ನವದೆಹಲಿ: ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಮತ್ತು ಬಡವರ ಮೇಲೆ ವಿಶೇಷ ಗಮನಹರಿಸುವ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ ಹೊಸ ಆರ್ಥಿಕ ಮಾದರಿಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಘೋಷಿಸಿದ್ದು, ಪ್ರತಿಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಮಾರ್ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.ಇಂಡಿಯಾ
ಜಾರ್ಖಂಡ್‌ನ ಗುಮ್ಲಾದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ 24 ನೇ ದಿನದಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಅಖಂಡವಾಗಿದೆ ಎಂದು ಹೇಳಿದ್ದಾರೆ. ಸೀಟು ಹಂಚಿಕೆ ಸೂತ್ರಗಳನ್ನು ಚರ್ಚಿಸಲಾಗುತ್ತಿದ್ದು, ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.ಇಂಡಿಯಾ
ಇದನ್ನೂ ಓದಿ: ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋ
ಮೀಸಲಾತಿ ಮೇಲಿನ 50% ಮಿತಿಯನ್ನು ತೆಗೆದುಹಾಕುವ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಇದು ಕೃತಕ ಮತ್ತು ಅನ್ಯಾಯದ ಮಿತಿಯಾಗಿದೆ ಎಂದು ಹೇಳಿದ್ದಾರೆ. ದಲಿತರು ಮತ್ತು ಆದಿವಾಸಿಗಳ ಮೀಸಲಾತಿ ಹಕ್ಕುಗಳನ್ನು ರಕ್ಷಿಸುವ ಜೊತೆಗೆ, 50% ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ವಿವಿಧ ಜಾತಿಗಳ ನಿಖರವಾದ ಸ್ಥಿತಿಯನ್ನು ಕಂಡುಹಿಡಿಯಲು ದೇಶದಲ್ಲಿ ಜಾತಿ ಗಣತಿ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇತ್ತೀಚೆಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ತಮ್ಮ ರಾಜ್ಯದಲ್ಲಿ ಶೀಘ್ರವೇ ಇದನ್ನು ಆರಂಭಿಸುವುದಾಗಿ ತಿಳಿಸಿದ್ದರು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಭಾರತ್ ಜೋಡೋ ನ್ಯಾಯ್ ಯಾತ್ರೆ ತನ್ನ 24 ನೇ ದಿನವಾದ ಮಂಗಳವಾರ ಒಡಿಶಾವನ್ನು ಪ್ರವೇಶಿಸಿತು. ಸಮಾರಂಭದಲ್ಲಿ ರಾಷ್ಟ್ರಧ್ವಜವನ್ನು ಒಡಿಶಾ ಘಟಕಕ್ಕೆ ಹಸ್ತಾಂತರಿಸಲಾಯಿತು. ಯಾತ್ರೆಯು ಜಾರ್ಖಂಡ್‌ನಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸಿದ್ದು, ಎರಡನೇ ಹಂತದ ವೇಳೆ ಫೆಬ್ರವರಿ 14 ರಂದು ರಾಜ್ಯಕ್ಕೆ ಮರಳಲಿದೆ.
ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ್ ಯಾತ್ರೆ | ರಾಹುಲ್ ಗಾಂಧಿಗೆ ಗುವಾಹಟಿ ಪ್ರವೇಶ ನಿರಾಕರಿಸಿದ ಬಿಜೆಪಿ ಸರ್ಕಾರ!
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಒಟ್ಟು 6,200 ಕಿ.ಮೀ ಕ್ರಮಿಸಲಿದೆ. ಮಣಿಪುರದಿಂದ ಪ್ರಾರಂಭವಾದ ಈ ಯಾತ್ರೆಯು ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಯಾತ್ರೆಯು ಮಹಾರಾಷ್ಟ್ರ ತಲುಪಲಿ, ಮುಂಬೈಯಲ್ಲಿ ಸಮಾಪನಗೊಳ್ಳಲಿದೆ. ಒಟ್ಟು 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಯಾತ್ರೆ ಒಳಗೊಳ್ಳಲಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ “ಭಾರತ್ ಜೋಡೋ ಯಾತ್ರೆ” ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಸುಮಾರು 150 ದಿನಗಳ ಕಾಲ ನಡೆದಿತ್ತು. ಬಿಜೆಪಿ ನೇತೃತ್ವದ ಭಾರತ ಸರ್ಕಾರದ “ವಿಭಜಕ ರಾಜಕೀಯ”ದ ವಿರುದ್ಧ ದೇಶವನ್ನು ಒಂದುಗೂಡಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿತ್ತು. ಈ ಯಾತ್ರೆಯನ್ನು ರಾಹುಲ್ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ M. K. ಸ್ಟಾಲಿನ್ ಅವರು ಪ್ರಾರಂಭಿಸಿದ್ದರು.
ಭಾರತ್ ಜೋಡೊ ಯಾತ್ರೆಯ ಮೂಲಕ ಕಾಂಗ್ರೆಸ್ ತಾನು ಕಳೆದುಕೊಂಡ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ ಎಂದು ಭಾವಿಸಿದ್ದು, ಹಾಗಾಗಿ ಅದೇ ರೀತಿಯ ಯಾತ್ರೆಯನ್ನು ಮತ್ತೆ ನಡೆಸುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕವು ಡಿಸೆಂಬರ್ 20 ರ ಬುಧವಾರದಿಂದ ಯುಪಿ ಜೋಡೋ ಯಾತ್ರೆಯನ್ನು ನಡೆಸಿತ್ತು. ಸಹರಾನ್‌ಪುರದ ಶಾಕುಂಭಾರಿ ದೇವಿ ದೇವಸ್ಥಾನದಿಂದ ಆರಂಭವಾಗಿದ್ದ 20 ದಿನಗಳ ಈ ಯಾತ್ರೆಯು 11 ಜಿಲ್ಲೆಗಳು ಮತ್ತು 16 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿತ್ತು.
ವಿಡಿಯೊ ನೋಡಿ: ನ್ಯಾಶನಲ್ ಕಾಲೇಜ್ ಮುಂದೆ ಜನಾಕ್ರೋಶ :ಡಾ. ರವಿ ಬಾಗಿ ವರ್ಗಾವಣೆ ಹಿಂಪಡೆದ ಆಡಳಿತ ಮಂಡಳಿ Janashakthi Media