ಗ್ರೇಟರ್ ನೋಯ್ಡಾ ರೈತರ ಭೂ ಹೋರಾಟಕ್ಕೆ ಮಹತ್ವಪೂರ್ಣ ಯಶಸ್ಸು

ಉತ್ತರಪ್ರದೇಶ: ಜೂನ್ 28 ರಂದು ಗ್ರೇಟರ್‍ ನೋಯ್ಡಾದ ಹಳ್ಳಿಗಳಲ್ಲಿ , ಜುಲೈ 10 ರ ಮೊದಲು ದೇಶದ ಎಲ್ಲಾ ಹಳ್ಳಿಗಳಲ್ಲಿ ವಿಜಯ ದಿನಾಚರಣೆಗೆ ಎಐಕೆಎಸ್‍ ಕರೆ ಉತ್ತರಪ್ರದೇಶದ ನೋಯ್ಡಾದಲ್ಲಿ ಏಪ್ರಿಲ್ 25ರಂದು ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (ಜಿಎನ್‌ಐಡಿಎ) ಎದುರು ಆರಂಭವಾದ ಆ ಪ್ರದೇಶದ ರೈತರ ಹೋರಾಟ 61 ದಿನಗಳ ಹಗಲು ರಾತ್ರಿ ಧರಣಿಯ ನಂತರ ಕೊನೆಗೂ ಜಯಶಾಲಿಯಾಗಿದೆ.

ಈ ಸಾಧನೆಗೆ ಗ್ರೇಟರ್ ನೋಯ್ಡಾದ ರೈತರನ್ನು ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್) ಅಭಿನಂದಿಸುತ್ತ ಇದು ಅಖಿಲ ಭಾರತ ಮಹತ್ವ ಹೊಂದಿರುವ ಒಂದು ವಿಜಯ ಎಂದು ಹೇಳಿದೆ. ಈ ಗೆಲುವು ಮಹತ್ವದ್ದಾಗಿದೆ. ಈ ಸಾಧನೆಯು ದೇಶಾದ್ಯಂತ ಭೂ ಸ್ವಾಧೀನದಿಂದ ಹಾನಿಗೊಳಗಾದ ಮತ್ತು‘ಭೂಮಿಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು (ಸ್ವಾಧೀನ, ಪುನರ್ವಸತಿ ಮತ್ತು ಮುನರ್ವ್ಯವಸ್ಥೆ) [LARR] ಕಾಯಿದೆ 2013’ ನೀಡಿದ ಹಕ್ಕುಗಳಿಂದ ವಂಚಿತರಾದ ಎಲ್ಲಾ ರೈತರು ಮತ್ತು ಹಿಡುವಳಿದಾರರಿಗೆ ಸಹಾಯಕಾರಿಯಾಗಿದೆ.

ಗ್ರೇಟರ್ ನೋಯ್ಡಾ ಗ್ರಾಮಗಳ ರೈತರಿಗೆ 28ನೇ ಜೂನ್ 2023 ಅನ್ನು ವಿಜಯ ದಿನವನ್ನಾಗಿ ಆಚರಿಸಲು ಎಐಕೆಎಸ್ ಕರೆ ನೀಡಿದೆ. ದೇಶಾದ್ಯಂತ ಎಐಕೆಎಸ್‌ನ ರಾಜ್ಯ ಘಟಕಗಳು 10ನೇ ಜುಲೈ 2023 ರ ಮೊದಲು ಇತರೆಲ್ಲ ಹಳ್ಳಿಗಳಲ್ಲಿ ವಿಜಯ ದಿನವನ್ನು ಆಚರಿಸುತ್ತವೆ ಎಂದು ಅದು ಹೇಳಿದೆ. ಎರಡನೇ ಯುಪಿಎ ಸರ್ಕಾರವು LARR ಕಾಯಿದೆ 2013 ಅನ್ನು ದೇಶದಲ್ಲಿ ಬಲವಂತದ ಭೂಸ್ವಾಧೀನದ ವಿರುದ್ಧ ರೈತರ ಹಲವಾರು ಹೋರಾಟಗಳ ಫಲವಾಗಿ ರೂಪಿಸಿ ಜಾರಿಗೆ ತಂದಿತು. ಈ ಹೋರಾಟಗಳಲ್ಲಿ ಅನೇಕ ರೈತರು ಹುತಾತ್ಮರಾದರು. ಗ್ರೇಟರ್ ನೋಯ್ಡಾದಲ್ಲಿ 2008 ರಲ್ಲಿ ಐದು ರೈತರು ಮತ್ತು 2011 ರಲ್ಲಿ ನೋಯ್ಡಾ ಪ್ರದೇಶದ ಭಟ್ಟ ಪರ್ಸುವಲ್ ಗ್ರಾಮದಲ್ಲಿ ಇಬ್ಬರು ರೈತರು ಈ ಹೋರಾಟದಲ್ಲಿ ಕೊಲ್ಲಲ್ಪಟ್ಟರು. ಈ 2013 ರ ಕಾಯ್ದೆಯು ಸರ್ಕಲ್ ದರದ ಮೇಲೆ ನಗರ ಪ್ರದೇಶದಲ್ಲಿ ಎರಡು ಪಟ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಪಟ್ಟು ಹೆಚ್ಚಿನ ಪರಿಹಾರವನ್ನು ಒದಗಿಸಿದೆ, ಸಾಮಾಜಿಕ ಪರಿಣಾಮದ ಅಧ್ಯಯನ ನಡೆಸಬೇಕು ಎಂಬ ಕಲಮನ್ನು ಮತ್ತು ಪುನರ್ವಸತಿ, ಮುನರ್ವ್ಯವಸ್ಥೆ ಉದ್ದಿಮೆಗಳಲ್ಲಿ ಮತ್ತು ಸೇವೆಗಳಲ್ಲಿ ಸಂತ್ರಸ್ತರಿಗೆ ಉದ್ಯೋಗ ಮತ್ತು ಗ್ರಾಮಗಳಲ್ಲಿ ಭೂರಹಿತ ಕುಟುಂಬಗಳಿಗೆ ಮನೆ ನಿವೇಶನ, ಶಿಕ್ಷಣ ಮತ್ತು ಆರೋಗ್ಯದ ಲಭ್ಯತೆ ಇತ್ಯಾದಿಗಳನ್ನು ಕುರಿತಂತೆ ಉಪಬಂಧಗಳನ್ನು ಇದರಲ್ಲಿ ಸೇರಿಸಲಾಗಿತ್ತು.

ಆದರೆ 2014ರ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವು ಕಾರ್ಪೊರೇಟ್ ಶಕ್ತಿಗಳ ಒತ್ತಡಕ್ಕೆ ಮಣಿದು 2013ರ ಈ ಕಾಯ್ದೆ ಕೊಡಮಾಡಿದ ಹಕ್ಕುಗಳನ್ನು ನಿರಾಕರಿಸುವ ಕುಖ್ಯಾತ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು 2015 ರಲ್ಲಿಯೇ ತಂದಿತು. ಇದರ ವಿರುದ್ಧ ರೈತರು ‘ಭೂಮಿ ಅಧಿಕಾರ ಆಂದೋಲನದ ಬ್ಯಾನರ್ ಅಡಿಯಲ್ಲಿ ನಡೆಸಿದ ವ್ಯಾಪಕ ಹೋರಾಟಗಳಿಂದಾಗಿ ಮೋದಿ ಸರಕಾರಕ್ಕೆ ಇದನ್ನು ಕಾನೂನಾಗಿ ಪರಿವರ್ತಿಸುವುದು ಸಾಧ್ಯವಾಗಲಿಲ್ಲ. ವಾಸ್ತವವಾಗಿ ಇದು ರೈತರು ಮೋದಿ ಸರಕಾರಕ್ಕೆ ಉಣ್ಣಿಸಿದ ಮೊತ್ತಮೊದಲ ಸೋಲು.

ಇದನ್ನೂ ಓದಿ:ಎಐಕೆಎಸ್ ನೇತೃತ್ವದ ರೈತ ಹೋರಾಟಕ್ಕೆ ಮಂಡಿಯೂರಿದ ಉತ್ತರ ಪ್ರದೇಶ ಸರ್ಕಾರ

ಈ ಸೋಲಿನ ನಂತರ ಎನ್‍ಡಿಎ ಸರಕಾರ ರಾಜ್ಯ ಸರಕಾರಗಳಿಗೆ ರೈತರಿಗೆ 2013ರ ಕಾಯ್ದೆ ಕೊಡಮಾಡಿದ ಹಕ್ಕುಗಳನ್ನು ನಿರಾಕರಿಸಲು ವಿಧಾನಸಭೆಗಳಲ್ಲಿ ಭೂಸ್ವಾಧೀನ ಕಾನೂನುಗಳನ್ನು ರೂಪಿಸಿ ಜಾರಿಗೊಳಿಸಲು ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭೂಸ್ವಾಧೀನದಲ್ಲಿ ನ್ಯಾಯಯುತ ಪರಿಹಾರ ಮತ್ತು ಇತರ ಹಕ್ಕುಗಳಿಗಾಗಿ ಹಲವಾರು ಹೋರಾಟಗಳು ನಡೆಯುತ್ತಿವೆ. ಗ್ರೇಟರ್‍ ನೋಯ್ಡಾದಲ್ಲಿ ನಡೆದ ಈ 61 ದಿನಗಳ ಹೋರಾಟದ ಫಲವಾಗಿ 2011ರ ಒಪ್ಪಂದದ ಭಾಗವಾಗಿದ್ದ ತಮ್ಮ ನಿಜವಾದ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸುವಲ್ಲಿ ಇಲ್ಲಿಯ ರೈತರ ಯಶಸ್ಸು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ.

ಉತ್ತರ ಪ್ರದೇಶ ಸರ್ಕಾರವು 2023 ರ ಜೂನ್ 30 ರ ಮೊದಲು ಅಧಿಸೂಚನೆಯ ಮೂಲಕ ಉನ್ನತಾಧಿಕಾರವುಳ್ಳ ಸಮಿತಿಯನ್ನು ರಚಿಸಲು ಒಪ್ಪಿದೆ. ರೈತರ ಎಲ್ಲಾ ಬೇಡಿಕೆಗಳನ್ನು ಚರ್ಚಿಸಲು ಮತ್ತು ಕಾನೂನಿನ ಪ್ರಕಾರ ಅದರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಈ ಸಮಿತಿಯು ಜುಲೈ 15, 2023 ರ ಮೊದಲು ತನ್ನ ಸಭೆಯನ್ನು ನಡೆಸುತ್ತದೆ ಎಂದೂ ಹೇಳಲಾಗಿದೆ. ಗೌತಮ ಬುದ್ಧನಗರದ ಜಿಲ್ಲಾಧಿಕಾರಿಗಳು 2010ರ ಸೆ.3ರ ಒಪ್ಪಂದದಲ್ಲಿ ಭೂಮಿ ಸರ್ಕಲ್ ದರ ಪರಿಷ್ಕರಿಸಿ ಸಂತ್ರಸ್ತ ರೈತ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಕುರಿತು ಆಡಳಿತ ನೀಡಿದ ಭರವಸೆಯ ಮೇರೆಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಮಿತಿ ರಚಿಸಿದ್ದಾರೆ. ಭೂಮಿ ಅಧಿಕಾರ ಆಂದೋಲನದ ಬ್ಯಾನರ್ ಅಡಿಯಲ್ಲಿ ಭೂ ಸ್ವಾಧೀನ ಯೋಜನೆಗಳಿಂದ ಹಾನಿಗೊಳಗಾದ ರೈತರ ರಾಷ್ಟ್ರಮಟ್ಟದ ಸಮಾವೇಶವನ್ನು ಆಗಸ್ಟ್ 2023 ರ ದ್ವಿತೀಯಾರ್ಧದಲ್ಲಿ ಮಧ್ಯಪ್ರದೇಶದಲ್ಲಿ ನಡೆಸಲಾಗುವುದು ಎಂದೂ ಜೂನ್‍ 26ರಂದು ನಡೆದ ಎಐಕೆಎಸ್‍ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಈ ಗೋಷ್ಠಿಯಲ್ಲಿ ಎಐಕೆಎಸ್‍ ಮುಖಂಡರು ಈ ಹೋರಾಟವನ್ನು ಯಶಸ್ವಿಗೊಳಿಸಿದ ವೀರ ಹೋರಾಟಗಾರರನ್ನು ವಿಶೇಷವಾಗಿ ಗ್ರೇಟರ್ ನೋಯ್ಡಾ ಗ್ರಾಮಗಳ ಮಹಿಳೆಯರು ಮತ್ತು ಯುವಕರನ್ನು ಅಭಿನಂದಿಸಿದ್ದಾರೆ. ಅವರು ಭಾರತದಾದ್ಯಂತ ರೈತರ ಭೂಮಿಯ ಹಕ್ಕುಗಳಿಗಾಗಿ ಈ ಅತ್ಯಂತ ಮಹತ್ವದ ಹೋರಾಟವನ್ನು ಗೆದ್ದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಭೂ ಸ್ವಾಧೀನದ ಕಾರ್ಪೊರೇಟ್ ಪರ ನೀತಿಗಳಿಂದ ಸಂತ್ರಸ್ತರಾಗಿರುವ ಎಲ್ಲ ರೈತ ಕುಟುಂಬಗಳಿಗೆ ನ್ಯಾಯವನ್ನು ಖಚಿತಪಡಿಸಲು ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೆಚ್ಚಿನ ಹೋರಾಟಗಳು ನಡೆಯಲಿವೆ ಎಂದು ಎಐಕೆಎಸ್‍ ಮುಖಂಡರು ಹೇಳಿದ್ದಾರೆ. ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಡಾ.ವಿಜು ಕೃಷ್ಣನ್, ಉಪಾಧ್ಯಕ್ಷರಾದ ಹನ್ನನ್ ಮೊಲ್ಲ, ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್ , ಸಿಕೆಸಿ ಸದಸ್ಯ ಪುಷ್ಪೇಂದ್ರ ತ್ಯಾಗಿ ಮತ್ತು ತಳಮಟ್ಟದ ಹೋರಾಟದ ಮುಖಂಡರಾದ ಡಾ.ರೂಪೇಶ್ ವರ್ಮ, ವೀರ್ ಸಿಂಗ್‍ ನಾಗರ್ ಮತ್ತು ಬ್ರಹ್ಮಪಾಲ್‍ ಸುಭೇದಾರ್‌ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *