ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿಯಾದ ಗೃಹ ಲಕ್ಷ್ಮೀ ಯೋಜನೆಯ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ಈ ಯೋಜನೆಯಡಿ ಮನೆಯ ಯಜಮಾನಿಗೆ 2000ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಲಾಭ ಪಡೆದುಕೊಳ್ಳಲು ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿದೆ.
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ಮುಂದಾಗಿತ್ತು. ಇತ್ತೀಚೆಗೆ ನಡೆದ ಸಚಿವ ಸಂಪುಟದ ಅನುಮೋದನ ಪಡೆದುಕೊಂಡಿತ್ತು. ಸದ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಪ್ರಮುಖ ಷರತ್ತುಗಳೇನು?
1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
2. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಿದೆ.
3. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ ಕಾರ್ಡ್ ಗಳನ್ನು ಜೋಡಣೆ ಮಾಡಬೇಕು.
4. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ಪಾವತಿದಾರರಾಗಿದ್ದಲ್ಲಿ ಸೌಲಭ್ಯ ಸಿಗುವುದಿಲ್ಲ.
5. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ ?: ಈ ಯೋಜನೆಯ ಫಲಾನುಭವಿಗಳು ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕವಾಗಲಿ ಅಥವಾ ಭೌತಿಕವಾಗಿಯಾಗಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಸರ್ಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಕೆಯು ಹಲವು ಹಂತಗಳನ್ನು ಒಳಗೊಂಡಿದೆ.
- ಮೊದಲನೆಯದಾಗಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ವೆಬ್ಸೈಟ್ನ ಮುಖಪುಟವು ನಿಮ್ಮ ಪರದೆಯ ಮೇಲೆ ತೆರೆಯುತ್ತದೆ.
- ನಂತರ ಕರ್ನಾಟಕ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
- ಕೇಳಿರುವ ಎಲ್ಲಾ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ.
- ಈ ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಕರ್ನಾಟಕ ಒನ್ ಕೇಂದ್ರ ಅಥವಾ ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಕಾರ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
- ಅಧಿಕಾರಿಗಳು ನಿಮ್ಮ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
- ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಪ್ರೋತ್ಸಾಹದ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಗಸ್ಟ್ ತಿಂಗಳಿನಿಂದ ವರ್ಗಾಯಿಸಲಾಗುತ್ತದೆ.
ಕರ್ನಾಟಕ ಗೃಹಲಕ್ಷ್ಮಿ ಯೋಜನೆಗೆ ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿಯಂತಹ ಗುರುತಿನ ಪುರಾವೆ
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಪಡಿತರ ಚೀಟಿ
- ವಿಳಾಸ ಪುರಾವೆ
- ನಿವಾಸ ಪ್ರಮಾಣಪತ್ರ
- ಮೊಬೈಲ್ ನಂಬರ್
- 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಇವರಿಗೂ ಅವಕಾಶ : ವಿಧವಾ ಪೆನ್ಷನ್, ವಿಕಲಚೇತನರ ಪೆನ್ಷನ್, ವೃದ್ಧಾಪ್ಯದ ಪಿಂಚಣಿ ಇದ್ದರೂ ಅವರಿಗೂ ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕವಾಗಿ 2,000 ರೂ. ನೀಡಲು ನಿರ್ಧಾರ.
ತಪ್ಪು ಮಾಹಿತಿ ನೀಡಿದರೆ ಸೂಕ್ತ ಕ್ರಮ ಎಚ್ಚರಿಕೆ : ಯೋಜನೆಗೆ ಅರ್ಜಿ ಸಲ್ಲಿಸುವರಿಗೆ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುತ್ತದೆ. ಅರ್ಜಿಯಲ್ಲಿನ ಅಂಶಗಳ ಬಗ್ಗೆ ತದನಂತರ ಪರಿಶೀಲನ ಮಾಗುತ್ತದೆ. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ. ಜತೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.