ಗುಜರಾತ್ | ಶಾಲಾ ಪಠ್ಯಕ್ರಮಕ್ಕೆ ‘ಭಗವದ್ಗೀತೆ’ ಸೇರ್ಪಡೆ

ಗಾಂಧಿನಗರ: ವಿದ್ಯಾರ್ಥಿಗಳು ಭಾರತದ ಸಾಂಸ್ಕೃತಿಕ ಪರಂಪರೆಯ ನಡುವೆ ಸಂಪರ್ಕವನ್ನು ಬೆಳೆಸಲು ಗುಜರಾತ್ ಸರ್ಕಾರವು ‘ಭಗವದ್ಗೀತೆ’ ಕುರಿತ ಪೂರಕ ಪಠ್ಯಪುಸ್ತಕವನ್ನು ಪರಿಚಯಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 6 ರಿಂದ 8 ನೇ ತರಗತಿಗಳ ಪಠ್ಯಕ್ರಮದಲ್ಲಿ ಈ ಪಠ್ಯಪುಸ್ತಕವನ್ನು ಅಳವಡಿಸಲಾಗುವುದು ಎಂದು ವರದಿಗಳು ಹೇಳಿವೆ.

ಈ ನಿರ್ಧಾರವು ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯ ತತ್ವಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಗುಜರಾತ್‌ನ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಶುಕ್ರವಾರ ಹೇಳಿದ್ದಾರೆ. 6 ರಿಂದ 8 ನೇ ತರಗತಿಯ ಪಠ್ಯಕ್ರಮದಲ್ಲಿ ‘ಶ್ರೀಮದ್ ಭಗವದ್ಗೀತೆ’ ಯಿಂದ ಆಧ್ಯಾತ್ಮಿಕ ತತ್ವಗಳು ಮತ್ತು ಮೌಲ್ಯಗಳನ್ನು ಪೂರಕ ಪಠ್ಯಪುಸ್ತಕವಾಗಿ ಸೇರಿಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಪನ್ಶೇರಿಯಾ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ: ಡಿ ಕೆ ಶಿವಕುಮಾರ್

ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಗುಜರಾತ್ ಶಿಕ್ಷಣ ಸಚಿವರು, ಈ ಶೈಕ್ಷಣಿಕ ಕ್ರಮದ ಮೂಲಕ ವಿದ್ಯಾರ್ಥಿಗಳು ಹೆಮ್ಮೆಯ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. “ವಿದ್ಯಾರ್ಥಿಗಳು ಭಾರತದ ಶ್ರೀಮಂತ, ವೈವಿಧ್ಯಮಯ, ಪ್ರಾಚೀನ ಸಂಸ್ಕೃತಿ ಮತ್ತು ಜ್ಞಾನ ಸಂಪ್ರದಾಯಗಳನ್ನು ಬೋಧನೆಗಳ ಮೂಲಕ ತಿಳಿಯುವ ಮೂಲಕ ಅದರೊಂದಿಗೆ ಬಲವಾದ ಸಂಪರ್ಕವನ್ನು ಬೆಳೆಸುತ್ತಾರೆ” ಎಂದು ಅವರು ಒತ್ತಿ ಹೇಳಿದ್ದಾರೆ.

ಗ್ರಂಥವನ್ನು ಆಧರಿಸಿದ ಪೂರಕ ಪಠ್ಯಪುಸ್ತಕವು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುತ್ತದೆ ಎಂದು ಹೇಳಿದ ಅವರು, “6 ರಿಂದ 8 ನೇ ತರಗತಿಗಳಿಗೆ ಉದ್ದೇಶಿಸಲಾದ ಮೊದಲ ಭಾಗವಾದ ಈ ಪಠ್ಯಪುಸ್ತಕವನ್ನು ಶೀಘ್ರದಲ್ಲೇ ದೇಶಾದ್ಯಂತ ಶಾಲೆಗಳಿಗೆ ವಿತರಿಸಲಾಗುವುದು. ಅಲ್ಲದೆ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ಹೆಚ್ಚುವರಿ ಭಾಗಗಳು ರಚನೆಯ ಕೆಲಸ ನಡೆಯುತ್ತಿದೆ” ಎಂದು ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಅಡಿಯಲ್ಲಿ ತೆಗೆದುಕೊಂಡ ಈ ನಿರ್ಧಾರವು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಪನ್ಶೇರಿಯಾ ಹೇಳಿದ್ದಾರೆ. ಮಾರ್ಚ್ 2022 ರಲ್ಲಿ, ಗುಜರಾತ್ ಸರ್ಕಾರವು ರಾಜ್ಯ ಅಸೆಂಬ್ಲಿಯಲ್ಲಿ ಭಗವದ್ಗೀತೆಯನ್ನು 6 ರಿಂದ 12 ನೇ ತರಗತಿಗಳಿಗೆ ರಾಜ್ಯದಾದ್ಯಂತ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಘೋಷಿಸಿತು.

ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *