ಯುರೋಪಿನಲ್ಲಿ ಫ್ಯಾಸಿಸಂನ ಬೆಳವಣಿಗೆಗೆ ಫ್ರಾನ್ಸಿನ ಎಡಪಂಥೀಯರಿಂದ ತಡೆ

ಪ್ರೊ. ಪ್ರಭಾತ್‍ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್

ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಆರ್ಥಿಕ ಸ್ಥಗಿತತೆಯು ತಮ್ಮ ಜೀವನಮಟ್ಟವನ್ನು ಹಿಂಡಿದ ಪರಿಣಾಮವಾಗಿ ಮೂಲಭೂತವಾಗಿ ಜನಸಾಮಾನ್ಯರಲ್ಲಿ ಮೂಡಿದ ಕೋಪವನ್ನು ಫ್ಯಾಸಿಸಂ ದುರ್ಬಳಕೆ ಮಾಡಿಕೊಳ್ಳುವ ಅವಕಾಶ ಉದ್ಭವಿಸಿದೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುವ ಮತ್ತು ಕಾರ್ಮಿಕ ವರ್ಗವನ್ನು ವಿಭಜಿಸುವ ಫ್ಯಾಸಿಸಂ, ಕಾರ್ಮಿಕ ವರ್ಗವನ್ನು ವಂಚಿಸುವ ಅಪರಾಧವನ್ನೂ ಮಾಡುತ್ತದೆ. ಕಾರ್ಮಿಕ ವರ್ಗದ ಬೆಂಬಲವನ್ನು ಗಳಿಸುವ ಉದ್ದೇಶದಿಂದ ಉದಾರವಾದಿ ಬಂಡವಾಳಶಾಹಿ ರಾಜಕೀಯ ಪಕ್ಷಗಳಿಗಿಂತ ತಾನು ಭಿನ್ನವೆಂದು ಅದು ಸೋಗು ಹಾಕುತ್ತದೆ; ಪ್ರಮುಖ ಎಡಪಂಥೀಯ ವಿಭಾಗಗಳು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ತಮ್ಮ ಜವಾಬ್ದಾರಿಯನ್ನು ತೊರೆದಿರುವುದು ಮತ್ತು ಬಂಡವಾಳಶಾಹಿ ರಾಜಕೀಯ ಪಕ್ಷಗಳ ಜಾಡು ಹಿಡಿದಿರುವುದರಿಂದಾಗಿ ಕೂಡ ಇಂತಹ ಸೋಗು ಹಾಕುವ ಅವಕಾಶಗಳೂ ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಯುರೋಪಿನಲ್ಲಿ ಫ್ಯಾಸಿಸಂ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಯೇ ಫ್ರಾನ್ಸ್ ವಿಭಿನ್ನವಾಗಿ ಕಾಣುತ್ತಿರುವುದು. ಎಡಪಂಥೀಯರು ನವ-ಉದಾರವಾದವನ್ನು ಮೀರಿ ಮುಂದೆ ಹೋಗುವ ಅಜೆಂಡಾವನ್ನು ಅಳವಡಿಸಿಕೊಳ್ಳುವ ಕ್ರಮವು ಮಾತ್ರವೇ ಫ್ಯಾಸಿಸ್ಟರು ನಿಂತ ನೆಲ ಕುಸಿಯುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಫ್ರಾನ್ಸ್ ತೋರಿಸಿಕೊಟ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಕೆಲವು ದೇಶಗಳಲ್ಲಿ ಫ್ಯಾಸಿಸ್ಟ್‌ ನಿಲುವು ಹೊಂದಿದ ಸರ್ಕಾರಗಳು ಅಧಿಕಾರಕ್ಕೆ ಬಂದಿರುವುದು ಅಥವಾ ಇನ್ನೂ ಕೆಲವು ದೇಶಗಳಲ್ಲಿ ಅಧಿಕಾರ ಹಿಡಿಯುವ ಸಂಭಾವ್ಯತೆ ಇರುವುದು ಒಂದು ವಾಸ್ತವವೂ ಹೌದು ಮತ್ತು ಒಂದು ಅಪಾಯವೂ ಹೌದು. ಈಗ ಯುರೋಪಿನ ಹಲವು ದೇಶಗಳಲ್ಲಿ ಫ್ಯಾಸಿಸ್ಟರು ಅಧಿಕಾರದಲ್ಲಿದ್ದಾರೆ. ಫ್ರಾನ್ಸ್, ಈ ಫ್ಯಾಸಿಸ್ಟ್‌ ಸರ್ಕಾರಗಳ ಪಟ್ಟಿಗೆ ಸೇರಿಕೊಳ್ಳುವುದರಲ್ಲಿತ್ತು. ಒಂದು ವೇಳೆ ಅದು ಘಟಿಸಿದ್ದರೆ, ಫ್ರಾನ್ಸ್‌, ಇಟಲಿಯ ನಂತರ, ಫ್ಯಾಸಿಸ್ಟ್ ಸರ್ಕಾರವನ್ನು ಹೊಂದಿದ ಎರಡನೇ ಪ್ರಮುಖ ಯುರೋಪಿಯನ್ ದೇಶವಾಗುತ್ತಿತ್ತು ಮತ್ತು ಅದು ಐತಿಹಾಸಿಕ ಮಹತ್ವ ಹೊಂದಿದ ಒಂದು ಘಟನೆಯೂ ಆಗುತ್ತಿತ್ತು. ಏಕೆಂದರೆ, ಹಿಟ್ಲರನೊಂದಿಗೆ ಸಹಕರಿಸಿದ ಕುಖ್ಯಾತಿಗೆ ಪಾತ್ರನಾದ ಮಾರ್ಷಲ್ ಪೆಟೈನ್ ನೇತೃತ್ವದ ವಿಶಿ ಸರ್ಕಾರದ ನಂತರ ಮೊದಲ ಬಾರಿಗೆ ಒಂದು ಫ್ಯಾಸಿಸ್ಟ್ ಸರ್ಕಾರವನ್ನು ಫ್ರಾನ್ಸ್ ಹೊಂದುತ್ತಿತ್ತು. ಈ ತಿರುವು, ನಾಜಿಗಳ ಆಕ್ರಮಣದ ವಿರುದ್ಧ ವೀರೋಚಿತ ಹೋರಾಟವನ್ನು ನಡೆಸಿದ್ದ ಮತ್ತು ಒಂದು ಶಕ್ತಿಶಾಲಿ ಎಡ ಮತ್ತು ಟ್ರೇಡ್ ಯೂನಿಯನ್ ಚಳುವಳಿಯನ್ನು ನಿರಂತರವಾಗಿ ಹೊಂದಿರುವ ಫ್ರಾನ್ಸ್‌ನಂತಹ ದೇಶಕ್ಕೆ ಒಂದು ಘೋರ ದುರಂತವೂ ಆಗುತ್ತಿತ್ತು. ಈ ದುರಂತವನ್ನು ತಪ್ಪಿಸಿರುವುದು ಮಾತ್ರವಲ್ಲದೆ, ಫ್ರೆಂಚ್ ಚುನಾವಣೆಯ ಎರಡನೇ ಮತ್ತು ಯುರೋಪಿಅಂತಿಮ ಸುತ್ತಿನಲ್ಲಿ ‘ನ್ಯೂ ಪಾಪ್ಯುಲರ್ ಫ್ರಂಟ್’(ಎನ್‍ಎಫ್‍ಪಿ-ನವ ಜನತಾ ರಂಗ) ವಿಜಯಶಾಲಿಯಾಗಿ ಹೊಮ್ಮಿದೆ.

