ಜಿಎಸ್​ಟಿ ಪರಿಹಾರ: 2026ರ ತನಕ ವಿಸ್ತರಿಸಿದ ಕೇಂದ್ರ ಹಣಕಾಸು ಸಚಿವಾಲಯ

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಎಸ್​ಟಿ ಪರಿಹಾರ ಸೆಸ್ ಅನ್ನು 2026ನೇ ಇಸವಿ ತನಕ ಸುಮಾರು 4 ವರ್ಷಗಳವರೆಗೆ ವಿಸ್ತರಿಸಲು ಇಂದು(ಜೂನ್‌ 25) ಸೂಚನೆ ಹೊರಡಿಸಿದೆ. “ಪರಿಹಾರ ಸೆಸ್ ಅನ್ನು ಜುಲೈ 1, 2022ರಿಂದ ಮಾರ್ಚ್ 31, 2026 ರವರೆಗೆ ವಿಧಿಸಲಾಗುವುದು,” ಎಂದು ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಲೆವಿ ಮತ್ತು ಸೆಸ್ ಸಂಗ್ರಹದ ಅವಧಿ) ನಿಯಮಗಳ ಪ್ರಕಾರ ಸೆಸ್‌ ವಿಧಿಸುವುದು 2022ರ ಜೂನ್ 30ರಂದು ಕೊನೆಗೊಳ್ಳಬೇಕಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಸಮಿತಿ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ ಸಭೆಯಲ್ಲಿ, ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಆದಾಯ ಸಂಗ್ರಹದಲ್ಲಿ ಕೊರತೆ ಆಗಿದ್ದರಿಂದ ಪಡೆದ ಸಾಲವನ್ನು ಮರುಪಾವತಿಸಲು ಮಾರ್ಚ್ 2026ರ ವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಜುಲೈ 1, 2017ರಿಂದ ಜಾರಿಗೆ ಬರುವಂತೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಪರಿಚಯಿಸಲಾಯಿತು. ಮತ್ತು ಐದು ವರ್ಷಗಳ ಅವಧಿಗೆ ಜಿಎಸ್‌ಟಿ ಅನುಷ್ಠಾನದ ಖಾತೆಯಿಂದ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ಪರಿಹಾರವನ್ನು ನೀಡುವುದಾಗಿ ರಾಜ್ಯಗಳಿಗೆ ಭರವಸೆ ನೀಡಲಾಯಿತು.

ಪ್ರಸಕ್ತ ದೇಶದಲ್ಲಿ ಏಕರೂಪದ ತೆರಿಗೆ ಜಿಎಸ್‌ಟಿಯಲ್ಲಿ ವ್ಯಾಟ್‌ನಂತಹ ತೆರಿಗೆಗಳನ್ನು ಒಳಗೊಳ್ಳುವುದರಿಂದ ಉಂಟಾಗುವ ಆದಾಯದ ಕೊರತೆಗಾಗಿ ರಾಜ್ಯಗಳಿಗೆ ಪರಿಹಾರವನ್ನು ಪಾವತಿಸುವ ಕ್ರಮ ಜೂನ್ 2022ರಲ್ಲಿ ಕೊನೆಗೊಳ್ಳುತ್ತದೆ ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಖನೌದಲ್ಲಿ ನಡೆದ 45ನೇ ಜಿಎಸ್‌ಟಿ ಸಮಿತಿ ಸಭೆ ನಿರ್ಧರಿಸಿತು. ಆದರೆ ರಾಜ್ಯಗಳಿಗೆ ಜಿಎಸ್​ಟಿ ಆದಾಯ ನಷ್ಟವನ್ನು ಸರಿದೂಗಿಸುವುದಕ್ಕೆ 2020-21 ಮತ್ತು 2021-22ರಲ್ಲಿ ಮಾಡಿದ ಸಾಲವನ್ನು ಮರುಪಾವತಿಸಲು ಐಷಾರಾಮಿ ಮತ್ತು ಡಿಮೆರಿಟ್ ಸರಕುಗಳ ಮೇಲೆ ವಿಧಿಸಲಾದ ಪರಿಹಾರ ಸೆಸ್ ಅನ್ನು ಮಾರ್ಚ್ 2026ರ ವರೆಗೆ ಸಂಗ್ರಹಿಸಲಾಗುತ್ತದೆ.

2023-24ರಿಂದ ಅಸಲು ಮರುಪಾವತಿ ಶುರು

ಸೆಸ್ ಸಂಗ್ರಹದಲ್ಲಿ ಕೊರತೆಯಾಗುವ ರಾಜ್ಯಗಳ ಸಂಪನ್ಮೂಲ ಕೊರತೆಯನ್ನು ಪೂರೈಸಲು ಕೇಂದ್ರವು 2020-21ರಲ್ಲಿ ರೂ. 1.1 ಲಕ್ಷ ಕೋಟಿ ಮತ್ತು 2021-22ರಲ್ಲಿ ರೂ. 1.59 ಲಕ್ಷ ಕೋಟಿ ಸಾಲವನ್ನು ಮತ್ತು ಒಂದು ಭಾಗವನ್ನು ಪೂರೈಸಲು ಒಂದರ ಹಿಂದೆ ಒಂದರಂತೆ ಸಾಲವಾಗಿ ಬಿಡುಗಡೆ ಮಾಡಿದೆ. ಕೇಂದ್ರವು 2021-22ರಲ್ಲಿ ಸಾಲಕ್ಕೆ ರೂ. 7,500 ಕೋಟಿಯನ್ನು ಬಡ್ಡಿ ವೆಚ್ಚವಾಗಿ ಮರುಪಾವತಿಸಿದ್ದು, ಈ ಹಣಕಾಸು ವರ್ಷದಲ್ಲಿ ರೂ. 14,000 ಕೋಟಿ ಪಾವತಿಸಬೇಕಿದೆ. 2023-24ರಿಂದ ಅಸಲು ಮೊತ್ತದ ಮರುಪಾವತಿ ಪ್ರಾರಂಭವಾಗುತ್ತದೆ. ಅದು ಮಾರ್ಚ್ 2026ರ ವರೆಗೆ ಮುಂದುವರಿಯುತ್ತದೆ.

ರಾಜ್ಯಗಳ ಸಂರಕ್ಷಿತ ಆದಾಯವು ಶೇಕಡಾ 14ರಷ್ಟು ಸಂಯೋಜಿತ ಬೆಳವಣಿಗೆ ದರದಲ್ಲಿ ಬೆಳೆಯುತ್ತಿದೆಯಾದರೂ ಸೆಸ್ ಸಂಗ್ರಹವು ಅದೇ ಅನುಪಾತದಲ್ಲಿ ಹೆಚ್ಚಾಗಲಿಲ್ಲ ಮತ್ತು ಕೊವಿಡ್-19 ಸಾಂಕ್ರಾಮಿತೆಯಿಂದಾಗಿ ರಕ್ಷಿತ ಆದಾಯ ಮತ್ತು ಸೆಸ್ ಸಂಗ್ರಹದಲ್ಲಿನ ಕಡಿತ ಸೇರಿದಂತೆ ನಿಜವಾದ ಆದಾಯದ ಸ್ವೀಕೃತಿಯ ಮಧ್ಯದ ಅಂತರವನ್ನು ಮತ್ತಷ್ಟು ಹೆಚ್ಚಿಸಿತು. ಮೇ 31, 2022ರವರೆಗೆ ರಾಜ್ಯಗಳಿಗೆ ಪಾವತಿಸಬೇಕಾದ ಜಿಎಸ್‌ಟಿ ಪರಿಹಾರದ ಸಂಪೂರ್ಣ ಮೊತ್ತವನ್ನು ಕೇಂದ್ರವು ಬಿಡುಗಡೆ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *