರಾತ್ ಹೈಕೋರ್ಟ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. 2020ರಲ್ಲಿ ಆರಂಭಗೊಂಡ ಕೋವಿಡ್ ಸಾಂಕ್ರಾಮಿಕದ ಎರಡು ಅಲೆಗಳ ನಡುವಣ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 10,078 ಮಾತ್ರ ಎಂದು ಸರ್ಕಾರದ ವರದಿ ಹೇಳುತ್ತಿದೆ. ಕೋವಿಡ್ ಬಿಕ್ಕಟ್ಟನ್ನು ಗುಜರಾತ್ ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಸರಕಾರ ಬೆನ್ನು ತಟ್ಟಿದ್ದರು. ಆದರೆ ಗುಜರಾತ್‌ನಲ್ಲಿ ಕೋವಿಡ್ ಎರಡು ಅಲೆಯಲ್ಲಿ ಎಷ್ಟುಜನ ತೀರಿಕೊಂಡಿದ್ದಾರೆ. ಸರಕಾರ ಮುಚ್ಚಿಟ್ಟಿರುವ ದತ್ತಾಂಶಗಳೇನು ಎಂಬ ಅಂಶವನ್ನು “ದಿ ವೈರ್” ಹೊರಹಾಕಿದೆ.
ದಿ ರಿಪೋರ್ಟರ್ಸ್ ಕಲೆಕ್ಟೀವ್ ನ ಶ್ರೀಗಿರೀಶ್ ಜಾಲಿಹಾಳ್, ನಿತಿನ್ ಸೇಠಿ ಮತ್ತು ತಪಸ್ಯ (ಮೂವರು ಸ್ವತಂತ್ರ ಪತರ್ಕರ್ತರು) ರವರು ತನಿಖೆ ನಡೆಸಿ ಗುಜರಾತ್ ನ ಕೋವಿಡ್ ಸಾವುಗಳು ಮತ್ತು ಸರಕಾರ ಮುಚ್ಚಿಟ್ಟ ಲೆಕ್ಕವನ್ನು ಬಿಚ್ಚಿಟ್ಟಾದ್ದಾರೆ. ಆ ಮಾಹಿತಿಗಳನ್ನು ನಾವು ಈ ಕೆಳಗಿನಂತೆ ನೋಡಬಹುದಾಗಿದೆ.
Exclusive | Gujarat state has undercounted its Covid death toll by at least 27 times, shows thousands of pages of records accessed by @reporters_co
I report with @tapasya_umm and @nit_set https://t.co/O614VDWlww
— Shreegireesh Jalihal (@shreegireesh) August 17, 2021
ಈ ಮೂವರು ನಡೆಸಿದ ತನಿಖೆಯಿಂದ ಹಲವಾರು ಆತಂಕಕಾರಿ ವಿಷಯಗಳು ಹೊರಬಂದಿವೆ. ಗುಜರಾತ್‌ನ 170 ಪುರಸಭೆಗಳ ಪೈಕಿ, 68 ಪುರಸಭೆಗಳಲ್ಲಿ ದಾಖಲಾದ ಮರಣ ದಾಖಲಾತಿಗಳು ಪಡೆದು ಅಧ್ಯಯನ ನಡೆಸಿದ್ದಾರೆ. ಮೃತಪಟ್ಟವರ ಮಾಹಿತಿಯನ್ನು ಒದಗಿಸುವ ಈ ದಾಖಲಾತಿಗಳನ್ನು ಮೊದಲಿಗೆ ಅಧಿಕಾರಿಗಳೇ ಭರ್ತಿ ಮಾಡಿದ್ದಾರೆ. ಇವೆಲ್ಲವೂ ಜನವರಿ 2019ರಿಂದ ಏಪ್ರಿಲ್ 2021ರ ಅವಧಿಯಲ್ಲಿ ಕೈಯಿಂದ ಬರೆದವುಗಳಾಗಿದ್ದು, ಈ ದಾಖಲಾತಿಯು ಸಾವಿರಾರು ಪುಟಗಳಲ್ಲಿದೆ.