ಫ್ಯಾಸಿಸಂ ಮೂಡಿ ಬರುವ ವಿದ್ಯಮಾನವನ್ನು ವಿವರಿಸುವುದು ಕಷ್ಟದ ಕೆಲಸವೇ ಸರಿ. ಬಂಡವಾಳಶಾಹಿಯು ತನ್ನ ಪ್ರಾಬಲ್ಯಕ್ಕೆ ಬೆದರಿಕೆ ಎದುರಾದಾಗ ಅದನ್ನು ನಿವಾರಿಸಿಕೊಳ್ಳಲು ಫ್ಯಾಸಿಸ್ಟ್ ಶಕ್ತಿಗಳನ್ನು ಬಳಸಿಕೊಳ್ಳುತ್ತದೆ. ಈ ಉದ್ದೇಶಕ್ಕಾಗಿ ದೊಡ್ಡ ಬಂಡವಾಳಗಾರರು ಫ್ಯಾಸಿಸ್ಟ್ ಶಕ್ತಿಗಳೊಂದಿಗೆ ಸಂಬಂಧ ಕುದುರಿಸಿಕೊಳ್ಳುತ್ತಾರೆ ಮತ್ತು ಈ ಫ್ಯಾಸಿಸ್ಟ್ ಶಕ್ತಿಗಳನ್ನು ಕೆಲವು ಅದೃಷ್ಟಹೀನ ಅಲ್ಪಸಂಖ್ಯಾತರ ವಿರುದ್ಧ ಹರಿಹಾಯುವಂತೆ ಉತ್ತೇಜಿಸುತ್ತಾರೆ. ಈ ಫ್ಯಾಸಿಸ್ಟ್ ಶಕ್ತಿಗಳನ್ನು ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಮೂಲಕ ಬಂಡವಾಳಶಾಹಿಯು ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ. ಅಂದರೆ, ಬಂಡವಾಳಶಾಹಿ ಬಿಕ್ಕಟ್ಟು ಉಲ್ಬಣಗೊಂಡ ಕಾಲಘಟ್ಟದಲ್ಲಿ ರಂಗದ ಕೇಂದ್ರದಲ್ಲಿ ಅವತರಿಸುವ ಫ್ಯಾಸಿಸಂ, ಬಂಡವಾಳಶಾಹಿಯನ್ನು ರಕ್ಷಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದುವೇ 1930ರ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಸಂಭವಿಸಿದ ವಿದ್ಯಮಾನ.

