ಬೆಂಗಳೂರು: ‘ ಫ್ಲ್ಯಾಟ್ ಅನ್ನು ವಸತಿ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೂ ಮುನ್ನವೇ ಕಾಯ್ದಿರಿಸಿದ್ದರೆ ಅಂತಹ ಸಮಯದಲ್ಲಿ ಖರೀದಿದಾರರು; ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವುದು ಕಡ್ಡಾಯ’ ಎಂದು ಹೈಕೋರ್ಟ್ ಆದೇಶಿಸಿದೆ. ಅನ್ವಯ
‘ಕೇಂದ್ರ, ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ (ಸಿಜಿಎಸ್‌ಟಿ) ಅನ್ವಯ ಫ್ಲ್ಯಾಟ್ ನೋಂದಣಿಗೂ ಮುನ್ನ ಜಿಎಸ್‌ಟಿ ಪಾವತಿಸಬೇಕು’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೀಡಿದ್ದ ನೋಟಿಸ್ ಪ್ರಶ್ನಿಸಿ ಮಲ್ಲತ್ತಹಳ್ಳಿಯ ಬಿ.ಜಿ.ಪರಮೇಶ್ವರ ಸೇರಿದಂತೆ ಇತರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಕಟ್ಟಡದ ಸಿಸಿ (ಕಂಪ್ಲೀಶನ್ ಸರ್ಟಿಫಿಕೇಟ್-ಪೂರ್ಣತಾ ಪ್ರಮಾಣ ಪತ್ರ) ವಿತರಣೆಗೂ ಮುನ್ನ ಭಾಗಶಃ ಅಥವಾ ಪೂರ್ಣ ಹಣ ಪಾವತಿಸಿದ್ದರೆ ಅದು ಸೇವೆಯಾಗಲಿದೆ. ಹಾಗಾಗಿ, ಅದಕ್ಕೆ ಜಿಎಸ್‌ಟಿ ಅನ್ವಯವಾಗುತ್ತದೆ’ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಸಿಜಿಎಸ್‌ಟಿ ನಿಬಂಧನೆ ಅನುಸಾರ; ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮೊದಲೇ ಒಪ್ಪಂದ ಮಾಡಿಕೊಂಡರೆ ಅದು ಕೆಲಸದ ಒಪ್ಪಂದ ಎನಿಸುತ್ತದೆ. ಅದಕ್ಕೆ ನಿರ್ದಿಷ್ಟ ದರದಲ್ಲಿ ಸೇವಾ ತೆರಿಗೆ ಪಾವತಿಸಲೇಬೇಕಾಗುತ್ತದೆ’ ಎಂದು ವಿವರಿಸಿದೆ.
ಇದನ್ನೂ ಓದಿ: ಯುರೋಪಿನಲ್ಲಿ ರಷ್ಯಾ-ವಿರೋಧಿ ಯುದ್ಧೋನ್ಮಾದ ಏಕೆ?
ಎಲ್ಲ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಪೀಠ, ‘ಅರ್ಜಿದಾರರು ಈಗಾಗಲೇ ಫ್ಲ್ಯಾಟ್ ಹಂಚಿಕೆಯ ನೋಂದಣಿ ಮಾಡಿಸಿಕೊಂಡಿಲ್ಲ ಎಂದಾದರೆ ಬಿಡಿಎ ಕೋರಿರುವ ಜಿಎಸ್‌ಟಿಯನ್ನು ಕಾನೂನಿನ ಪ್ರಕಾರ ಪಾವತಿಸಿದ ನಂತರ ಫ್ಲ್ಯಾಟ್ ವಿತರಣೆ ಸೇರಿದಂತೆ ವಹಿವಾಟು ಪೂರ್ಣಗೊಳಿಸಿಕೊಳ್ಳಲು ಅರ್ಹರಾಗಿರುತ್ತಾರೆ’ ಎಂದು ಸ್ಪಷ್ಟಪಡಿಸಿದೆ.
