ಉಡುಪಿ: ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಇನ್ನಾ ಮೈಕ್ರೋವೇವ್ ಸ್ಟೇಷನ್ ಪರಿಸರದ ಕೊರಗ ಸಮುದಾಯದ ಯುವಕರ ಮೇಲೆ ಸ್ಥಳೀಯ ವ್ಯಕ್ತಿಯೋರ್ವ ಕಟ್ಟಿ ಹಾಕಿ ದರೋಡೆ ನಡೆಸಿದ್ದಾರೆ, ಎಂಬ ಸುಳ್ಳು ಪ್ರಕರಣವನ್ನು ದಾಖಲಿಸಿ ಸುಮಾರು 35 ದಿನಗಳ ನ್ಯಾಯಾಂಗ ಬಂಧನಕ್ಕೆ ಕಾರಣವಾದ ಘಟನೆಯನ್ನು ವಿರೋಧಿಸಿ ಮತ್ತು ಇಡೀ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಜೂನ್ 10 ಜೂನ್ ರಂದು ಪ್ರತಿಭಟನೆ ನಡೆಸುವುದಾಗಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಿಳಿಸಿದೆ.
ಈ ಕುರಿತು ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಪತ್ರಿಕಾ ಹೇಳಿಕೆ ನೀಡಿದ್ದು, ವಾಸ್ತವವಾಗಿ ಕೊರಗ ಯುವಕರ ಮೇಲೆ ದರೋಡೆ ಪ್ರಕರಣ ದಾಖಲು ಮಾಡಿರುವ ದೂರುದಾರ ವ್ಯಕ್ತಿ ಗುರುತರವಾಗಿ ಕೊರಗ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಆರೋಪಿಯಾಗಿದ್ದು. ಆ ವ್ಯಕ್ತಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಬೇಕಾದ ಪಡುಬಿದ್ರಿ ಪೊಲೀಸರು ಆರೋಪಿಯೊಂದಿಗೆ ಶಾಮೀಲಾಗಿ ಕೊರಗ ಯುವಕರು ದರೋಡೆ ನಡೆಸಿದ್ದಾರೆ, ಎನ್ನುವ ಕಟ್ಟುಕತೆ ಕಟ್ಟಿ ನಿರಪರಾಧಿ ಬಡ ಕೊರಗ ಸಮುದಾಯದ ಯುವಕರ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ದರೋಡೆ ಪ್ರಕರಣದ ದೂರುದಾರ ನಿರಂತರವಾಗಿ ಮಹಿಯರ ಮೇಲೆ ವಿಕೃತ ಸ್ವರೂಪದ ಕೃತ್ಯಕ್ಕೆ ಬೆಂಬಲ ನೀಡಿ ಸಂತ್ರಸ್ತ ಮಹಿಳೆಯ ದೂರನ್ನು ಸ್ವೀಕರಿಸಲು ನಿರಾಕರಿಸಿ ಮಹಿಳಾ ದೂರುದಾರರನ್ನು ಇತರೆ ಪುರುಷರ ಎದುರಿಗೆ ಅಪಮಾನವಾಗುವಂತೆ ಪೊಲೀಸರು ಪಡೆದುಕೊಂಡಿದ್ದಾರೆ. ಗೌಪ್ಯತೆ ಮೂಲಕ ವಿಚಾರಿಸಬೇಕಾದ ನಿಯಮಕ್ಕೆ ವ್ಯತಿರಿಕ್ತವಾಗಿ ವರ್ತಿಸುವ ಮೂಲಕ ಕೊರಗ ಸಮುದಾಯದವರು ನೀಡಿರುವ ದೂರನ್ನು ಹಿಂದಕ್ಕೆ ಪಡೆಯಲು ಪರೋಕ್ಷವಾಗಿ ಒತ್ತಡ ಹೇರಿರುತ್ತಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರಭುತ್ವ ಮತ್ತು ಜನತೆ ಆದಿವಾಸಿ ಕೊರಗ ಸಮುದಾಯಕ್ಕೆ ಚಾರಿತ್ರಿಕವಾಗಿ ಅನ್ಯಾಯವೆಸಗಿದೆ
ಕರಾವಳಿ ಕರ್ನಾಟಕದ ಮೂಲನಿವಾಸಿಗಳಾದ ಮತ್ತು ಅಳಿವಿನಂಚಿನಲಿರುವ ಕೊರಗ ಸಮುದಾಯಕ್ಕೆ ಎಲ್ಲಾ ಹಂತಗಳಲ್ಲೂ ಅನ್ಯಾಯವಾಗಿದೆ. ಆದರಿಂದ ಇಡೀ ಪ್ರಕರಣವನ್ನು ಸರಕಾರ ಮರು ತನಿಖೆ ನಡೆಸಬೇಕು. ಗಂಭೀರ ಪ್ರಮಾಣದ ಕರ್ತವ್ಯಲೋಪ ಎಸಗಿರುವ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಈಡೀ ಪ್ರಕರಣದಲ್ಲಿ ಬಾದಿತರಾದ ಕೊರಗ ಸಮುದಾಯದ ಯುವಕರಿಗೆ, ಮಹಿಳೆಗೆ ಪರಿಹಾರವನ್ನು ನೀಡಿ, ಅವರಿಗೆ ಜೀವ ಮತ್ತು ಜೀವನ ಭದ್ರತೆ ಕಲ್ಪಿಸಿಕೊಡಬೇಕೆಂದು ಎಂದು ಆಗ್ರಹಿಸಿದ್ದಾರೆ.
ಜೂನ್ 10 ರಂದು ನಡೆಯುವ ಹೋರಾಟ ಸರಕಾರವನ್ನು ಎಚ್ಚರಿಸುವ ಹೊರಾಟವಾಗಿದೆ. ಪೊಲೀಸ್ ಇಲಾಖೆ ಕೊರಗ ಸಮುದಾಯದ ರಕ್ಷಣೆಗೆ ನಿಲುವ ಬದಲು ದಮನಿಸುವ ಕೆಲಸ ಮಾಡಿರುವುದು ಇಡೀ ರಾಜ್ಯವೇ ಗಮನ ಸೆಳೆಯುವ ಹೋರಾಟ ರೂಪಿಸುತ್ತೇವೆ ಕೊರಗ ಸಮುದಾಯದ ಉಳಿವಿಗಾಗಿ ಗ್ಯಾರಂಟಿ ಕೊಡಿ ಎಂಬ ಘೋಷಣೆಯೊಂದಿಗೆ ಈ ಹೋರಾಟ ಮಾಡಲಿದೇವೆ ಎಂದು ಶ್ರೀಧರ ನಾಡ ತಿಳಿಸಿದ್ದಾರೆ.