ಇದನ್ನೂ ಓದಿ : ಕೋವಿಡ್ ನಿರ್ವಹಣೆ : ಮೃತರ ವಿಚಾರದಲ್ಲಿ ಸುಳ್ಳು ಹೇಳಿ, ತನ್ನದೆ ಇಲಾಖೆಯ ಅಂಕಿ ಅಂಶಗಳಿಂದ ಬೆತ್ತಲಾದ ಗುಜರಾತ್ ಮಾಡೆಲ್
ಲಭ್ಯವಾದ ಈ ದಾಖಲೆಯ ಪ್ರಕಾರ, 2019ರ ಮಾರ್ಚ್‌ನಿಂದ 2020ರ ಏಪ್ರಿಲ್ ಅವಧಿಗೆ ಹೋಲಿಸಿದರೆ 2020ರ ಮಾರ್ಚ್ ಮತ್ತು 2021ರ ಏಪ್ರಿಲ್ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆಯು ಬಹಳ ಹೆಚ್ಚು. ಹಿಂದಿನ ವರ್ಷದಲ್ಲಿ ಸಂಭವಿಸಿದ್ದಕ್ಕಿಂತ, 16,892 ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗಿವೆ. ಈ 68 ಪುರಸಭೆಗಳ ವ್ಯಾಪ್ತಿಯಲ್ಲಿನ ಜನಸಂಖ್ಯೆಯು, ರಾಜ್ಯದ ಜನಸಂಖ್ಯೆಯ ಶೇ 6ರಷ್ಟು ಇದೆ. ರಾಜ್ಯದ ಜನಸಂಖ್ಯೆಯು 6.03 ಕೋಟಿ. ಪುರಸಭೆಯಲ್ಲಿನ ಸಾವುಗಳ ಸಂಖ್ಯೆಯನ್ನು ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ, ಕೋವಿಡ್ ಸಾಂಕ್ರಾಮಿಕದಿಂದ, ಕನಿಷ್ಠ ಪಕ್ಷ 2.81 ಲಕ್ಷದಷ್ಟು ಹೆಚ್ಚುವರಿ ಸಾವುಗಳು ಆಗಿರಬೇಕು. ಈ ಸಂಖ್ಯೆಯು, ಗುಜರಾತ್ ರಾಜ್ಯ ಸರ್ಕಾರವು ಹೇಳಿರುವ ಸಾವಿನ ಸಂಖ್ಯೆಗಿಂತ 27 ಪಟ್ಟು ಹೆಚ್ಚು.
ಸಾಮಾನ್ಯ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಎಲ್ಲ ಸಾವುಗಳು ಕೋವಿಡ್-19 ನಿಂದಲೇ ಆದಂಥವುಗಳು ಎಂದು ಹೇಳುವುದು ಕಷ್ಟ. ಆದರೆ, ಆ ಸಾವುಗಳು ಸಾಂಕ್ರಾಮಿಕ ಅಥವಾ ಅದರಿಂದಾಗಿ ಉಂಟಾದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ವ್ಯತ್ಯಯದಿಂದ ಆದಂಥವು ಎಂಬ ಮಾಹಿತಿಯನ್ನು ತಜ್ಷರು ಬಿಚ್ಚಿಟ್ಟಿದ್ದಾರೆ.
ಗುಜರಾತ್‌ನ ಹೆಚ್ಚುವರಿ ಸಾವಿನ ಸಂಖ್ಯೆಯ ವ್ಯಾಪ್ತಿ ಸೀಮಿತ ಎಂದೇ ಹೇಳಬೇಕು. ಏಕೆಂದರೆ, ಅಧ್ಯಯನಕ್ಕೆ ಆಯ್ದುಕೊಂಡ ಪುರಸಭೆಗಳಿಂದ ಪಡೆದ ದತ್ತಾಂಶವು ಗ್ರಾಮೀಣ ಪ್ರದೇಶದ ಮಾಹಿತಿಯನ್ನು ಒಳಗೊಂಡಿಲ್ಲ. ಒಟ್ಟು ಜನಸಂಖ್ಯೆಯ ಶೇ 57ರಷ್ಟು ಜನರು ಗ್ರಾಮೀಣ ಪ್ರದೇಶದವರಾಗಿದ್ದು, ಅವರಿಗೆ ಆರೋಗ್ಯ ಸೌಕರ್ಯವು ಕನಿಷ್ಠ ಪ್ರಮಾಣದಲ್ಲಿ ಮಾತ್ರ ಲಭ್ಯವಿದೆ. ಮೂರು ಪುರಸಭೆಗಳಲ್ಲಿ ಮಾತ್ರ ಮೇ ಅಂತ್ಯದವರೆಗಿನ ಮಾಹಿತಿಯು ದಾಖಲಾಗಿದ್ದರಿಂದ, 2021 ಮೇ ತಿಂಗಳ ಅಂಕಿ-ಅಂಶಗಳನ್ನು ಕೈಬಿಡಲಾಗಿದೆ. ಮತ್ತು ಈ ತಿಂಗಳಲ್ಲಿನ ಸಾವಿನ ಸಂಖ್ಯೆ ಏಪ್ರಿಲ್‌ಗಿಂತ ಹೆಚ್ಚು ಇತ್ತು ಎಂಬುದನ್ನು ಸರ್ಕಾರಿ ಅಂಕಿ-ಅಂಶಗಳೂ ಹೇಳುತ್ತಿವೆ.
2021ರ ಏಪ್ರಿಲ್ ತಿಂಗಳೊಂದರಲ್ಲೇ ರಾಜ್ಯದ ಶೇ 6 ರಷ್ಟು ಜನಸಂಖ್ಯೆಯು ಇರುವ ಪ್ರದೇಶದಲ್ಲಿ 10,238 ಹೆಚ್ಚುವರಿ ಸಾವುಗಳಾಗಿವೆ. ಆದರೆ, ಸರ್ಕಾರವು ಇಡೀ ಸಾಂಕ್ರಾಮಿಕದ ಅವಧಿಯಲ್ಲಿ ರಾಜ್ಯದಾದ್ಯಂತ ತೋರಿಸಿರುವ ಅಧಿಕೃತ ಸಾವಿನ ಸಂಖ್ಯೆ ಕೇವಲ 10,078. ಈ ವಿಧಾನದಲ್ಲಿ ಹೇಳುವುದಾದರೆ, ರಾಜ್ಯದಾದ್ಯಂತ ಏಪ್ರಿಲ್ ಒಂದೇ ತಿಂಗಳಲ್ಲಿ 1.71 ಲಕ್ಷ ಹೆಚ್ಚುವರಿ ಸಾವುಗಳಾಗಿವೆ. ಕೊರೊನಾ ವೈರಸ್‌ನ ಅಲೆ ತೀವ್ರವಾಗಿದ್ದ ಮೇ ಮತ್ತು ಜೂನ್ ತಿಂಗಳಲ್ಲಿನ ಸಾವಿನ ಸಂಖ್ಯೆ ಇನ್ನಷ್ಟೇ ಲಭ್ಯವಾಗಬೇಕಿದೆ.
ಎರಡು ತಿಂಗಳಲ್ಲಿ 1,161 ಅಂತ್ಯ ಸಂಸ್ಕಾರಗಳು ಇಲ್ಲಿನ ಎರಡು ಚಿತಾಗಾರಗಳಲ್ಲಿ ನಡೆದಿವೆ. ಈ ಚಿತಾಗಾರಗಳಲ್ಲಿ ನಡೆಸಬಹುದಾಗಿದ್ದ ಅಂತ್ಯಸಂಸ್ಕಾರದ ಗರಿಷ್ಠ ಸಂಖ್ಯೆ ಅದು. ಹಾಗಾಗಿ ಉಳಿದ ದೇಹಗಳನ್ನು ಹತ್ತಿರದ ಗ್ರಾಮಗಳ ಚಿತಾಗಾರಗಳಿಗೆ ಕಳುಹಿಸಲಾಗಿದೆ. ಹಾಗೆಯೇ ಇಲ್ಲಿನ ಮುಸ್ಲಿಂ ಸಮಾಧಿಸ್ಥಳದಲ್ಲಿ ನೂರು ಮಂದಿಯನ್ನು ದಫನ ಮಾಡಲಾಗಿದೆ. ಹಲವು ದೇಹಗಳು ಇದ್ದುದರಿಂದ ಜೆಸಿಬಿಗಳನ್ನು ತಂದು ಗುಂಡಿ ತೋಡಲಾಗಿತ್ತು.
ಜಿಲ್ಲಾಡಳಿತ ನೀಡಿರುವ ಸಾವಿನ ಲೆಕ್ಕವೂ ನಿಜವನ್ನು ಹೇಳುತ್ತಿಲ್ಲ. ಉದಾಹರಣೆಗೆ, ಸೌರಾಷ್ಟ್ರ ಪ್ರಾಂತದ ಸುರೇಂದ್ರನಗರ ಜಿಲ್ಲೆ. ಅದರ ಜನಸಂಖ್ಯೆ 17.56 ಲಕ್ಷ (2011ರ ಜನಗಣತಿ ಪ್ರಕಾರ). ಸರ್ಕಾರದ ಪ್ರಕಾರ, ಆ ಜಿಲ್ಲೆಯಲ್ಲಿ ಕೋವಿಡ್-19ನಿಂದ ಮೃತಪಟ್ಟವರು 136 ಮಂದಿ ಮಾತ್ರ. ಆದರೆ, ಆ ಜಿಲ್ಲೆಯ ಶೇ 14ರಷ್ಟು ಜನಸಂಖ್ಯೆ ಇರುವ ಪುರಸಭೆಯೊಂದರ ಮರಣ ನೋಂದಣಿ ಪುಸ್ತಕ ಹೇಳುವ ಪ್ರಕಾರ, ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಅಲ್ಲಿ 1,210 ಹೆಚ್ಚುವರಿ ಸಾವುಗಳಾಗಿವೆ! ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇದ್ದರೂ, ಭಾರತದಲ್ಲಿ ಕೋವಿಡ್-19ನಿಂದ ಆದ ಬಹಳಷ್ಟು ಸಾವುಗಳು ದಾಖಲಾಗಿಲ್ಲ ಎಂಬುದು ತೋರುತ್ತದೆ; ಇದಕ್ಕೆ ಹಲವು ಕಾರಣಗಳು ಇರಬಹುದು. ಕೆಲವು ಪ್ರಕರಣಗಳಲ್ಲಿ, ಕೋವಿಡ್‌ನಿಂದ ಮೃತಪಟ್ಟವರ ಮೇಲೆ ನಿಗಾ ವಹಿಸದೇ ಇರುವುದು ಕಾರಣವಾಗಿರಬಹುದು’ ಎನ್ನುತ್ತಾರೆ, ಲಂಡನ್‌ನ ಮಿಡಲ್‌ಎಸೆಕ್ಸ್ ವಿಶ್ವವಿದ್ಯಾಲಯದ ಗಣಿತವಿಜ್ಞಾನಿ ಮುರಾದ್ ಬನ್ಜಿ.
ಕೆಲವು ರಾಜ್ಯ ಸರ್ಕಾರಗಳು, ಕೋವಿಡ್-19 ಮರಣ ದಾಖಲೆಯ ಮಾರ್ಗಸೂಚಿಯನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಿವೆ ಎಂದು ತೋರುತ್ತದೆ. ಡೆತ್ ಆಡಿಟ್ ಸಮಿತಿಯು, ಬೇರೆ ಕಾಯಿಲೆಯಿಂದ ಮೃತಪಟ್ಟ ಕೋವಿಡ್ ರೋಗಿಗಳ ಸಾವನ್ನು ಅಧಿಕೃತ ಅಂಕಿ-ಸಂಖ್ಯೆಯಿಂದ ಹೊರಗಿಟ್ಟಿರಬಹುದು. ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಂದ ಇಂಥದೇ ವರದಿಗಳು ಬಂದಿವೆ ಎಂದೂ ಅವರು ಹೇಳಿದ್ದಾರೆ.
ಮರಣ ದಾಖಲಾತಿಗೆ ಅಪೂರ್ಣ ಮಾಹಿತಿ ನೀಡುವುದು, ಸಾವಿನ ನಿಖರ ಕಾರಣ ನಮೂದಿಸದೇ ಇರುವುದು ಸೇರಿದಂತೆ ರಾಜಕೀಯ ಕಾರಣಕ್ಕಾಗಿ ಮಾಹಿತಿಯನ್ನು ಮುಚ್ಚಿಡುವುದರಿಂದ ಭಾರತದಲ್ಲಿ ಕೋವಿಡ್ ಸಂಬಂಧಿ ಸಾವುಗಳ ನಿಖರ ಲೆಕ್ಕ ದೊರೆಯುವುದೇ ಅಸಾಧ್ಯ. ಹೀಗಾಗಿ, ಕೋವಿಡ್-19 ಸಂಬಂಧಿ ಸಾವುಗಳ ಬಗ್ಗೆ ಸರ್ಕಾರದ ಮಾಹಿತಿ ಲಭ್ಯವಾಗದೇ ಹೋದಾಗ, ಜಾಗತಿಕವಾಗಿ ಶಿಫಾರಸು ಮಾಡಲಾದ ‘ಹೆಚ್ಚುವರಿ ಸಾವುಗಳ’ ದತ್ತಾಂಶವನ್ನು ಬಳಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದರಿಂದ ಆಗಿರುವ ಹಾನಿಯ ಪ್ರಮಾಣ ಎಷ್ಟು ಎಂಬುದು ವೇದ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.