ಫ್ಯಾಸಿಸಂಗೆ ಅವಕಾಶದ ಸನ್ನಿವೇಶ

ಕೆಲವು ವರ್ಷಗಳ ಹಿಂದಿನಿಂದಲೂ ಸ್ಥಗಿತತೆಗೆ ಒಳಗಾಗಿರುವ ನವ-ಉದಾರವಾದಿ ಬಂಡವಾಳಶಾಹಿಯು ಒಂದು ದೀರ್ಘಾವಧಿಯ ಬಿಕ್ಕಟ್ಟಿಗೆ ಒಳಗಾಗಿರುವ ಸನ್ನಿವೇಶದಲ್ಲಿ ಫ್ಯಾಸಿಸಂ ಹೊರಹೊಮ್ಮುತ್ತಿರುವ ವಿದ್ಯಮಾನವು ಈಗ ಮತ್ತೊಮ್ಮೆ ಜರುಗುತ್ತಿದೆ. ಬಂಡವಾಳಶಾಹಿಯ ಈ ಸ್ಥಗಿತತೆಗೆ ಸಂಬಂಧಿಸಿ ಕೇವಲ ಒಂದೇ ಒಂದು ಅಂಕಿ ಅಂಶವನ್ನು ಉಲ್ಲೇಖಿಸುವುದಾದರೆ, 2023ರಲ್ಲಿ ಯುರೋಪಿನ 19 ದೇಶಗಳನ್ನು ಒಳಗೊಂಡ ಪ್ರದೇಶದಲ್ಲಿ ಜನಗಳಿಗೆ ಬಳಕೆಗೆ ಸಿಗುವ (disposable) ಒಟ್ಟು ನೈಜ ತಲಾ ವರಮಾನವು (ಅಂದರೆ, ಸರ್ಕಾರದ ತೆರಿಗೆಗಳು ಮತ್ತು ಸಬ್ಸಿಡಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಕುಟುಂಬದ ವರಮಾನ) 2008ರಲ್ಲಿದ್ದ ಮಟ್ಟಕ್ಕಿಂತ ಕೇವಲ ಶೇ. 6.4ರಷ್ಟು ಹೆಚ್ಚಿಗೆ ಇತ್ತು. ಹದಿನೈದು ವರ್ಷಗಳ ಅವಧಿಯಲ್ಲಿ ಈ ಹೆಚ್ಚಳ ನಗಣ್ಯವೇ ಸರಿ.

ಆದರೆ, ಈ ಸಂದರ್ಭದಲ್ಲಿ ಎರಡು ಅಂಶಗಳನ್ನು ಅಧಿಕವಾಗಿ ಪರಿಗಣಿಸಬೇಕಾಗುತ್ತದೆ: ಮೊದಲನೆಯದಾಗಿ, “ಕುಟುಂಬಗಳು” ಎಂಬ ಪದ ಶ್ರೀಮಂತ ಮತ್ತು ಬಡ ಕುಟುಂಬಗಳನ್ನು ಒಳಗೊಂಡಿದೆ. ಆದ್ದರಿಂದ, ಈ ಅವಧಿಯಲ್ಲಿ ಕಂಡುಬಂದ ವರಮಾನಗಳ ಅಸಮತೆಯ ಅಗಾಧ ಹೆಚ್ಚಳವನ್ನು ಗಮನಿಸಿದರೆ, ಬಹುಪಾಲು ಜನರ ಬಳಕೆಗೆ ಸಿಗುವ ನೈಜ ತಲಾ ವರಮಾನವು ಹೆಚ್ಚಾಗಿರುವ ಸಾಧ್ಯತೆ ವಿರಳವೇ; ಎರಡನೆಯದಾಗಿ, ಸಣ್ಣ ಬಂಡವಾಳಗಾರರು ಮತ್ತು ಕಿರು ಉತ್ಪಾದಕರು ಹೊಂದಿದ ಬಂಡವಾಳದ ಸವಕಳಿಯನ್ನು ಕುಟುಂಬದ ಈ ಒಟ್ಟು ವರಮಾನದಿಂದ ಕಡಿತ ಮಾಡಿಲ್ಲ. ಈ ಗುಂಪಿಗೆ ಸೇರಿದ ಕುಟುಂಬಗಳ ಒಟ್ಟು ವರಮಾನದಲ್ಲಿ ಈ ಸವಕಳಿಯ ಅನುಪಾತವು 2008ರಲ್ಲಿ ಇದ್ದುದಕ್ಕಿಂತ (ಸಾಮರ್ಥ್ಯದ ಅಲ್ಪ ಬಳಕೆಯಿಂದಾಗಿ ಬಂಡವಾಳ ಮತ್ತು ಉತ್ಪತ್ತಿಯ ಅನುಪಾತವು ಇಂದು ಹೆಚ್ಚಿನ ಮಟ್ಟದಲ್ಲಿರುವ ಕಾರಣದಿಂದಾಗಿ) ಇಂದು ಹೆಚ್ಚಿನ ಮಟ್ಟದಲ್ಲಿರುವ ಸಾಧ್ಯತೆಯಿದೆ. ಹಾಗಾಗಿ, ಈ ಕಾರಣದಿಂದಲೂ ಸಹ, ಬಹುತೇಕ ಕುಟುಂಬಗಳ ನಿವ್ವಳ ತಲಾ ವರಮಾನವು ಹೆಚ್ಚಿರುವುದು ಅಸಂಭವವೇ. ಹಾಗಾಗಿ, ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಈ ಆರ್ಥಿಕ ಸ್ಥಗಿತತೆಯು ಜನರ ಜೀವನಮಟ್ಟವನ್ನು ಹಿಂಡಿದ ಪರಿಣಾಮವಾಗಿ ಮೂಲಭೂತವಾಗಿ ಅವರಲ್ಲಿ ಮೂಡಿದ ಕೋಪವನ್ನು ಫ್ಯಾಸಿಸಂ ದುರ್ಬಳಕೆ ಮಾಡಿಕೊಳ್ಳುವ ಅವಕಾಶ ಉದ್ಭವಿಸುತ್ತದೆ.

