ನವದೆಹಲಿ:ಫೆ.05 : ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ರಾಜ್ಯಧಾನಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಬೆಂಬಲಿಸಿದ ಪತ್ರಕರ್ತರು, ಸಂಪಾದಕರು, ಪ್ರಗತಿಪರ ಚಿಂತಕರು, ರೈತ ಮುಖಂಡರ ಮೇಲೆ ಎಫ್ ಐ ಆರ್ ಸುರಿಮಳೆ ನಡೆಯುತ್ತಿದ್ದು ಈಗ ಅಂತರಾಷ್ಟ್ರೀಯ ಸೆಲೆಬ್ರಿಟಿಗಳಿಗೂ ತಟ್ಟಿದೆ.
ಕಳೆದ ಎರಡು ತಿಂಗಳಿನಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಂಡಿದೆ. ಅಂತರಾಷ್ಟ್ರೀಯ ವಲಯದಿಂದಲ್ಲೂ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ರೈತರ ಹೋರಾಟ ಮತ್ತಷ್ಟು ತಿರುವು ಪಡೆದಿಕೊಂಡಿದೆ.
ಪ್ರತಿಭಟನೆಯನ್ನು ಬೆಂಬಲಿಸಿ ಅಂತರರಾಷ್ಟ್ರೀಯ ವಲಯದಿಂದ ಬೆಂಬಲ ವ್ಯಕ್ತವಾಗಿದೆ. ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರು ಕೂಡ ತಮ್ಮ ಟ್ವೀಟ್ ಮೂಲಕ ಬೆಂಬಲ ಹಂಚಿಕೊಂಡಿದ್ದಲ್ಲದೇ ಹೋರಾಟ ಅರ್ಥ ಮಾಡಿಕೊಳ್ಳಲು ಮತ್ತು ಬೆಂಬಲಿಸಲು ಬೇಕಾದ ಮಾಹಿತಿ ಉಳ್ಳ ‘ಟೂಲ್ ಕಿಟ್’ ನ್ನು ಹಂಚಿಕೊಂಡಿದ್ದಳು. ಇಲ್ಲಿ ‘ಟೂಲ್ ಕಿಟ್” ಮಾಹಿತಿ ಇರುವ ದಾಖಲೆಗಳ ಫೋಲ್ಡರ್ (ಆಕರ) ಅಷ್ಟೆ’
ಗ್ರೇಟಾ ಅವರು ಹಂಚಿಕೊಂಡ “ಟೂಲ್ ಕಿಟ್” ಮೇಲೆ ಈಗ ಎಫ್ ಐ ಆರ್ ದಾಖಲಾಗಿದ್ದು, ಅದಕ್ಕೆ ಪೋಲಿಸ್ ವರಿಷ್ಠಾಧಿಕಾರಿ ಕೊಟ್ಟ ಕಾರಣಗಳು ಹೀಗಿವೆ: ಅದು ದೇಶದಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ಯೋಜನೆ ಒಳಗೊಂಡಿದೆ. ಅಲ್ಲದೆ ಜನವರಿ 23 ಮತ್ತು 26 ರ “ಡಿಜಿಟಲ್ ಸ್ಟ್ರೈಕ್ ” ನಡೆಸುವ ಕಾರ್ಯಯೋಜನೆಯನ್ನು ವಿವರಿಸಿದೆ. ಹಾಗಾಗಿ ಇದನ್ನು ಬರೆದಿರುವ ಮತ್ತೆ ಇದರ ಸಂಚು ರೂಪಿಸಿದ ಮತ್ತು ದೇಶದ್ರೋಹದ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದೆ. ಮತ್ತು ಈ “ಟೂಲ್ ಕಿಟ್” ನ್ನು ಖಲಿಸ್ತಾನಿ ಸಂಘಟನೆಗಳು ಸಿದ್ದಪಡಿಸಿವೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ ಎಂದು ದೆಹಲಿ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ತಿಳಿಸಿದ್ದಾರೆ.
ಗ್ರೇಟಾ ಹಂಚಿಕೊಂಡಿದ್ದ ಟ್ವೀಟ್ ನ ಟೂಲ್ ಕಿಟ್ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ. ಆದರೆ ವಾಸ್ತವದಲ್ಲಿ ಟೂಲ್ ನಲ್ಲಿ ಏನಿದೆ ಎಂದು ಬಹುತೇಕರಿಗೆ ತಿಳಿಯದ ವಿಷಯವಾಗಿದೆ. ಹಾಗಾದರೇ ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ನಲ್ಲಿ ಏನಿದೆ?
ಭಾರತದ ರೈತರ ಜತೆ ಚರ್ಚೆ ನಡೆಸದೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವು ರೈತರನ್ನು ಕಾರ್ಪೊರೇಟ್ ಕಂಪನಿಗಳ ನಿಯಂತ್ರಣಕ್ಕೆ ಸಿಲುಕಿಸುತ್ತವೆ. ಇವುಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿ. ಅವರ ಹೋರಾಟದಲ್ಲಿ ಭಾಗಿಯಾಗಿ ಎಂದು ಟೂಲ್‌ಕಿಟ್‌ನಲ್ಲಿ ಹೇಳಲಾಗಿದೆ. ಕ್ರಿಪ್ಟೋಪ್ಯಾಡ್‌ನಲ್ಲಿ ಈ ಟೂಲ್‌ಕಿಟ್ ಇದೆ. ಇದನ್ನು ಯಾರು ಸಿದ್ಧಪಡಿಸಿದ್ದಾರೆ, ಅಪ್‌ಲೋಡ್ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ.
ಈ ಟೂಲ್‌ಕಿಟ್‌ನಲ್ಲಿ ರೈತ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಫೆಬ್ರುವರಿ 13/14ರಂದು ಡಿಜಿಟಲ್ ಸ್ಟ್ರೈಕ್ ನಡೆಸಿ. ಸಾಮಾಜಿಕ ಜಾಲತಾಣಗಳಲ್ಲಿ #FarmersProtest #StandWithFarmers ಹ್ಯಾಶ್‌ಟ್ಯಾಗ್ ಬಳಸಿ, ಪೋಸ್ಟ್ ಮಾಡಿ. ಭಾರತದ ರಾಯಭಾರ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ. ಫೆಬ್ರುವರಿ 13/14ಕ್ಕೂ ಮೊದಲೂ ಪ್ರತಿಭಟನೆ ನಡೆಸಿ. #AskIndiaWhy ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿ. ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಟ್ಯಾಗ್ ಮಾಡಿ ಎಂದು ಕಿಟ್ ನಲ್ಲಿ ಕರೆ ನೀಡಲಾಗಿದೆ.
ಪ್ರಮುಖವಾದ ಇನ್ನೊಂದು ವಿಚಾರ ಜನವರಿ 23, 26ರ ಪ್ರತಿಭಟನೆಯ ವಿಚಾರ ಟೂಲ್ ಕೀಟ್ ನಲ್ಲಿ ಇದೆ ಎಂದು ಪೋಲಿಸರು ಹೇಳಿದ್ದಾರೆ. ಆದರೆ ಆ ಮಾಹಿತಿ ಇಲ್ಲ. ಇದರ ಬಗ್ಗೆ ಸೂಕ್ತ ದಾಖಲೆಗಳು ಇಲ್ಲ.
ಇದು ದೇಶದ ಆತಂಕರಿಕ ವಿಚಾರ. ಇದನ್ನು ಕೇಳುವವರಿಂದ ದೇಶದ ಶಾಂತಿ ಕದಡುವುದು, ಹೋರಾಟದ ಹೆಸರಿನಲ್ಲಿ ದೇಶ ವಿರೋಧಿ ಶಕ್ತಿಗಳು ತಮ್ಮ ಬೆಳೆ ಬೆಯಿಸುತ್ತಿವೆ, ಎಂದು ಪೋಲಿಸರು ಆರೋಪಿಸುತ್ತಿದ್ದಾರೆ. ವಿರೋಧದ ನಡುವೆಯೂ ಗೇಟಾ ಅವರು ರೈತರ ಪರವಾಗಿ ನನ್ನ ಬೆಂಬಲ ಇದೆ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.
ಜನಶಕ್ತಿ ಯಿಂದ ಹಲವಾರು ವಿಚಾರಗಳು ತಿಳಿಯುತ್ತಿದೆ. ಹೀಗೆಯೇ ಮುಂದುವರೆಯಲಿ.
ವಸ್ತುಸ್ಥಿತಿ ಎಲ್ಲರಿಗೂ ತಿಳಿಯಬೇಕು.. ಮಾಧ್ಯಮ ಇನ್ನೂ ಬದುಕಿದೆ