ತುಮಕೂರು: ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚಿನ ಜನತಾ ದಳ (ಜಾತ್ಯತೀತ)-ಜೆಡಿ(ಎಸ್) ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಲಿ ಶಾಸಕ ಎಸ್.ಆರ್.ಶ್ರೀನಿವಾಸ್ಗೆ ಜೆಡಿ(ಎಸ್) ಪಕ್ಷದಿಂದ ಅನ್ಯಾಯವಾಗಿದೆ ಎಂದು ಖಂಡಿಸಿರುವ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಕ್ಷೇತ್ರದ ಬಿದರೆ ಗ್ರಾಮದಲ್ಲಿ ಜೆಡಿ(ಎಸ್) ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ. ಗುಬ್ಬಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರಿದ್ದಾರೆ. ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಬೂತ್ ಸಮಿತಿ ಸೇರಿ ಹಲವು ಘಟಕಗಳಿಗೆ ರಾಜೀನಾಮೆ ಕೊಡುತ್ತಿರುವ ಕಾರ್ಯಕರ್ತರು ‘ವಾಸಣ್ಣ ಅಭಿಮಾನಿ ಬಳಗ’ ಸೇರುತ್ತಿದ್ದಾರೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇದರ ನಡುವೆ ಜೆಡಿ(ಎಸ್) ಪಕ್ಷದೊಳಗಿನ ಭಿನ್ನಮತದಿಂದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಈಗಾಗಲೇ, ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮನಸ್ಥಾಪವಾಗಿದೆ. ರಾಜ್ಯಸಭೆ ಚುನಾವಣೆ ವೇಳೆ ಶ್ರೀನಿವಾಸ್ ಅಡ್ಡಮತ ಹಾಕಿದಾಗಲೂ ಇಬ್ಬರ ನಡುವೆ ಒಂದುಸುತ್ತಿನ ವಾಗ್ವಾದ ನಡೆದಿತ್ತು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಈಗಾಗಲೇ ಹಲವು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಖಾಸಗಿ ಮತ್ತು ಸಾರ್ವಜನಿಕವಾಗಿ ಇಬ್ಬರೂ ನಾಯಕರೂ ಭೇಟಿಯಾಗಿದ್ದ ವಿಚಾರ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿತ್ತು. ಶ್ರೀನಿವಾಸ್ ಅವರನ್ನು ಸ್ವತಃ ಸಿದ್ದರಾಮಯ್ಯ ಬಹಿರಂಗವಾಗಿ ಕಾಂಗ್ರೆಸ್ಗೆ ಆಹ್ವಾನಿಸಿದ್ದರು. ಆದರೆ ಗುಬ್ಬಿಯ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಶ್ರೀವಾಸ್ ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ.
ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಮುಂದಿನ ರಾಜಕೀಯ ನಡೆ ಭಾರೀ ಚರ್ಚೆಗೂ ಕಾರಣವಾಗಿದೆ. ಜೆಡಿ(ಎಸ್) ಪಕ್ಷದಿಂದ ದೂರ ಸರಿದು ಕಾಂಗ್ರೆಸ್ ಪಕ್ಷ ಸೇರಿ ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಕಾದು ನೋಡಬೇಕು.