ದೊಡ್ಡ ಬಂಡವಾಳಗಾರರು ಮತ್ತು ಫ್ಯಾಸಿಸ್ಟ್ ಎಳಸುಗಳ ನಡುವೆ ಏರ್ಪಡುವ ಮೈತ್ರಿಯು ವಿವಿಧ ರೀತಿಯಲ್ಲಿ ಸಂಭವಿಸುತ್ತದೆ. ಆರ್ಥಿಕ ಸ್ಥಗಿತತೆಯ ಕಾರಣದಿಂದ ಉಂಟಾದ ಜನರ ಕೋಪವನ್ನು ಬಳಸಿಕೊಳ್ಳಲು, ಫ್ಯಾಸಿಸ್ಟರು ಸಾಮಾನ್ಯವಾಗಿ ದೊಡ್ಡ ಬಂಡವಳಿಗರನ್ನು ವಿರೋಧಿಸುವ ನಿಲುವು ತೆಗೆದುಕೊಳ್ಳುವ ಮೂಲಕ ತಮ್ಮ ಆಟವನ್ನು ಆರಂಭಿಸುತ್ತಾರೆ. ಸಾಂದರ್ಭಿಕವಾಗಿ ಹೇಳುವುದಾದರೆ, ಹಿಟ್ಲರ್ ಮಾಡಿದ್ದು ಇದನ್ನೇ. ದೊಡ್ಡ ಬಂಡವಳಿಗ-ವಿರೋಧಿ ನಿಲುವನ್ನು ಫ್ಯಾಸಿಸ್ಟರು ತೆಗೆದುಕೊಂಡರೂ ಸಹ, ಸಾಮಾನ್ಯವಾಗಿ, ಕೆಲವು ಏಕಸ್ವಾಮ್ಯ ಬಂಡವಾಳಗಾರರು ಬಹಿರಂಗವಾಗಿ ಅಲ್ಲದಿದ್ದರೂ, ರಹಸ್ಯವಾಗಿ ಫ್ಯಾಸಿಸ್ಟರಿಗೆ ಸಹಾಯ ಮಾಡುತ್ತಾರೆ. ಆದರೆ, ಫ್ಯಾಸಿಸ್ಟರು ಅಧಿಕಾರಕ್ಕೆ ಬಂದ ನಂತರ, ತಾವು ದೊಡ್ಡ ಬಂಡವಳಿಗರ ಪಾಲುದಾರರು ಎಂಬುದನ್ನು ಪೂರ್ಣವಾಗಿ ಅವರೇ ಬಯಲು ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಹಳೆಯ ಏಕಸ್ವಾಮ್ಯ-ವಿರೋಧಿ ಘೋಷಣೆಗಳಿಗೆ ನಿಷ್ಠರಾಗಿ ಉಳಿದ ತಮ್ಮ ಬೆಂಬಲಿಗರನ್ನು ನಿರ್ನಾಮ ಮಾಡುವ ಒಂದು ರಕ್ತಸಿಕ್ತ ದಮನಕ್ಕೂ ಇಳಿಯುತ್ತಾರೆ.

ಇದನ್ನು ಓದಿ : ಫ್ರಾನ್ಸಿನ ‘ಎನ್.ಎಫ್‍.ಪಿ.’ ಆರ್ಥಿಕ  ಕಾರ್ಯಕ್ರಮ: ಬಂಡವಾಳಶಾಹಿ ಜಗತ್ತಿನಲ್ಲಿ ಹೊಸ ಗಾಳಿ

ನವ-ಉದಾರವಾದದ ವಿರುದ್ಧ ಫ್ಯಾಸಿಸ್ಟ್ ಗದ್ದಲ

ಈ ವಿಷಯದಲ್ಲಿ ಭಾರತ ಒಂದು ಅಪವಾದವೇ ಸರಿ: ಭಾರತದಲ್ಲಿ ಫ್ಯಾಸಿಸ್ಟ್-ತೆರನ ಮಂದಿಗಳು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುವುದರೊಂದಿಗೇ ದೊಡ್ಡ ಬಂಡವಾಳಗಾರರೊಂದಿಗೆ, ಅದರಲ್ಲೂ ವಿಶೇಷವಾಗಿ ದಿಢೀರನೆ ಏಕಸ್ವಾಮ್ಯ ಹಂತ ತಲುಪಿದ ಕೆಲವು ಬಂಡವಾಳಗಾರರೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವನ್ನು ರಹಸ್ಯವಾಗಿಡಲಿಲ್ಲ. ಆದರೆ, ಫ್ರೆಂಚ್ ಫ್ಯಾಸಿಸ್ಟರು ಏಕಸ್ವಾಮ್ಯ ಬಂಡವಾಳ ವಿರೋಧಿ ಗದ್ದಲದೊಂದಿಗೆ ತಮ್ಮ ಆಟ ಆರಂಭಿಸಿದರು. ಫ್ರೆಂಚ್ ಫ್ಯಾಸಿಸ್ಟ್ ನಾಯಕಿ ಮರೀನೆ ಲೆ ಪೆನ್ ಅವರು ನವ-ಉದಾರವಾದದ ವಿರುದ್ಧವಾಗಿ ಎಷ್ಟು ಬೊಗಳೆ ಹೊಡೆದಿದ್ದರು ಎಂದರೆ, ಗ್ರೀಸ್‌ನಲ್ಲಿ, ಹಿಂದಿನ ಸರ್ಕಾರಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿರಿಜಾ, ಅಂತಿಮವಾಗಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಒತ್ತಡಕ್ಕೆ ಮಣಿದಾಗ, ಸಿರಿಜಾದ ಕ್ರಮ “ನಂಬಿಕೆ ದ್ರೋಹ” ಎಂದು ಬೊಬ್ಬೆ ಹೊಡೆದಿದ್ದರು.

