ಕರ್ನಾಟಕದ ಅರ್ಧ ಕೋಟಿ ಕುಟುಂಬಗಳಿಗೆ ನೇರ ಲಾಭ
ಬೆಂಗಳೂರು : ಈಗಾಗಲೇ ಜಾರಿಯಲ್ಲಿದ್ದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಿದೆ. ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿಯ ನೇರ ಲಾಭ ದಕ್ಕಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಜುಲೈ 1 ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರನ್ವಯ ಪ್ರತಿ ಕುಟುಂಬಕ್ಕೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಕಳೆದ 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಆಗಸ್ಟ್ ತಿಂಗಳಿನಿಂದ ಗೃಹಜ್ಯೋತಿಯ ಲಾಭ ಜನರಿಗೆ ಸಿಗಲಿದೆ. ಈಗ ಈ ಯೋಜನೆಗೆ ಈಗಾಗಲೇ ಜಾರಿಯಲ್ಲಿದ್ದ ಮೂರು ಜ್ಯೋತಿ ಯೋಜನೆಗಳನ್ನು ವಿಲೀನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಗೃಹಜ್ಯೋತಿ ಯೋಜನೆ ಜಾರಿಗೆ ಬಂದಾಗ ಈಗಾಗಲೇ ಜಾರಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳ ಭವಿಷ್ಯವೇನು? ಇದರ ಫಲಾನುಭವಿಗಳಿಗೆ ಏನಾಗುತ್ತೆ? ಎನ್ನುವ ಗೊಂದಲ ಎಲ್ಲರಲ್ಲೂ ಕಾಡುತ್ತಿತ್ತು. ಈಗ ಸರ್ಕಾರ ಮೂರು ಯೋಜನೆಗಳನ್ನು ಗೃಹಜ್ಯೋತಿಯೊಳಗಡೆ ವಿಲೀನಗೊಳಿಸಿ, ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಇದನ್ನೂ ಓದಿ : ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ
53 ಯೂನಿಟ್ + ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಉಚಿತ!
ಸದ್ಯ ಜಾರಿಯಲ್ಲಿರುವ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳ ಫಲಾನುಭವಿ ಕುಟುಂಬಗಳಿಗೆ 40 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತಿತ್ತು. ಈಗ ಈ ಎರಡು ಯೋಜನೆಗಳ ಫಲಾನುಭವಿಗಳನ್ನು ಗೃಹಜ್ಯೋತಿ ಯೋಜನೆಯಡಿ ತರಲಾಗಿದ್ದು, ರಾಜ್ಯದ ಸರಾಸರಿ ವಿದ್ಯುತ್ ಬಳಕೆಯಾದ 53 ಯೂನಿಟ್ ಹಾಗೂ ಶೇ.10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.
75 ಯೂನಿಟ್ + ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಉಚಿತ!
ಇನ್ನು, ಅಮೃತ ಜ್ಯೋತಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವಿದ್ಯುತ್ ದರವನ್ನು ಡಿಬಿಟಿ ಮೂಲಕ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಈಗ ಈ ಯೋಜನೆಯನ್ನು ಕೂಡ ಗೃಹಜ್ಯೋತಿಗೆ ಸೇರಿಸಲಾಗಿದ್ದು, ಇವರಿಗೆ 75 ಯೂನಿಟ್ ಮತ್ತು ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ಹೊಸ ನಿರ್ಧಾರದಿಂದ ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ಇದರಿಂದ ನೇರ ಲಾಭ ಸಿಗಲಿದೆ. ಇದನ್ನು ಹೊರತುಪಡಿಸಿ ಗೃಹಜ್ಯೋತಿಗೆ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯೇ ಅಂತಿಮ ಎಂದು ಸರ್ಕಾರ ಹೇಳಿದೆ.
ಗೃಹಜ್ಯೋತಿ ಗ್ಯಾರಂಟಿಯಲ್ಲಿ ನೂರೆಂಟು ಪ್ರಶ್ನೆಗಳು? ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