ಪುರಸಭೆಗಳಿಂದ ಪಡೆದ ದತ್ತಾಂಶ ಆಧರಿಸಿ ಪಡೆದಿರುವ ಫಲಿತಾಂಶವನ್ನು ಮರುಪರಿಶೀಲಿಸುವುದಕ್ಕಾಗಿ, ಬೋಟಾದ್ ಜಿಲ್ಲೆಯ ಪುರಸಭೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳೆಲ್ಲದರಿಂದ ಮರಣ ದಾಖಲಾತಿಯನ್ನು ವರದಿಗಾರರು ಪಡೆದುಕೊಂಡಿದ್ದಾರೆ. ಈ ಜಿಲ್ಲೆಯಲ್ಲಿ ಕೋವಿಡ್ ಸಂಬಂಧಿ ಸಾವುಗಳು 42 ಎಂದು ಸರ್ಕಾರ ಹೇಳಿದೆ. ಆದರೆ, ಪಡೆದಿದ್ದ ಮರಣ ದಾಖಲಾತಿಗಳ ಪ್ರಕಾರ ಆ ಜಿಲ್ಲೆಯಲ್ಲಿ ಮಾರ್ಚ್ 2020- ಜೂನ್ 2021ರ ಅವಧಿಯಲ್ಲಿ ವರದಿಯಾದ ಹೆಚ್ಚುವರಿ ಸಾವಿನ ಸಂಖ್ಯೆ 3,117. ಈ ಸಂಖ್ಯೆಯು, ಸರ್ಕಾರ ನೀಡಿದ ಅಧಿಕೃತ ಸಂಖ್ಯೆಗಿಂತ 74 ಪಟ್ಟಗಳಿಗಿಂತಲೂ ಹೆಚ್ಚು ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಇದನ್ನು ಖಚಿತ ಪಡಿಸುವ ಸಾಕ್ಷಿಗಳನ್ನು ತನಿಖಾ ತಂಡದ ವರದಿಗಾರರು ನೀಡಿದ್ದು, ಗುಜರಾತ್ ನಲ್ಲಿ ಸಾವಿನ ಭೀಕರತೆ ಹೇಗಿತ್ತು ಎಂದರೆ, ಗುಜರಾತ್‌ನ ಅಮ್ರೇಲಿ ಪಟ್ಟಣದಲ್ಲಿರುವ ಎರಡು ಚಿತಾಗಾರಗಳಲ್ಲಿ ಒಂದು ಕೈಲಾಸ ಮುಕ್ತಿಧಾಮ. ಅದರಲ್ಲಿ ನಾಲ್ಕು ಕುಂಡಗಳಿವೆ. ಆ ನಾಲ್ಕು ಕುಂಡಗಳು ಸತತವಾಗಿ ಮೃತದೇಹವನ್ನು ಸುಟ್ಟ ಪರಿಣಾಮ ಹಾಗೂ ನಿರಂತರ ಬೆಂಕಿಯಿಂದಾಗಿ ಕಬ್ಬಿಣದ ಚೌಕಟ್ಟು ಕರಗಿ ಹೋಗಿದೆ. ‘ಒಂದು ತಿಂಗಳ ಕಾಲ ದಿನದ 24 ಗಂಟೆಯೂ ಚಿತೆ ಉರಿಯುತ್ತಲೇ ಇತ್ತು’ ಎಂದು ಚಿತಾಗಾರದಲ್ಲಿ ಸ್ವಯಂಪ್ರೇರಿತರಾಗಿ ಕೆಲಸ ಮಾಡುವ ಸ್ಥಳೀಯ ರೈತ ಮಗನ್‌ಭಾಯ್ ಹೇಳಿರುವುದು ಗುಜರಾತ್‌ನ ಕೋವಿಡ್ ಸಾವಿನ ಲೆಕ್ಕವನ್ನು ತೆರೆದಿಡುತ್ತದೆ.