ಆದರೂ, ಮರೀನೆ ಲೆ ಪೆನ್‌ ತಳೆದ ನವ-ಉದಾರವಾದದ ವಿರೋಧಿಯಾಗಿ ತೋರುವ ಈ ನಿಲುವಿನ ಹೊರತಾಗಿಯೂ, ಆಕೆಯ ಪಕ್ಷವನ್ನು ಫ್ರೆಂಚ್ ಸಮೂಹ ಮಾಧ್ಯಮಗಳ ಒಡೆಯ ಮತ್ತು ಬಿಲಿಯನೇರ್ ಹೂಡಿಕೆದಾರ ವಿನ್ಸೆಂಟ್ ಬೊಲ್ಲೋರ್ ಸಂಪೂರ್ಣವಾಗಿ ಬೆಂಬಲಿಸಿದರು. ಮತ್ತು, ಫ್ರೆಂಚ್ ಚುನಾವಣೆಯ ಮುನ್ನಾದಿನ, ಅವರ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಜೋರ್ಡಾನ್ ಬಾರ್ಡೆಲ್ಲಾ ಅವರು ಅದುವರೆಗೂ ನವ-ಉದಾರವಾದದ ವಿರೋಧಿ ಎಂಬಂತೆ ತೋರಿಸಿಕೊಳ್ಳುತ್ತಿದ್ದ ತಮ್ಮ ನಿಲುವಿನ ಬದಲಾಗಿ ಹಣಕಾಸು ಬಂಡವಾಳಕ್ಕೆ ಒಪ್ಪಿಗೆಯಾಗುವ ರೀತಿಯಲ್ಲಿ ಮಾತನಾಡತೊಡಗಿದರು.

ಇಟಲಿಯಲ್ಲಿಯೂ ಇದೇ ರೀತಿಯ ಪ್ರಹಸನ ನಡೆದಿದೆ. ಫ್ಯಾಸಿಸ್ಟರ ನಾಯಕಿ ಗಿಯೊರ್ಜಿಯಾ ಮೆಲೋನಿ, ಮುಚ್ಚು ಮರೆ ಇಲ್ಲದೆ ನವ-ಉದಾರವಾದಿ ಕಾರ್ಯಸೂಚಿಯನ್ನು ಹೊಂದಿದ್ದ ಮತ್ತು ಈ ಹಿಂದೆ ಅಧಿಕಾರದಲ್ಲಿದ್ದ ಮಾರಿಯೋ ಡ್ರಾಘಿ ಅವರ ಪಕ್ಷವು ಅನುಸರಿಸುತ್ತಿದ್ದ ಕಾರ್ಯಕ್ರಮಕ್ಕಿಂತ ವಿಭಿನ್ನವಾದ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳುವುದಾಗಿ ಸೋಗುಹಾಕಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ, ಮೆಲೋನಿ ತನ್ನ ಹಿಂದಿನ ಭರವಸೆಗಳನ್ನು ಗಾಳಿಗೆ ತೂರಿದರು ಮತ್ತು ಹಣಕಾಸು ಬಂಡವಾಳದ ನಿಷ್ಠಾವಂತ ಮಿತ್ರರಾದರು.

ನಿಖರವಾಗಿ ಇದೇ ರೀತಿಯಲ್ಲಿ, ಯುರೋಪಿನ ಫ್ಯಾಸಿಸ್ಟರು ಉಕ್ರೇನ್ ಯುದ್ಧದ ಬಗ್ಗೆಯೂ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಯುರೋಪಿನ ಕಾರ್ಮಿಕ ವರ್ಗವು ಯುದ್ಧವನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ. ರಷ್ಯಾದ ವಿರುದ್ಧ ಅಮೆರಿಕಾ ಹೇರಿದ ನಿರ್ಬಂಧಗಳ ಪರಿಣಾಮವಾಗಿ ಯೂರೋಪಿನ ದೇಶಗಳಲ್ಲಿ ಇಂಧನ ಬೆಲೆಗಳ ತೀವ್ರ ಏರಿಕೆಯಿಂದಾಗಿ ಹಣದುಬ್ಬರ ಉಲ್ಬಣಗೊಂಡಿದೆ. ಯುದ್ಧದ ಕಾರಣದಿಂದ ಉಂಟಾದ ಈ ಹಣದುಬ್ಬರವು ಯುರೋಪಿನ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಯೂರೋಪಿನ ದುಡಿಯುವ ಜನತೆ ಶಾಂತ ಪರಿಸ್ಥಿತಿ ಮರಳುವುದನ್ನು ಬಯಸುತ್ತದೆ. ಕಾರ್ಮಿಕರ ಬೆಂಬಲವನ್ನು ಪಡೆಯುವ ಉದ್ದೇಶದಿಂದ, ಫ್ಯಾಸಿಸ್ಟರು ಯುದ್ಧದ ಬಗ್ಗೆ ಆರಂಭದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಸಾಮ್ರಾಜ್ಯಶಾಹಿ ಅಮೆರಿಕಾದ ನಿಲುವನ್ನು ಅನುಸರಿಸುತ್ತಿದ್ದಾರೆ. ಈ ಫ್ಯಾಸಿಸ್ಟ್‌ ಪಕ್ಷಗಳು ಉದಾರವಾದಿ ಬಂಡವಾಳಶಾಹಿ ಪಕ್ಷಗಳ ಇಬ್ಬಂದಿ ನೀತಿಯನ್ನು ಚಾಚೂ ತಪ್ಪದೆ ಅನುಸರಿಸುತ್ತವೆ. ಮೆಲೋನಿ ಮಾಡಿದ್ದು ಇದನ್ನೇ. ಚುನಾವಣೆಯ ಮೊದಲು ಫ್ರಾನ್ಸ್‌ನಲ್ಲಿ ಬಾರ್ದೆಲ್ಲಾ ಮಾಡುತ್ತಿದ್ದುದು ಇದನ್ನೇ. ತಾವು ಹೇಳಿಕೊಳ್ಳುವ ಶಾಂತಿ-ಪರ ನಿಲುವಿನಿಂದ ಇವರೆಲ್ಲರೂ ಸಾಮಾನ್ಯವಾಗಿ ಹಿಂದೆ ಸರಿಯುತ್ತಾರೆ.

