ಮಾರ್ಬಿ: 16 ದಿನಗಳ ಸಂಬಳ ಕೇಳಿದ್ದಕ್ಕೆ ತನ್ನ ಮಾಜಿ ಉದ್ಯೋಗಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳಾ ಉದ್ಯಮಿ, ಅವರ ಸಹೋದರ ಮತ್ತು ಅವರ ನಾಲ್ವರು ಉದ್ಯೋಗಿಗಳ ವಿರುದ್ಧ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಕಿ ಇರುವ ವೇತನವನ್ನು ಕೇಳಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ ಆರೋಪಿ ಮಹಿಳೆಯು, ದಲಿತ ಯುವಕ ತನ್ನ ಬಾಯಿಯಲ್ಲಿ ಪಾದರಕ್ಷೆಗಳನ್ನು ಹಿಡಿದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಅರೋಪಿಗಳಾದ ಉದ್ಯಮಿ ವಿಭೂತಿ ಪಟೇಲ್, ಆಕೆಯ ಸಹೋದರ ಓಂ, ಸಂಸ್ಥೆಯ ಮ್ಯಾನೇಜರ್ ಪರೀಕ್ಷಿತ್ ಪಟೇಲ್ ಮತ್ತು ಇತರ ಮೂವರು ದಲಿತ ಯುವಕನನ್ನು 21 ವರ್ಷದ ನಿಲೇಶ್ ದಲ್ಸಾನಿಯಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್ ಹೇಳಿದೆ. ಆರೋಪಿಗಳು ತನ್ನನ್ನು ಕಚೇರಿಯ ಟೆರೇಸ್‌ಗೆ ಎಳೆದೊಯ್ದು ಬೆಲ್ಟ್‌ನಿಂದ ಥಳಿಸಿದ್ದಾರೆ ಮತ್ತು ಒದ್ದಿದ್ದಾರೆ ಎಂದು ದಲ್ಸಾರಿಯಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರದರ್ಶನ ಬೇಡ ಎಂದರೂ ಪಟ್ಟು ಹಿಡಿದು ಹುತಾತ್ಮ ಸೈನಿಕನ ತಾಯಿಯ ಫೋಟೋ ಕ್ಲಿಕ್ ಮಾಡಿದ ಬಿಜೆಪಿ ಸಚಿವ | ರಣಹದ್ದು ಎಂದ ಕಾಂಗ್ರೆಸ್
“ವಿಭೂತಿ ಪಟೇಲ್ ತನ್ನ ಚಪ್ಪಲಿಯನ್ನು ನನ್ನ ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವಂತೆ ಮತ್ತು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು. ಇದರ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದರೆ ಅಥವಾ ರಾವಪುರ ರಸ್ತೆಯಲ್ಲಿ (ಕಂಪನಿ ಇರುವ ಸ್ಥಳದಲ್ಲಿ) ನನ್ನನ್ನು ಕಂಡರೆ ನನ್ನನ್ನು ಮುಗಿಸುತ್ತೇನೆ ಎಂದು ನನಗೆ ಬೆದರಿಕೆ ಹಾಕಿದ್ದಾರೆ” ಎಂದು ದಲ್ಸಾನಿಯಾ ಅವರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.
ತಾನು ತಿಂಗಳಿಗೆ 12 ಸಾವಿರ ರೂ. ಸಂಬಳ ಗೊತ್ತು ಮಾಡಿಸಿ ನವೆಂಬರ್ 2 ರಂದು ರಾಣಿಬಾ ಇಂಡಸ್ಟ್ರೀಸ್‌ಗೆ ಉದ್ಯೋಗಕ್ಕೆ ಸೇರಿದ್ದೆ ಎಂದು ದಲ್ಸಾನಿಯಾ ಅವರು ಹೇಳಿದ್ದಾರೆ. ಆದರೆ ಕೆಲಸಕ್ಕೆ ಸೇರಿದ ಹದಿನಾರು ದಿನಗಳ ನಂತರ ವಿಭೂತಿ ಅವರು ತನ್ನನ್ನು ಕೆಲಸ ಬಿಡುವಂತೆ ಕೇಳಿಕೊಂಡರು. ಆದರೆ ಅಷ್ಟು ದಿನ ದುಡಿದ ಬಾಕಿಯನ್ನು ಕಂಪನಿಯು ಪಾವತಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ತಿಂಗಳ ಕೊನೆಯ ನಂತರ ದಲ್ಸಾನಿಯಾ ಅವರು ವಿಭೂತಿ ಪಟೇಲ್ ಅವರಿಗೆ ಬಾಕಿ ವೇತನವನ್ನು ನೀಡಲು ಸಂಪರ್ಕಿಸಿದ್ದಾರೆ. ಆದರೆ ವಿಭೂತಿ ಇದಕ್ಕೆ ಪ್ರತಿಕ್ರಿಯಿಸಲಿಲ್ಲ ಎಂದು ವರದಿಯಾಗಿದೆ. ಹಲ್ಲೆಯ ನಂತರ ದಲ್ಸಾನಿಯಾ ಅವರು ಮೋರ್ಬಿಯ GMERS ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ವಿಭೂತಿ ಪಟೇಲ್, ಅಲಿಯಾಸ್ ರಾನಿಬಾ, ಮೊರ್ಬಿಯಲ್ಲಿ ಟೈಲ್ಸ್ ತಯಾರಿಕೆ ಮತ್ತು ರಫ್ತು ಮಾಡುವ ರಾಣಿಬಾ ಇಂಡಸ್ಟ್ರೀಸ್ ಅನ್ನು ನಡೆಸುತ್ತಿದ್ದಾರೆ ಎಂದು ವರದಿ ಹೇಳಿವೆ.
ವಿಡಿಯೊ ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?