ಕುಕನೂರು: ‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ನೀಡಿದ್ದರಿಂದಲೇ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಇವುಗಳನ್ನು ನಕಲು ಮಾಡಿದವರು ಅನುಷ್ಠಾನ ಮಾಡುವಲ್ಲಿ ವಿಫಲರಾದರು’ ಎಂದು ಜೂನ್ 22 ಭಾನುವಾರದಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದರು.
ತಾಲ್ಲೂಕಿನ ಶಿರೂರು ಪುನರ್ವಸತಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿವಂಗತ ಕೆ.ಎಚ್. ಪಾಟೀಲ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಗ್ಯಾರಂಟಿ ಯೋಜನೆಗಳನ್ನು ನೀಡುವ ಜೊತೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಿದ್ದೇವೆ.
ಬಜೆಟ್ ಒಟ್ಟು ಗಾತ್ರವನ್ನೂ ಹೆಚ್ಚಿಸಿದ್ದೇವೆ. ರಾಜ್ಯದ ರಾಜಕಾರಣದಲ್ಲಿ ಕೆ.ಎಚ್. ಪಾಟೀಲ ಅವರದ್ದು ಸದಾ ನೆನಪಿನಲ್ಲಿ ಉಳಿಯುವಂಥ ವ್ಯಕ್ತಿತ್ವ’ ಎಂದರು.
ಇದನ್ನೂ ಓದಿ: ದಾವಣಗೆರೆ| ಸ್ಟೆನೋಗ್ರಾಫರ್ ಗ್ರೇಡ್-ಸಿ – ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಮಾತನಾಡಿ ‘ನಾನು ಮತ್ತು ಭೋಸರಾಜು ಅವರು ಕೆ.ಎಚ್ ಪಾಟೀಲ್ ಅವರ ಜೊತೆಗೆ ಕೆಲಸ ಮಾಡಿದ್ದೆವೆ. ಅವರು ಒಳ್ಳೆಯ ಆಡಳಿತಗಾರರಾಗಿದ್ದರು. ಪಾರದರ್ಶಕ ಆಡಳಿತಕ್ಕೆ ಮಹತ್ವ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವದ ಜೊತೆಗೆ ಆಡಳಿತದಲ್ಲಿ ಹಿಡಿತ ಉಳ್ಳವರಾಗಿದ್ದರು. ಕೃಷಿ, ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು’ ಎಂದು ಸ್ಮರಿಸಿದರು.
ಪ್ರವಾಸೋದ್ಯಮ ಸಚಿವರೂ ಆದ ಕೆ.ಎಚ್. ಪಾಟೀಲ ಅವರ ಪುತ್ರ ಎಚ್.ಕೆ. ಪಾಟೀಲ ಮಾತನಾಡಿ ‘ಹತ್ತಿ ಮಾರುವುದು ರೈತರಿಗೆ ಬಹುದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ಕೆ.ಎಚ್.ಪಾಟೀಲ ಅವರು ಸಹಕಾರಿ ಕ್ಷೇತ್ರದ ಮೂಲಕ ಹತ್ತಿ ಮಿಲ್ ಪ್ರಾರಂಭ ಮಾಡಿದರು. ಸಾಮಾಜಿಕ ನ್ಯಾಯ ಒದಗಿಸಲು ಸಹಕಾರ ಕ್ಷೇತ್ರದ ಮೂಲಕ ಹೋರಾಟ ಮಾಡಿದ್ದಾರೆ’ ಎಂದರು.
‘ವೀರಾಪೂರ, ಮುತ್ತಾಳ, ಮುದ್ಲಾಪುರ, ಶಿರೂರು ಸೇರಿದಂತೆ ಸಾಕಷ್ಟು ಕಡೆ ಅಭಿವೃದ್ಧಿಯಾಗಿದೆ. ಬಸವರಾಜ ರಾಯರಡ್ಡಿಯವರು ಶಾಸಕರಾದ ನಂತರ ಈ ಕ್ಷೇತ್ರದಲ್ಲಿ ಹಲವಾರು ವಸತಿ ನಿಲಯಗಳು, ಶಾಲೆಗಳು, ಆಸ್ಪತ್ರೆ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಾಗಿವೆ. ಪಂಚ ಗ್ಯಾರಂಟಿ ಯೋಜನೆಗಳಡಿ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ದೊರೆಯುತ್ತಿದೆ. ಇದರಿಂದ ರಾಜ್ಯದಲ್ಲಿ ಬಡತನ ಪ್ರಮಾಣ ಶೂನ್ಯಕ್ಕೆ ಬಂದಿದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ, ಸಂಸದ ಕೆ.ರಾಜಶೇಖರ ಹಿಟ್ನಾಳ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ನೀರಾವರಿ ಕೇಂದ್ರ ವಲಯ ಮುನಿರಾಬಾದನ ಮುಖ್ಯ ಎಂಜಿನಿಯರ್ ಎಲ್. ಬಸವರಾಜ ಎಂಜಿನಿಯರ್ ಐ.ಪ್ರಕಾಶ, ರಾಘವೇಂದ್ರಚಾರ್ಯ ಜೋಶಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಮುಖಂಡರಾದ ಯಂಕಣ್ಣ ಯರಾಶಿ, ಹನಮಂತಗೌಡ ಪಾಟೀಲ್, ಸತ್ಯನಾರಾಯಣ ಹರಪನಹಳ್ಳಿ, ಕುಕನೂರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಸಂಗಮೇಶ್ ಗುತ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ವಚನಾನುಭವ 30| ಅಲ್ಲಮನ ವಚನ | ಅರಿವಿನ ಜಾಗೃತಿ – ಡಾ. ಮೀನಾಕ್ಷಿ ಬಾಳಿ Janashakthi Media