ಫ್ಯಾಸಿಸ್ಟರ ಸೋಗಿಗೆ ಅವಕಾಶ ಕಲ್ಪಿಸಿದ ಬೇಜವಾಬ್ದಾರಿತನ

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುವ ಮತ್ತು ಕಾರ್ಮಿಕ ವರ್ಗವನ್ನು ವಿಭಜಿಸುವ ಫ್ಯಾಸಿಸಂ, ಕಾರ್ಮಿಕ ವರ್ಗವನ್ನು ವಂಚಿಸುವ ಅಪರಾಧವನ್ನೂ ಮಾಡುತ್ತದೆ. ಆರ್ಥಿಕ ನೀತಿಯಲ್ಲಾಗಲಿ ಅಥವಾ ಉಕ್ರೇನ್‌ ಯುದ್ಧದ ಬಗ್ಗೆಯಾಗಲಿ, ಉದಾರವಾದಿ ಬಂಡವಾಳಶಾಹಿ ರಾಜಕೀಯ ಪಕ್ಷಗಳಿಗಿಂತ ತಾನು ಭಿನ್ನವೆಂದು ಅದು ಸೋಗು ಹಾಕುತ್ತದೆ. ಇಸ್ಲಾಮ್-ಭೀತಿಯನ್ನು ಉತ್ತೇಜಿಸುವಲ್ಲಿ, ವಲಸಿಗರ ವಿರುದ್ಧ ಹಗೆತನವನ್ನು ಉತ್ತೇಜಿಸುವಲ್ಲಿ, ಉದಾರವಾದಿ ಪಕ್ಷಗಳಿಗೆ ಹೋಲಿಸಿದರೆ, ಖಂಡಿತವಾಗಿಯೂ ಅದರ ಗುರುತು ಉಗ್ರ ಬಲಪಂಥವೇ. ಆದರೆ ಶಾಂತಿ ಮತ್ತು ಯುದ್ಧದ ವಿಷಯಗಳಲ್ಲಿ ಮತ್ತು ಆರ್ಥಿಕ ನೀತಿಗಳ ವಿಷಯದಲ್ಲಿ ಅದು ಉದಾರವಾದಿ ಪಕ್ಷಗಳಿಂದ ಪೂರ್ಣವಾಗಿ ಭಿನ್ನವಲ್ಲ. ಆದರೂ ಕಾರ್ಮಿಕ ವರ್ಗದ ಬೆಂಬಲವನ್ನು ಗಳಿಸುವ ಉದ್ದೇಶದಿಂದ ತಾನು ಭಿನ್ನವೆಂದು ಅದು ನಟಿಸುತ್ತದೆ.ಫ್ಯಾಸಿಸಂ

ಈ ರೀತಿಯಲ್ಲಿ ಸೋಗು ಹಾಕುವ ಅವಕಾಶ ಹುಟ್ಟಿಕೊಳ್ಳಲು ಕಾರಣವೆಂದರೆ, ಪ್ರಮುಖ ಎಡ ಪಂಥೀಯ ವಿಭಾಗಗಳು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ತಮ್ಮ ಜವಾಬ್ದಾರಿಯನ್ನು ತೊರೆದಿರುವುದು ಮತ್ತು ಬಂಡವಾಳಶಾಹಿ ರಾಜಕೀಯ ಪಕ್ಷಗಳ ಜಾಡು ಹಿಡಿದಿರುವುದು. ರಷ್ಯಾದ ವಿರುದ್ಧ ಪಾಶ್ಚಾತ್ಯ ದೇಶಗಳು ಹೇರಿದ ನಿರ್ಬಂಧಗಳಿಂದಾಗಿ ಉಂಟಾದ ಹಣದುಬ್ಬರದಿಂದ ದುಡಿಯುವ ವರ್ಗವು ಬಲವಾದ ಹೊಡೆತ ತಿಂದಿರುವ ಮತ್ತು ಉಕ್ರೇನ್ ಯುದ್ಧವನ್ನು ವಿರೋಧಿಸುವ ಜರ್ಮನಿಯಲ್ಲಿ, ಕೇವಲ ಸೋಶಲ್‍ ಡೆಮಾಕ್ರೇಟರು ಮಾತ್ರವಲ್ಲದೆ ಎಡ ಪಕ್ಷಗಳೂ ಸಹ ಸಾಮ್ರಾಜ್ಯಶಾಹಿ ಅಮೆರಿಕಾದ ಹಿಂದೆ ನೆರೆದಿವೆ. ಇಂತಹ ನಿಲುವನ್ನು ವಿರೋಧಿಸಿ ಸಿಡಿದು ಬಂದ, ಸಹ್ರಾ ವಾಗೆನ್‌ಕ್ನೆಕ್ಟ್ ನೇತೃತ್ವದ ಮತ್ತು ಶಾಂತಿಯ ಪರವಾಗಿ ಅಭಿಯಾನ ನಡೆಸುತ್ತಿರುವ ಒಂದು ಸಣ್ಣ ಗುಂಪಿಗೆ ಜನರ ಬೆಂಬಲ ಹೆಚ್ಚುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇದೇ ರೀತಿಯಲ್ಲಿ, ಯುರೋಪಿನ ಎಡ ಪಂಥದ ಗಮನಾರ್ಹ ವಿಭಾಗಗಳು ಈಗ ನವ-ಉದಾರವಾದದ ಕಟ್ಟಾ ಸಮರ್ಥಕರಾಗಿರುವ ಸನ್ನಿವೇಶವು ಕಾರ್ಮಿಕ ವರ್ಗವನ್ನು ದಾರಿತಪ್ಪಿಸುವ ಫ್ಯಾಸಿಸ್ಟರ ಯೋಜನೆಗೆ ಪೂರಕವಾಗಿದೆ. ಅಂದರೆ, ಎಡಪಂಥೀಯರ ಪ್ರಮುಖ ವಿಭಾಗಗಳ ಶರಣಾಗತಿಯ ಕಾರಣದಿಂದಾಗಿ ಯುರೋಪಿನಲ್ಲಿ ಫ್ಯಾಸಿಸಂ ವೇಗವಾಗಿ ಬೆಳೆಯುತ್ತಿದೆ.

ಇಲ್ಲಿಯೇ ಫ್ರಾನ್ಸ್ ವಿಭಿನ್ನವಾಗಿ ಕಾಣುತ್ತಿರುವುದು. ಎಡಪಂಥೀಯರು ‘ನವ ಜನತಾರಂಗ’(ನ್ಯೂ ಪಾಪ್ಯುಲರ್ ಫ್ರಂಟ್) ರೂಪಿಸಲು ಒಗ್ಗೂಡಿದರು ಮಾತ್ರವಲ್ಲ, ನವ-ಉದಾರವಾದವನ್ನು ಮೀರಿ ಹೋಗುವ ಒಂದು ಆರ್ಥಿಕ ಕಾರ್ಯಕ್ರಮವನ್ನು ಈ ರಂಗವು ಅಂಗೀಕರಿಸುವಂತೆ ನೋಡಿಕೊಂಡರು. ಫ್ಯಾಸಿಸ್ಟರನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಸಾಮಾನ್ಯ ಬಯಕೆಯು ಅವರೆಲ್ಲರಿಗೂ ಇದ್ದರೂ ಸಹ, ಒಂದು ಪರ್ಯಾಯ ಆರ್ಥಿಕ ಕಾರ್ಯಸೂಚಿಯನ್ನು ಈ ಹಿಂದೆ ಹೊಂದದೇ ಇದ್ದ ಕಾರಣದಿಂದಾಗಿ ಅವರ ಬಯಕೆಯು ಈ ವರೆಗೂ ಕೈಗೂಡಿರಲಿಲ್ಲ. ಹಾಗಾಗಿ, ಫ್ರೆಂಚ್ ಫ್ಯಾಸಿಸ್ಟರ ಬೆಳವಣಿಗೆ ಸುಗಮವಾಗಿತ್ತು. ಈ ಪರಿಸ್ಥಿತಿಯನ್ನು ಮ್ಯಾಕ್ರೊನ್, ಪರಿಸ್ಥಿತಿ ದುಡಿಯುವ ಜನರಿಗೆ ಹೆಚ್ಚು ಹೆಚ್ಚು ಅಸಹನೀಯವಾಗುತ್ತಿದ್ದರೂ ಸಹ, ತಾನು ಅಧಿಕಾರದಲ್ಲಿ ಉಳಿಯಲು ಮತ್ತು ನವ-ಉದಾರವಾದಿ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಬಳಸಿಕೊಂಡರು. ಹಾಗಾಗಿ, ನವ-ಉದಾರವಾದಿ ಆರ್ಥಿಕ ನೀತಿಗಳ ಅನುಷ್ಠಾನದಿಂದಾಗಿ ಒಂದೆಡೆಯಲ್ಲಿ ಮ್ಯಾಕ್ರೋನ್ ರ ಜನಪ್ರಿಯತೆ ಕುಗ್ಗುತ್ತಾ ಹೋದಂತೆ, ಇನ್ನೊಂದೆಡೆಯಲ್ಲಿ ಈ ಅಸಹನೀಯ ಆರ್ಥಿಕ ನೀತಿಗಳ ವಿರುದ್ಧ ಮಾತನಾಡುವ ಮುಖ್ಯ ಧ್ವನಿಯಾಗಿ ಕಾಣಿಸಿಕೊಂಡ ಫ್ಯಾಸಿಸ್ಟರು ಜನರಿಗೆ ಹೆಚ್ಚು ಹೆಚ್ಚು ಸ್ವೀಕಾರಾರ್ಹರಾಗುತ್ತಾ ಹೋದರು. ಈ ದ್ವಂದ್ವ ಈಗ ಮುರಿದು ಬಿದ್ದಿದೆ ಎಂಬುದು ಒಂದು ಮಹತ್ವದ ಅಂಶವನ್ನು ಈ ಬೆಳವಣಿಗೆ ಎತ್ತಿ ತೋರಿಸುತ್ತದೆ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುದ್ಧವನ್ನು ಕೊನೆಗೊಳಿಸುವುದೇ ಏಕೈಕ ಸುಸಂಗತ ಫ್ಯಾಸಿಸ್ಟ್-ವಿರೋಧಿ ಕಾರ್ಯಕ್ರಮವಾಗಿತ್ತು; ಪರ್ಯಾಯ ಆರ್ಥಿಕ ಕಾರ್ಯಸೂಚಿಯ ಅಗತ್ಯವಿರಲಿಲ್ಲ. ಯುದ್ಧ ಕಾಲದಲ್ಲಿ ಪರಿಣಾಮಕಾರಿಯಾದ ಸಮಾನ ಕಾರ್ಯಕ್ರಮವಿಲ್ಲದ ಒಂದು ಫ್ಯಾಸಿಸ್ಟ್-ವಿರೋಧಿ ರಂಗವು, ಒಂದು ಪೂರ್ಣ ಪ್ರಮಾಣದ ಯುದ್ಧ ನಡೆಯುತ್ತಿರದ ಪ್ರಸ್ತುತ ಸಂಧಿಕಾಲದಲ್ಲಿ ಪ್ರತಿಕೂಲ ಪರಿಣಾಮವನ್ನೇ ಉಂಟು ಮಾಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನವ-ಉದಾರವಾದವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವ, ಸಾಮ್ರಾಜ್ಯಶಾಹಿ-ಉತ್ತೇಜಿತ ಸ್ಥಳೀಯ ಯುದ್ಧಗಳನ್ನು ಸಂಪೂರ್ಣವಾಗಿ ಸಮ್ಮತಿಸುವ ಮತ್ತು ಜನರ ಜೀವನವನ್ನು ಸುಧಾರಿಸುವ ಕಾರ್ಯಸೂಚಿಯನ್ನು ರೂಪಿಸಲು ಮುಂದಾಗದ ಫ್ಯಾಸಿಸ್ಟ್-ವಿರೋಧಿ ಶಕ್ತಿಗಳ ಒಗ್ಗಟ್ಟು, ಅಲ್ಪಾವಧಿಯಲ್ಲಿ ಎಷ್ಟೇ ಪರಿಣಾಮಕಾರಿಯಾಗಿ ಕಂಡುಬಂದರೂ, ಕಾಲಕ್ರಮದಲ್ಲಿ ಫ್ಯಾಸಿಸ್ಟರ ಅವಕಾಶಗಳನ್ನೇ ಹೆಚ್ಚಿಸುವ ವಿರೋಧಾಭಾಸದ ಪರಿಣಾಮವನ್ನು ಬೀರುತ್ತದೆ.ಫ್ಯಾಸಿಸಂ

ಯುರೋಪಿನ ಎಡ ಪಂಥದ ವಿಭಾಗಗಳ ಈ ಶರಣಾಗತಿ ಯುಗೋಸ್ಲಾವಿಯದ ಮೇಲೆ ಸಾಮ್ರಾಜ್ಯಶಾಹಿಯ ಬಾಂಬ್ ದಾಳಿ ನಡೆದ ಸಮಯದಲ್ಲಿ ಅದಕ್ಕೆ ಎಡಪಂಥದ ಒಂದು ಗಮನಾರ್ಹ ವಿಭಾಗವು ಮೌನ ಸಮ್ಮತಿ ನೀಡಿದಾಗಿನಿಂದಲೇ ಆರಂಭವಾಗಿ ಬಹಳ ದೀರ್ಘ ಕಾಲದಿಂದ ನಡೆದುಕೊಂಡು ಬಂದಿದೆ. ಸಾಮ್ರಾಜ್ಯಶಾಹಿಯ ಬಾಲ ಹಿಡಿಯುವ ಈ ಪ್ರವೃತ್ತಿಯು ಈಗ ಸಾಮ್ರಾಜ್ಯಶಾಹಿಯ ಉಕ್ರೇನ್‌ ಯೋಜನೆಗೆ ಮತ್ತು ನವ-ಉದಾರವಾದವನ್ನು ಬೆಂಬಲಿಸುವ ಮಟ್ಟಿಗೆ ಅವರನ್ನು ಕೊಂಡೊಯ್ದಿದೆ. ಅವರ ಈ ನಡವಳಿಕೆಯು ಫ್ಯಾಸಿಸ್ಟರು ತಾವು ಶಾಂತಿ ಧೂತರು ಮತ್ತು ವಿಮೋಚನೆಯ ಹರಿಕಾರರು ಎಂಬಂತೆ ಬಿಂಬಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ, ಕೊನೆಯ ಪಕ್ಷ ಏಕಸ್ವಾಮ್ಯ ಬಂಡವಾಳದೊಂದಿಗಿನ ಅವರ ಮೈತ್ರಿಯು ಸ್ಪಷ್ಟವಾಗಿ ಬಯಲಾಗುವ ವರೆಗಾದರೂ ಇದಕ್ಕೆ ಅವಕಾಶ ಕಲ್ಪಿಸಿದೆ. ಎಡಪಂಥೀಯರು ನವ-ಉದಾರವಾದವನ್ನು ಮೀರಿ ಮುಂದೆ ಹೋಗುವ ಅಜೆಂಡಾವನ್ನು ಅಳವಡಿಸಿಕೊಳ್ಳುವ ಕ್ರಮ ಫ್ಯಾಸಿಸ್ಟರು ನಿಂತ ನೆಲ ಕುಸಿಯುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಫ್ರಾನ್ಸ್ ತೋರಿಸಿಕೊಟ್ಟಿದೆ. ಫ್ಯಾಸಿಸಂ

ಇದನ್ನು ನೋಡಿ : ಫ್ರಾನ್ಸ್ ಚುನಾವಣೆ : ನವ-ಫ್ಯಾಸಿಸ್ಟರಿಗೆ ಸೋಲು, ಎಡ ಪ್ರಗತಿಪರರಿಗೆ ಗೆಲುವು Janashakthi Media

 

Donate Janashakthi Media

Leave a Reply

Your email address will not be published. Required fields are marked *