ಪ್ರಕರಣವೇನು?: ಅರ್ಜಿದಾರರಿಗೆ ವಳಗೆರೆಹಳ್ಳಿ 6ನೇ ಹಂತದ ಬಿಡಿಎ ವಸತಿ ಸಂಕೀರ್ಣದಲ್ಲಿ 2018ರ ಏಪ್ರಿಲ್ 9ಕ್ಕೆ ಎರಡು ಬೆಡ್ ರೂಂಗಳ ಫ್ಲ್ಯಾಟ್ ಹಂಚಿಕೆ ಮಾಡಲಾಗಿತ್ತು. ಫ್ಲ್ಯಾಟ್ ನಿರ್ಮಾಣವಾಗುತ್ತಿದ್ದ ಸಮಯದಲ್ಲೇ ಅದರ ಖರೀದಿಗೆ ಮುಂದಾಗಿದ್ದ ಅರ್ಜಿದಾರರು ಭಾಗಶಃ ಹಣ ಪಾವತಿಸಿದ್ದರು. 2018ರ ಡಿಸೆಂಬರ್ 31ರಂದು ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ತದನಂತರ ನೋಂದಣಿಗೆ ಮುಂದಾದಾಗ ಬಿಡಿಎ; ‘ಸಿಜಿಎಸ್‌ಟಿ ಕಾಯ್ದೆ-2017ರ ಅನ್ವಯ ಜಿಎಸ್‌ಟಿ ಸೇರಿಸಿ ಉಳಿದ ಹಣ ಪಾವತಿಸಿ, ಫ್ಲ್ಯಾಟ್ ನೋಂದಣಿ ಮಾಡಿಕೊಳ್ಳಬೇಕು’ ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಂಇಎಸ್: ಜಾತಿ ನಿಂದನೆ ಆರೋಪ ರದ್ದು
ಮಲ್ಲೇಶ್ವರದಲ್ಲಿರುವ ‘ಮೈಸೂರು ಶಿಕ್ಷಣ ಸೊಸೈಟಿ’ (ಎಂಇಎಸ್) ಕಾಲೇಜಿನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕರ ವಿರುದ್ಧ; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ದಾಖಲಿಸಿದ್ದ ಜಾತಿ ನಿಂದನೆ ಆರೋಪದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ‘ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಮುಂದಿರುವ ದೂರನ್ನು ರದ್ದುಗೊಳಿಸಬೇಕು’ ಎಂದು ಕೋರಿ ಎಂಇಎಸ್ ಕಾರ್ಯದರ್ಶಿ ಸುಖೇನ ಪದ್ಮನಾಭ ಹಾಗೂ ಕಾರ್ಯ ನಿರ್ವಾಹಕ ಕೆ.ಎಂ.ರಾಘವೇಂದ್ರನ್ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿದೆ. ‘ನಮ್ಮ ಕ್ಷಕಿದಾರರು ಮರಳಿ ಸೇವೆಗೆ ಹೋದಾಗ ಅವರನ್ನು ಜಾತಿ ಹೆಸರಿನಲ್ಲಿ ನಿಂದಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆಯೋಗ ತನಿಖೆಗೆ ಆದೇಶಿಸಿದ್ದು ಈ ಪ್ರಕ್ರಿಯೆಯನ್ನು ಮುಂದುವರಿಸಲು ನ್ಯಾಯಾಲಯ ಅನುಮತಿಸಬೇಕು’ ಎಂಬ ದೂರುದಾರರ ಪರ ವಕೀಲರ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ ‘ದೂರುದಾರರು 10 ವರ್ಷಗಳಿಂದ ಜಾತಿ ನಿಂದನೆ ನಡೆಯುತ್ತಿತ್ತು ಎಂದು ಆರೋಪಿಸಿದ್ದಾರೆ. ಆದರೆ ಅದಕ್ಕೆ ಯಾವುದೇ ಪೂರಕ ಸಾಕ್ಷ್ಯ ಒದಗಿಸಿಲ್ಲ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ’ ಎಂದು ಆದೇಶದಲ್ಲಿ ತಿಳಿಸಿದೆ.
ಎಂಇಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಟೆಕ್ನೀಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಪಿ.ಬಾಬು ‘ನಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿರುವುದರಿಂದ ನನ್ನನ್ನು ಜಾತಿ ಆಧಾರದಲ್ಲಿ ತಾರತಮ್ಯ ಮಾಡಿ ದೌರ್ಜನ್ಯ ಎಸಗಲಾಗುತ್ತಿದೆ’ ಎಂದು ಆರೋಪಿಸಿ ಎಸ್‌ಸಿ-ಎಸ್‌ಟಿ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರು. ದೂರನ್ನು ಆಧರಿಸಿ ಆಯೋಗವು ಶಾಲೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪ್ರಕ್ರಿಯೆ ಆರಂಭಿಸಿತ್ತು.
ಇದನ್ನೂ ನೋಡಿ: ಅಂಬೇಡ್ಕರ್ ಹಬ್ಬ ನೇರಪ್ರಸಾರ ಸ್ಪೂರ್ತಿಧಾಮ