ರೈತನಿಗೆ ಅಪಮಾನ ಮಾಡಿದ ಜಿ.ಟಿ.ಮಾಲ್‌ ವಿರುದ್ಧ ಕ್ರಮ : ಭೈರತಿ ಸುರೇಶ್‌

ಬೆಂಗಳೂರು : ರೈತನಿಗೆ ಅಪಮಾನ ಮಾಡಿದ ಮಾಗಡಿ ರಸ್ತೆಯ ಜಿ.ಟಿ.ಮಾಲ್‌ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ವಿಧಾನಸಭೆಗೆ ತಿಳಿಸಿದರು. ರೈತರೊಬ್ಬರನ್ನು ಮಾಲ್‌ಗೆ ಬಿಡದೆ ಅಪಮಾನ ಮಾಡಿದ ಬಗ್ಗೆ ಪಕ್ಷಬೇಧ ಮರೆತು ಸದನದಲ್ಲಿ ಚರ್ಚೆ ಮಾಡಿ ಮಾಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದಾಗ ಮಧ್ಯಪ್ರವೇಶಿಸಿದ ಸಚಿವರು, ರೈತನಿಗೆ ಅಪಮಾನ ಮಾಡಿದ ಮಾಲ್‌ ವಿರುದ್ಧ ಒಂದು ವಾರ ಮುಚ್ಚಿಸುವಂತ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌ರವರು, ಗ್ರಾಮೀಣ ಭಾಗದಿಂದ ಬಂದ ಯುವಕ ತಮ ತಂದೆಯನ್ನು ಮಾಲ್‌ಗೆ ಕರೆದೊಯ್ದಾಗ ಅಲ್ಲಿ ಆ ರೈತನನ್ನು ಮಾಲಿನ ಒಳಗೆ ಬಿಡಲಿಲ್ಲ. ಆ ರೈತ ಕರ್ನಾಟಕದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು. ಪಂಚೆ ತೊಟ್ಟಿದ್ದಾರೆ ಎಂಬ ಕಾರಣಕ್ಕೆ ಬಿಟ್ಟಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರ ಮಾಲ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಎಲ್ಲಾ ಮಾಲಿಗೂ ಸಂದೇಶ ರವಾನಿಸಬೇಕು ಎಂದರು.

ಮಾಲಿನ ಮಾಲೀಕರು ಎಷ್ಟೇ ಶ್ರೀಮಂತರಾದರೂ ಅದು ಮುಖ್ಯವಲ್ಲ. ಕಟ್ಟಕಡೆಯ ಜನರಿಗೆ ಸ್ಪಂದಿಸುವುದು ಮುಖ್ಯ ಎಂದು ಹೇಳಿದರು.ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ, ಮಾಲ್‌ ವಿರುದ್ಧ ಕಠಿಣ ಕ್ರಮ ಎಂದು ಹೇಳಿದರೆ ಆಗದು, ಒಂದು ವಾರಗಳ ವಿದ್ಯುತ್‌ ಕಡಿತ ಮಾಡಿ, ಆಗ ತಕ್ಕ ಪಾಠ ಆಗಲಿದೆ, ಈ ಬಗ್ಗೆ ಸರ್ಕಾರದ ಆದೇಶ ಹೊರಡಿಸಿ ರೈತರ ಉಡುಪಿಗೆ ಬೆಲೆ ಕೊಡದ ಮಾಲ್‌ ವಿರುದ್ಧ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಆಡಳಿತ ಪಕ್ಷದ ಮತ್ತೊಬ್ಬ ಶಾಸಕ ಪ್ರಕಾಶ್‌ ಕೋಳಿವಾಡ ಮಾತನಾಡಿ, ನಮ ಕ್ಷೇತ್ರದ ಅರೆಮಲ್ಲಾಪುರ ಗ್ರಾಮದ ರೈತನಾಗಿದ್ದು, 9 ಜನ ಮಕ್ಕಳಿದ್ದಾರೆ. ಎಲ್ಲರಿಗೂ ಶಿಕ್ಷಣ ಕೊಡಿಸಿದ್ದಾರೆ. ಒಬ್ಬ ಪುತ್ರ ಎಂಬಿಎ ಓದುತ್ತಿದ್ದು, ಆ ಮಗನನ್ನು ನೋಡಲು ರೈತ ಬಂದಿದ್ದಾಗ ಮಗ ಜಿ.ಟಿ ಮಾಲ್‌ಗೆ ಕರೆದುಕೊಂಡು ಹೋದಾಗ, ಅನ್ನದಾತನಿಗೆ ಅಪಮಾನ ಮಾಡಿದ ಮಾಲ್‌ ಅನ್ನು ಮುಚ್ಚಿಸಬೇಕೆಂದು ಒತ್ತಾಯಿಸಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಮಾತನಾಡಿ, ಮಾಲ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ಬೆಂಗಳೂರಿನಲ್ಲಿರುವ ಕ್ಲಬ್‌ಗಳಲ್ಲಿ ಶೂ ಧರಿಸಲೇಬೇಕು ಎಂಬ ಷರತ್ತುಗಳನ್ನು ಹಾಕುತ್ತಾರೆ. ಅವುಗಳ ವಿರುದ್ಧವೂ ಕ್ರಮವಾಗಬೇಕು ಎಂದರು.ಸಚಿವ ಭೈರತಿ ಸುರೇಶ್‌ ಮಾತನಾಡಿ, ಕ್ಲಬ್‌ಗಳಲ್ಲಿ ಪಂಚೆ, ಚಪ್ಪಲಿ ಹಾಕುವಂತಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಪಂಚೆ ಉಟ್ಟುಕೊಂಡು ಹೋದರೆ ಆಗಲೂ ಹಾಗೆಯೇ ಮಾಡುತ್ತಾರಾ? ಸಾಂಪ್ರದಾಯಿಕ ಉಡುಗೆಗೆ ಗೌರವ ಸಿಗುವಂತಾಗಬೇಕು ಎಂದರು.ಆಗ ಬಿಜೆಪಿ ಶಾಸಕ ಸುರೇಶ್‌ಕುಮಾರ್‌, ಚಡ್ಡಿ, ಪ್ಯಾಂಟು ಹಾಕಿಕೊಂಡು ಹೋದರೆ ಬಿಡುತ್ತಾರೆ. ಪಂಚೆ ಧರಿಸಿದ್ದರೆ ಬಿಡುವುದಿಲ್ಲ. ಏಕೆ ಅಂತಹ ಕ್ಲಬ್‌ಗಳಿಗೆ ಹೋಗುತ್ತೀರಾ? ಎಂದು ಛೇಡಿಸಿದರು.

ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ರೈತರಿಗೆ ಅವಮಾನ ಮಾಡಿದ ವಿಚಾರ ಹತ್ತಾರು ಬಾರಿ ಚರ್ಚೆಯಾಗಿದೆ. ಈಗ ರೈತರಿಗೆ ಆಗಿರುವ ಅವಮಾನಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳುವ ಏನಾದರೂ ಆದೇಶ ಹೊರಡಿಸಿ. ಆ ಆದೇಶವನ್ನು ಕಾರ್ಯದರ್ಶಿಗಳು ಅನುಷ್ಠಾನ ಮಾಡಬೇಕು. ಅವರು ಬ್ರಹ ಇದ್ದಂತೆ. ರೇಸ್‌‍ಕೋರ್ಸ್‌ಗೆ ಆಡಲು ಬರುವವರು ಶೇ.90 ರಷ್ಟು ಆಟೋ ಚಾಲಕರು. ಅವರು ಪುಸ್ತಕ ಓದುತ್ತಾ ರೇಸ್‌‍ಗೆ ಹೋಗುತ್ತಾರೆ. ನಿಜವಾಗಿಯೂ ಓದಿದ್ದರೆ ಆಟೋ ಓಡಿಸಬೇಕಿರಲಿಲ್ಲ. ಅಲ್ಲಿರುವವರು ಬಹುತೇಕ ಐಎಎಸ್‌‍, ಐಪಿಎಸ್‌‍ನವರೇ ಇದ್ದಾರೆ.

ಹ್ಯಾರಿಸ್‌‍ ನೇತೃತ್ವದಲ್ಲಿ ಒಂದು ಸಮಿತಿ ಎ.ಮಂಜು ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಕ್ಲಬ್‌ಗಳ ಕುರಿತು ವರದಿ ಕೊಟ್ಟಿದೆ. ಏನೂ ಆಗಿಲ್ಲ. ನಗರಾಭಿವೃದ್ಧಿ ಸಚಿವರು ಇಂತಹ ಘಟನೆ ಮರುಕಳಿಸಿದರೆ, ಪರಪ್ಪನ ಅಗ್ರಹಾರ ಜೈಲಿಗೆ ಹಾಕುತ್ತೇವೆ ಎಂಬ ಸಂದೇಶ ನೀಡುವ ಹೇಳಿಕೆ ಕೊಡಿ, ಆದೇಶ ಹೊರಡಿಸಿ ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ರೈತರಿಗೆ ಮಾಲ್‌ ಪ್ರವೇಶ ಮಾಡಲು ಅವಕಾಶ ಕೊಡದೇ ಇರುಉವುದು ಸರಿಯಲ್ಲ. ಮಾಲ್‌ ಮಾಲೀಕರಾಗಲೀ, ಆಡಳಿತ ವರ್ಗದವರಾಗಲೀ ಅಪಮಾನ ಮಾಡುವುದು, ಘನತೆ, ಸ್ವಾಭಿಮಾನಕ್ಕೆ ಧಕ್ಕೆ ತರುವುದು ಸಂವಿಧಾನದ ಪ್ರಕಾರ ಅವಕಾಶವಿಲ್ಲ. ಇಂತಹ ನಡವಳಿಕೆಯನ್ನು ಖಂಡಿಸುತ್ತೇವೆ. ವರದಿ ಪಡೆದು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಜೆಡಿಎಸ್‌‍ ಶಾಸಕ ಶರಣಗೌಡ ಕಂದಕೂರ್‌ ಮಾತನಾಡಿ, ಅಲ್ಲಿ ಭದ್ರತಾ ಸಿಬ್ಬಂದಿ ಕೂಡ ರೈತರ ಪುತ್ರ. ಮಾಲ್‌ನ ಮಾಲಿಕರ ಮೇಲೆ ಎಫ್‌ಐಆರ್‌ ದಾಖಲಿಸಬೇಕು. ಸೆಕ್ಯೂರಿಟಿ ಏಜೆನ್ಸಿ ವಿರುದ್ಧವೂ ಕ್ರಮವಾಗಬೇಕು ಎಂದು ಹೇಳಿದರು.ಹಲವು ಶಾಸಕರು ಮಾಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದಾಗ ಮಧ್ಯಪ್ರವೇಶಿಸಿದ ಸಚಿವ ಭೈರತಿ ಸುರೇಶ್‌ ಮಾಲ್‌ ಅನ್ನು 7 ದಿನ ಮುಚ್ಚಿಸುವುದಾಗಿ ಭರವಸೆ ನೀಡಿದಾಗ ಈ ವಿಚಾರದ ಚರ್ಚೆಗೆ ತೆರೆ ಬಿದ್ದಿತು.

 

Donate Janashakthi Media

Leave a Reply

Your email address will not be published. Required fields are marked *