ಅಂಗನವಾಡಿಗಳನ್ನು ಸರ್ಕಾರ 6 ತಿಂಗಳು ಮುಚ್ಚಿಬಿಡಲಿ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ವ್ಯಂಗ್ಯವಾಡಿದ್ದಾರೆ
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವಂತೆ ತುಮಕೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತೊಂದು ಹೊರೆಯನ್ನು ಗೃಹಜ್ಯೋತಿ ಯೋಜನೆಯ ಮೂಲಕ ಹೊರಿಸಲು ಜಿಲ್ಲಾಡಳಿತ ಸಿದ್ದವಾಗಿದೆ.
ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗ್ರಾಮದಲ್ಲಿ ಯೋಜನೆಗೆ ನೋಂದಾಯಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿರುವುದರಿಂದ ಈ ಸುತ್ತೋಲೆ ಹೊರಡಿಸಿರುವುದಾಗಿ ಉಪನಿರ್ದೇಶಕರು ಪತ್ರದಲ್ಲಿ ಹೇಳಿದ್ದಾರೆ. ಆದರೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಈ ಸುತ್ತೋಲೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಂಗನವಾಡಿಗಳ ಸುತ್ತ ಸಮಸ್ಯೆಗಳ ಹುತ್ತ : ಬಾಡಿಗೆ ಹಣವೂ ಇಲ್ಲ, ಮೊಟ್ಟೆ ಹಣವೂ ಇಲ್ಲ
ಸುತ್ತೋಲೆಯಲ್ಲಿ, “ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಗೃಹಜ್ಯೋತಿ ಯೋಜನೆಯಡಿ ಅರ್ಹ ಫಲಾನುಭವಿಗಳ ಮಾಹಿತಿಯನ್ನು ನೊಂದಾಯಿಸಲು ಜಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗ್ರಾಮದಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವುದರಿಂದ, ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಹ ಫಲಾನುಭವಿಗಳ ಮಾಹಿತಿಯನ್ನು ನೋಂದಾಯಿಸಲು ಸಹಕರಿಸಲು ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.
ನೋಂದಾವಣೆ ವಿಷಯದ ಪ್ರಗತಿ ವರದಿಯನ್ನು ದಿನಾಂಕ 04-6-2023 ಮತ್ತು ದಿನಾಂಕ 25-06-2023 ರಂದು ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.
ಯೋಜನೆ ಪ್ರಾರಂಭವಾಗಿ ಏಳು ದಿನಗಳಾದರೂ ಸರ್ವರ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ರಾಜ್ಯದಾದ್ಯಂತ ಸರ್ವರ್ ಸಮಸ್ಯೆಗಳ ದೂರು ನಿರಂತರವಾಗಿ ಕೇಳಿಬರುತ್ತಲೆ.
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಈ ಕೆಲಸಗಳಿಗಾಗಿ ಅಂಗನವಾಡಿಗಳನ್ನು 6 ತಿಂಗಳು ಮುಚ್ಚಿಬಿಡಲಿ. ನಂತರ ಅವರಿಗೆ ಬೇಕಾಗಿರುವ ಎಲ್ಲಾ ಕೆಲಸಗಳನ್ನು ಕಾರ್ಯಕರ್ತೆಯರಿಂದ ಮಾಡಿಸಿಕೊಂಡು ಅಂಗನವಾಡಿ ತೆರೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗೃಹಜ್ಯೋತಿ ಯೋಜನೆಯನ್ನು ತಾತ್ವಿಕವಾಗಿ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅದನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಬೇಕಾದರೆ ಬೇರೆ ಸಿಬ್ಬಂದಿಗಳನ್ನು ಬಳಸಿಕೊಳ್ಳಲಿ. ಒಂದು ವೇಳೆ ಅಂಗನವಾಡಿ ಕಾರ್ಯಕರ್ತೆಯರು ಈ ಕೆಲಸ ಮಾಡಿಲ್ಲವೆಂದರೆ, ಸ್ಥಳೀಯ ನಿವಾಸಿಗಳು ಅವರ ಮೇಲೆ ಮನಸ್ತಾಪ ಪ್ರಾರಂಭಿಸುತ್ತಾರೆ. ಇದರಿಂದ ಕಾರ್ಯಕರ್ತೆಯರಿಗೆ ಮತ್ತಷ್ಟು ಸಮಸ್ಯೆಗಳಾಗುತ್ತವೆ” ಎಂದು ಅವರು ಹೇಳಿದರು.
“ಈಗಾಗಲೆ ಇ-ಸರ್ವೆ ಎಂಬ ಹೆಸರಿನಲ್ಲಿ ಶಿಕ್ಷೆ ನೀಡಲು ಹೊರಡುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತೆಯರ ಕೈಯ್ಯಲ್ಲಿ ಮಾಡಿಸುವುದಿಲ್ಲ ಎಂದು ಮೊನ್ನೆ ಮೊನ್ನೆ ಸಚಿವರು ಹೇಳಿದ್ದರು. ಜೊತೆಗೆ ಇಲಾಖೆಯ ಕೇಂದ್ರ ಕಚೇರಿಯಿಂದ ನೀಡುವ ಕೆಲಸ ಬಿಟ್ಟು, ಜಿಲ್ಲಾಧಿಕಾರಿಗಳು ಬೇರೆ ಯಾವುದೆ ಕೆಲಸ ಕೊಡದಂತೆ ನಾವು ಸೂಚಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ನಮಗೆ ಮಾತು ಕೊಟ್ಟಿದ್ದರು. ಆದರೆ ತುಮಕೂರು ಜಿಲ್ಲಾಧಿಕಾರಿಗಳು ತಮ್ಮ ಇಷ್ಟ ಬಂದಂತೆ ಎಲ್ಲಾ ಕೆಲಸಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನೆ ಮಾದರಿಯಾಗಿಟ್ಟು ಬೇರೆ ಜಿಲ್ಲಾಧಿಕಾರಿಗಳು ಆದೇಶ ನೀಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಂಗನವಾಡಿ ನೌಕರರ ಮೇಲಿನ ಮೊಕದ್ದಮೆ ಹಿಂತೆಗೆದುಕೊಳ್ಳಲು ಜನವಾದಿ ಮಹಿಳಾ ಸಂಘಟನೆ ಒತ್ತಾಯ
ಯಾವುದೇ ಮುಲಾಜಿಲ್ಲದೆ ಹೆಚ್ಚುವರಿ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಂದ ಬಿಡಿಸಬೇಕಾಗಿದೆ. ಸರ್ಕಾರ ಅಡಿಯಲ್ಲಿ ಬೇರೆ ಬೇರಿ ಸಿಬ್ಬಂದಿಗಳು ಇದ್ದಾರೆ. ಅವರ ಮುಖಾಂತರವೂ ಈ ಕೆಲಸಗಳನ್ನು ಮಾಡಿಸಲಿ ಎಂದು ವರಲಕ್ಷ್ಮಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (AITUC) ರಾಜ್ಯ ಅಧ್ಯಕ್ಷರಾದ ಬಿ. ಅಮ್ಜದ್ ಅವರು ಮಾತನಾಡಿ, “ಅಂಗನವಾಡಿಗಳಲ್ಲಿ ಈಗಾಗಲೆ ಸಾಕಷ್ಟು ಕೆಲಸಗಳು ಇವೆ. ಕಾರ್ಯಕರ್ತೆಯರನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಬಾರದು. ಇದರಿಂದಾಗಿ ಅಂಗನವಾಡಿ ಕೆಲಸಗಳಿಗೆ ಬಹಳ ತೊಂದರೆ ಉಂಟಾಗುತ್ತಿದೆ ಎಂದು ಎಂದು ಈಗಾಗಲೆ ನಾವು ಅಧಿಕಾರಿಗಳು ಜೊತೆಗೆ ಮಾತನಾಡಿ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕಾರ್ಯಕರ್ತೆಯನ್ನು ಜೀತದಾಳುಗಳ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರದ ಈ ನಡೆಯನ್ನು ವಿರೋಧಿಸಿ 27ನೇ ತಾರೀಕಿಗೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ :ಅಂಗನವಾಡಿಗಳ ಸುತ್ತ ಸಮಸ್ಯೆಗಳ ಹುತ್ತ : ಬಾಡಿಗೆ ಹಣವೂ ಇಲ್ಲ, ಮೊಟ್ಟೆ ಹಣವೂ ಇಲ್ಲ