ಅಪರಾಧಿಗಳು ಯಾರೇ ಆಗಿದ್ದರೂ ಬಂಧಿಸಬೇಕು-ಗೃಹ ಸಚಿವ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ

ಬೆಂಗಳೂರು: ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆಪರಾಧಿಗಳು ಯಾರೇ ಆಗಿರಲಿ, ಯಾವುದೇ ಸಂಘಟನೆಗೆ ಸೇರಿದ್ದವರಾಗಿರಲಿ ಅವರನ್ನು ಸರ್ಕಾರ ಬಂಧಿಸಿ ಗಲ್ಲು ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗಿದೆ. ಗೃಹ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಕೊಲೆ ನಡೆದಿದೆ. ಹೀಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು, ನಮ್ಮ ಸರ್ಕಾರ ಇದ್ದಾಗ ಕೆ.ಜೆ. ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ದರು. ರಾಜೀನಾಮೆ ಕೊಡುವುದೇ ಇಲ್ಲ ಎಂದು ಹೇಳಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ಯಾರದ್ದೇ ಕೊಲೆಯಾದರೂ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಹರ್ಷ ಅವರ ಕೊಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ವಿಧಾನಸೌಧದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ ಆರೋಪಿಗಳು ಯಾವುದೇ ಸಮುದಾಯ, ಸಂಘಟನೆಗೆ ಸೇರಿದ್ದರೂ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈಶ್ವರಪ್ಪ, ಯುಡಿಯೂರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆ ಇದು. ಇದು ಏನನ್ನು ಸೂಚಿಸುತ್ತದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿರುವುದಕ್ಕೆ ಇದು ಉದಾಹರಣೆ. ಈಶ್ವರಪ್ಪ, ಆರಗ ಜ್ಞಾನೇಂದ್ರ ಇದಕ್ಕೆ ಜವಾಬ್ದಾರರು’ ಎಂದರು.

ಪೊಲೀಸರು ಅಪರಾಧಿಗಳನ್ನು ಮೊದಲು ಬಂಧಿಸಿ ಕಠಿಣವಾದ ತನಿಖೆ ಮಾಡಲಿ. ಬೆಂಗಳೂರಿನಲ್ಲಿ ಕುಳಿತು ಕಾಂಗ್ರೆಸ್ ಅಥವಾ ಯಾರ ಮೇಲೋ ಆರೋಪ ಮಾಡುವುದಲ್ಲ. ಆರೋಪಿಗಳು ಯಾರೇ ಆಗಿದ್ದರೂ ಬಂಧಿಸಿ ಶಿಕ್ಷೆಗೆ ಒಳಪಡಿಸಲಿ ಎಂದರು.

ಸದನ ನಡೆಯುವುದು ಅವರಿಗೆ ಬೇಕಿಲ್ಲ

ಸದನ ನಡೆಸಲು ಕಾಂಗ್ರೆಸ್‌ನವರಿಗೆ ಆಸಕ್ತಿ ಇಲ್ಲ ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಷ್ಟ್ರಧ್ವಜಕ್ಕೆ ಅವಮಾನ ಆಗುವಂಥ ಹೇಳಿಕೆ ನೀಡಿದಾಗ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಾರೆ ಎಂದು ಬಿಜೆಪಿಯವರಿಗೆ ಗೊತ್ತು. 40 ಪರ್ಸೆಂಟ್ ಕಮಿಷನ್, ಬಿಟ್ ಕಾಯಿನ್ ಹಗರಣದ ಬಗ್ಗೆ ನಾವು ಪ್ರಸ್ತಾಪ ಮಾಡುತ್ತೇವೆ ಎಂಬ ಕಾರಣಕ್ಕೆ ಸದನ ನಡೆಯುವುದು ಅವರಿಗೂ ಇಷ್ಟವಿಲ್ಲ. ಹೀಗಾಗಿಯೇ ಈಶ್ವರಪ್ಪ ಅವರಿಂದ ರಾಜೀನಾಮೆ ಕೊಡಿಸುತ್ತಿಲ್ಲ ಎಂದು ಆರೋಪಿಸಿದರು.

ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ಅವರು ರಾಜೀನಾಮೆ ಕೊಟ್ಟಿದ್ದರೆ ಅಥವಾ ಅವರನ್ನು ಸಂಪುಟದಿಂದ ವಜಾ ಮಾಡಿದ್ದರೆ ನಾವೇಕೆ ಧರಣಿ ಮಾಡುತ್ತಿದ್ದೆವು. ಜೆಡಿಎಸ್ ಶಾಸಕರು ನಮ್ಮ ವಿರುದ್ಧ ಪ್ರತಿಭಟನೆ ಮಾಡಲಿ, ಇದಕ್ಕೆ ನಮ್ಮ ತಕರಾರು ಇಲ್ಲ. ನಾವು ನಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಅವರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲವೆಂದರು.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವಾಗ ಮೌನದಿಂದ ಇರಲು ಸಾಧ್ಯವೇ? ಒಂದು ವೇಳೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರೆ ನಾವು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *