ಮೈಸೂರು : ಮೈಸೂರಿನ ಸೈಯದ್ ಇಸಾಕ್ ಗ್ರಂಥಾಲಯ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಬೀಡಿ ಸೇದಿ ಎಸೆದ ಬೆಂಕಿಕಡ್ಡಿಯಿಂದ ಈ ದುರಂತ ಸಂಭವಿಸಿದ್ದು, ಇದು ಉದ್ದೇಶಪೂರ್ವಕ ಕೃತ್ಯವೇ ಅಥವಾ ಅಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾಂತಿನಗರದ ನಿವಾಸಿ ಸೈಯದ್ ನಾಸೀರ್(35) ಬಂಧಿತ ಆರೋಪಿ.
ಈತ ಗ್ರಂಥಾಲಯದ ಪಕ್ಕದಲ್ಲಿದ್ದ ಸೋಫಾ ರಿಪೇರಿ ಅಂಗಡಿಯ ಬಳಿ ಬಿಡಿ ಹಚ್ಚಿ ಬೆಂಕಿ ಕಡ್ಡಿಯನ್ನು ಆರಿಸದೆ ಬಿಸಾಡಿದ್ದಾನೆ. ಇದೇ ಕಿಡಿಯಿಂದಾಗಿ ಗ್ರಂಥಾಲಯ ಸುಟ್ಟು ಹೋಗಿದೆ ಎನ್ನುವುದು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದೆ.
ಕನ್ನಡ ಪ್ರೇಮಿಯಾದ ಸೈಯದ್ ಇಸಾಕ್ ಮೈಸೂರಿನ ರಾಜೀವ್ ನಗರದಲ್ಲಿ ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಇದೇ ಏಪ್ರಿಲ್ 8ರಂದು ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಸಾವಿರಾರು ಪುಸ್ತಕಗಳು ಸುಟ್ಟು ಭಸ್ಮವಾಗಿದ್ದವು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು ಬೆಂಕಿ ಹಚ್ಚಿದವರ ಪತ್ತೆಗೆ ಎಸಿಪಿ ನೇತೃತ್ವದ ತಂಡ ರಚಿಸಲಾಗಿತ್ತು.
ಇದನ್ನೂ ಓದಿ : 10 ವರ್ಷದ ಸೇವೆ ಮಣ್ಣುಮಾಡಿದ ದುಷ್ಕರ್ಮಿಗಳು: 11 ಸಾವಿರ ಪುಸ್ತಕಗಳು ಬೆಂಕಿಗೆ ಆಹುತಿ
ಸಮಿತಿ ರಚನೆಗೆ ವಿರೋಧ : ಇಸಾಕ್ ಅವರ ಗ್ರಂಥಾಲಯ ಮರುಸ್ಥಾಪನೆಗೆ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಂಥಾಲಯ ಇಲಾಖೆ ಜಂಟಿ ಸಮಿತಿ ರಚನೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಈ ಮಧ್ಯೆ, ಗ್ರಂಥಾಲಯ ಮರುನಿರ್ಮಿಸಲು ಆನ್‌ಲೈನ್‌ನಲ್ಲಿ ಆರಂಭಿಸಿದ್ದ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಇನ್ಫೊಸಿಸ್‌ನ ಸಾಫ್ಟ್‌ವೇರ್ ಎಂಜಿನಿಯರ್ ಫತೇನ್ ಮಿಸ್ಬಾ ನಿಲ್ಲಿಸಿದ್ದಾರೆ. ಇಲ್ಲಿಯವರೆಗೆ ₹29 ಲಕ್ಷ ಸಂಗ್ರಹವಾಗಿದೆ. ‘1,800ಕ್ಕೂ ಅಧಿಕ ಮಂದಿ ದಾನಿಗಳು ಹಣ ನೀಡಿದ್ದಾರೆ’ ಎಂದು ಫತೇನ್ ಮಿಸ್ಬಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.