ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ(ಮನರೇಗ) ಮೇಲೆ ಮೋದಿ ಸರಕಾರ ದಾಳಿಗಿಳಿದಿದೆ. ಈ ಬಾರಿಯ ಬಜೆಟಿನಲ್ಲಿ ಈ ಬಾಬ್ತು ಹಣ ನೀಡಿಕೆಯನ್ನು 33% ದಷ್ಟು ತೀವ್ರವಾಗಿ ಕಡಿತ ಮಾಡಿದ್ದಷ್ಟೇ ಅಲ್ಲ, ನಂತರ ಫೆಬ್ರುವರಿ 1ರಿಂದ ಮನರೇಗ ಕೆಲಸಗಾರರಿಗೆ ಕೂಲಿ ಪಾವತಿಯನ್ನು ಎಬಿಪಿಎಸ್ ಮೂಲಕ ಮಾತ್ರವೇ ಮಾಡಲಾಗುವುದು ಎಂಬುದನ್ನು ಜಾರಿಗೆ ತರಲಾಗಿದೆ. ಇದು ಗ್ರಾಮೀಣ ಬಡವರ ಕಾನೂನು ಮತ್ತು ಸಾಂವಿಧಾನಿಕ ಹಕ್ಕುಗಳ ಮೇಲೆ ಮೋದಿ ಸರಕಾರ ನಡೆಸುತ್ತಿರುವ ಅಘೋಷಿತ ಯುದ್ಧ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ತೀವ್ರವಾಗಿ ಟೀಕಿಸಿದ್ದಾರೆ.
ಈ ದಾಳಿಯ ವಿರುದ್ಧ ದೇಶಾದ್ಯಂತ ಮನರೇಗ ಕೆಲಸಗಾರರಲ್ಲಿ ಮತ್ತು ತೀವ ಆಕ್ರೋಶ ವ್ಯಕ್ತವಾಗುತ್ತಿದ್ದು, ದಿಲ್ಲಿಯ ಜಂತರ್‌ಮಂತರ್‌ನಲ್ಲಿ 100 ದಿನಗಳ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರಿಗೆ ಸೌಹಾರ್ದ ವ್ಯಕ್ತಪಡಿಸುತ್ತ ಪತ್ರಿಕಾಗೋಷ್ಠಿಯಲ್ಲಿ ಬೃಂದಾ ಕಾರಟ್ ಹೀಗಂದಿದ್ದಾರೆ.
ಇದನ್ನು ಓದಿ: ಮಹಿಳೆಯರನ್ನೂ ರೈತ ಹಾಗೂ ಕೃಷಿ ಕೂಲಿಕಾರ ಎಂದು ಪರಿಗಣಿಸಿ
ದಶಕಗಳ ಹೋರಾಟಗಳ ಮೂಲಕ ರೂಪುಗೊಂಡಿರುವ ಹೆಚ್ಚಿನ ಕಾನೂನುಗಳನ್ನು ಕಳಚಿ ಹಾಕುವುದು ಈ ಸರಕಾರದ ಅಜೆಂಡಾದಲ್ಲಿರುವ ಪ್ರಮುಖ ನಡೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕಾನೂನಿನ ಆದೇಶ ಇರುವುದರಿಂದಾಗಿ ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಈ ಸರಕಾರಕ್ಕೆ ಇದುವರೆಗೆ ಸಾಧ್ಯವಾಗಿಲ್ಲ ಅಷ್ಟೇ ಎಂದಿರುವ ಬೃಂದಾ ಕಾರಟ್ ಈ ಯೋಜನೆಯ ಅನುಷ್ಠಾನದಲ್ಲಿ ಇರುವ ಮೂರು ಆತಂಕಗಳೆಂದರೆ-ಇತ್ತೀಚಿನ 33% ಬಜೆಟ್ ಕಡಿತ, ಕೆಲಸ ಕೇಳುತ್ತಿರುವವರನ್ನು ದೂರ ತಳ್ಳುವ ಪ್ರಯತ್ನ ಮತ್ತು ಶೋಚನೀಯ ಕೂಲಿ ಎಂದು ಹೇಳಿದರು.
ಬೇಡಿಕೆ ಬಂದಂತೆ ಹಣವನ್ನು ಈ ಯೋಜನೆಗೆ ಒದಗಿಸಲಾಗುವುದು ಎಂಬ ಸರಕಾರದ ಕಥನ ಶುದ್ಧ ಸುಳ್ಳು ಎಂದ ಅವರು ಸರಾಸರಿ ರಾಷ್ಟ್ರೀಯ ಕೂಲಿಯನ್ನು ಪರಿಷ್ಕರಿಸುವ ಅಗತ್ಯವೂ ಇದೆ ಎಂದು ಹೇಳಿದರು.
ಇದನ್ನು ಓದಿ: ಸಾಮಾಜಿಕ ಭದ್ರತೆ ವಂತಿಗೆ ಆಧಾರಿತವಾಗಿರಬಾರದು
ಗ್ರಾಮೀಣ ಬಡವರ ಬದುಕಿಗೆ ಎಷ್ಟು ಅಗತ್ಯ ಎಂದು ಕೊವಿಡ್ ಕಾಲದಲ್ಲಿ ಸ್ಪಷ್ಟವಾಗಿ ಕಂಡು ಬಂದರೂ ಈ ಯೋಜನೆಯನ್ನು ಮುಗಿಸಿ ಬಿಡಲು ಸರಕಾರ ಕಟಿಬದ್ಧವಾಗಿರುವಂತೆ ಕಾಣುತ್ತದೆ. ಪ್ರಧಾನ ಮಂತ್ರಿಗಳು ಆರಂಭದಿಂದಲೇ ಈ ಯೋಜನೆಯ ವಿರುದ್ಧ ಕಿಡಿಕಾರುತ್ತ ಬಂದಿದ್ದರೂ ಇದುವರೆಗೂ, 9ವರ್ಷಗಳ ನಂತರವೂ ಎನ್‌ಡಿಎ ಸರಕಾರ ಇದನ್ನು ರದ್ದು ಮಾಡುವ ಕ್ರಮಕ್ಕೆ ಇಳಿದಿಲ್ಲ, ಬಹುಶಃ ಬೃಂದಾ ಕಾರಟ್ ಹೇಳಿರುವಂತೆ, ಕಾನೂನಿನ ಆದೇಶ ಇರುವುದರಿಂದ ಇಳಿಯಲಾಗಿಲ್ಲ. ಆದರೆ ಕೂಲಿ ಪಾವತಿಯಲ್ಲಿ ವಿಳಂಬ, ತಾಂತ್ರಿಕ ಹೇರಿಕೆಗಳು ಮತ್ತು ಅಗತ್ಯ ಹಣವನ್ನು ಮಂಜೂರು ಮಾಡದೆ ಅದು ಶೋಚನೀಯ ಸ್ಥಿತಿಗೆ ಬರುವಂತೆ ಮಾಡಲಾಗಿದೆ ಎಂದು ಈ ಕುರಿತ ಅಧ್ಯಯನಗಳು ಹೊರಗೆಡಹಿವೆ.
ಅತ್ಯಂತ ಕಡಿಮೆ ಹಂಚಿಕೆ
ಇತ್ತೀಚೆಗೆ ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಿಗಳು ಬಜೆಟ್ ಹಂಚಿಕೆಯ ಕಡಿತದ ಟೀಕೆಗೆ ಉತ್ತರಿಸುತ್ತ ತಮ್ಮ ಸರಕಾರ ಯುಪಿಎ ಸರಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಯೋಜನೆಗೆ ಹಣ ನೀಡಿದೆ, ಬೇಡಿಕೆ ಬಂದಂತೆ ಹಣ ಒದಗಿಸಲಾಗುವುದು ಎಂದಿದ್ದಾರೆ. ಆದರೆ ಅಂಕಿ-ಅಂಶಗಳು ತದ್ವಿರುದ್ಧ ಸಂಗತಿಯನ್ನೇ ತೋರಿಸುತ್ತವೆ. ಪ್ರಸಕ್ತ ಬಜೆಟಿನಲ್ಲಿ ಈ ಯೋಜನೆಗೆ ನೀಡಿರುವುದು 1.3% ದಷ್ಟು ಮಾತ್ರವೇ, ಇದು ಇದುವರೆಗಿನ ಅತೀ ಕಡಿಮೆ ಪ್ರಮಾಣದ ನೀಡಿಕೆ ಎನ್ನುತ್ತಾರೆ ಈ ಯೋಜನೆಯ ದತ್ತಾಂಶಗಳನ್ನು ಸಂಗ್ರಹಿಸಿರುವ ಜಾಸ್ಮಿನ್ ನಿಹಲಾನಿ (ದಿ ಹಿಂದು, ಫೆ.27).
2008-09 ರಲ್ಲಿ ಯುಪಿಎ-1 ಸರಕಾರ ಎಡಪಕ್ಷಗಳ ಆಗ್ರಹದಿಂದ ತಂದ ಈ ಯೋಜನೆಗೆ ಬಜೆಟಿನ 3.5% ಹಣವನ್ನು ನೀಡಿತ್ತು. ನಂತರ ಎಡಪಕ್ಷಗಳ ಬೆಂಬಲವನ್ನು ಅವಲಂಬಿಸಿರದ ಯುಪಿಎ-2 ಸರಕಾರದಲ್ಲಿ ಇದರಲ್ಲಿ ಇಳಿಕೆಯಾಗುತ್ತ 2% ತಲುಪಿತ್ತು. ಎನ್‌ಡಿಎ-1 ಸರಕಾರ ಈ ಯೋಜನೆಯನ್ನು ಹೀಗಳೆಯುತ್ತಿದ್ದರೂ, ಹಣ ನೀಡಿಕೆಯ ಪ್ರಮಾಣವನ್ನು ಇನ್ನಷ್ಟು ಕಡಿತ ಮಾಡದೇ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸುತ್ತಲೇ ಬಂದಿದ್ದು, ಕೊವಿಡ್ ಕಾಲದಲ್ಲಿ, ಬಹಶಃ ಅನಿವಾರ್ಯವಾಗಿಯೇ ಅದು 3.2%ದ ವರೆಗೆ ಬಂದಿತ್ತು. ಆದರೆ ಆಮೇಲೆ ತೀವ್ರವಾಗಿ ಇಳಿಸಿ ಈಗ 1.3%ಕ್ಕೆ, ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಿದೆ.
ಇದನ್ನು ಓದಿ: ಕಾರ್ಮಿಕ ಹಕ್ಕುಗಳಿಂದ ವಂಚಿತ ಅಂತರ-ರಾಜ್ಯ ವಲಸೆ ಕಾರ್ಮಿಕರು
56% ಬಡವರನ್ನು ಅನರ್ಹಗೊಳಿಸುವ ಎಬಿಪಿಎಸ್ ಹೇರಿಕೆ
ಈಗ ಮನರೇಗ ಕೆಲಸಗಾರರು ಜಾಬ್ ಕಾರ್ಡುಗಳನ್ನು ಮತ್ತು ಬ್ಯಾಂಕ್ ಖಾತೆಗಳನ್ನು ತಮ್ಮ ಆಧಾರ್‌ನೊಂದಿಗೆ ಜೋಡಿಸದಿದ್ದರೆ ಅವರು ಮನರೇಗ ಕೆಲಸಮಾಡಲು ಬಿಡಲಾಗುತ್ತಿಲ್ಲ. ಕೆಲಸಕ್ಕೆ ಅತ್ಯಂತ ಹೆಚ್ಚು ಬೇಡಿಕೆಯಿರುವ ಸಮಯದಲ್ಲಿ ಇದನ್ನು ವಿಧಿಸಿರುವುದು ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಈ ರಂಗದಲ್ಲಿ ಗ್ರಾಮೀಣ ಬಡವರಿಗೆ ನೆರವಾಗುತ್ತಿರುವವರು ಹೇಳುತ್ತಿದ್ದಾರೆ. ಏಕೆಂದರೆ, ಮೇಲೆ ಹೇಳಿದ ದತಾಂಶಗಳ ಪ್ರಕಾರ, ಫೆಬ್ರುವರಿ 20ರ ವೇಳೆಗೂ ಒಟ್ಟು ಕೆಲಸಗಾರರಲ್ಲಿ 44% ಮಂದಿಗೆ ಮಾತ್ರ ಈ ರೀತಿಯ ಆಧಾರ್ ಜೋಡಣೆ ಮಾಡಿಕೊಳ್ಳಲು ಸಾಧ್ಯವಾಗಿದ್ದು ಕೆಲಸ ಪಡೆಯಲು. ಅರ್ಹರಾಗಿದಾರೆ. ಹೀಗೆ 14 ರಾಜ್ಯಗಳಲ್ಲಿ 50%ಕ್ಕೂ ಹೆಚ್ಚು ಕೆಲಸಗಾರರು ಕೆಲಸ ಪಡೆಯಲು ಅನರ್ಹರಾಗುತ್ತಾರೆ ಎಂದು ಅಂದಾಜು ಮಾಡಲಾಗಿದೆ.ತಲಾ 2 ಕೋಟಿಗಿಂತ ಹೆಚ್ಚು ಕೆಲಸಗಾರರು ನೋಂದಾಯಿಸಿಕೊಳ್ಳುವ ರಾಜಸ್ತಾನ, ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಇದು 60%ವನ್ನೂ ದಾಟುತ್ತದೆ. ಕರ್ನಾಟಕದಲ್ಲೂ ಇದು 60%ದ ಸಮೀಪ ಬರುತ್ತದೆ.
ಇದನ್ನು ಓದಿ: ಸಬ್ಸಿಡಿ ಕಡಿತ ಮಾಡಿ ರೈತ-ಕಾರ್ಮಿಕರ-ಕೂಲಿಕಾರರೊಂದಿಗೆ ಸರಕಾರ ಚೆಲ್ಲಾಟವಾಡುತ್ತಿದೆ; ಮೀನಾಕ್ಷಿ ಸುಂದರಂ
ಕೂಲಿ ಪಾವತಿಯಲ್ಲಿ ವಿಳಂಬ
ಇದು ಈ ಯೋಜನೆಯನ್ನು ಆರಂಭದಿಂದಲೂ ಬಾಧಿಸುತ್ತಿರುವ ಸಮಸ್ಯೆ. ಈ ಗ್ರಾಮೀಣ ಬಡವರು ಕೆಲಸ ಮಾಡಿದ ಮೇಲೂ ಅದಕ್ಕೆ ಕೂಲಿಗಾಗಿ ಕಾಯುವ ಪರಿಸ್ಥಿತಿಯನ್ನು ಸರಿಪಡಿಸಲು ಸರಕಾರಗಳು ಗಂಭೀರ ಪ್ರಯತ್ನಗಳನ್ನು ನಡೆಸಿಲ್ಲ.
ಈ ಕೂಲಿ ಪಾವತಿ ವಿಳಂಬ ಎರಡು ಕಾರಣಗಳಿಂದಾಗಿ ಆಗುತ್ತಿದೆ. ಮೊದಲನೆಯದಾಗಿ, ರಾಜ್ಯಗಳಲ್ಲಿ ಪಾವತಿ ಮಾಡಬೇಕಾದ ಮೊತ್ತದ ಲೆಕ್ಕಾಚಾರದಲ್ಲಿ ವಿಳಂಬ ಮತ್ತು ಎರಡನೆಯದಾಗಿ, ಹೀಗೆ ರಾಜ್ಯಗಳು ತಯಾರಿಸಿದ ಹಣ ವರ್ಗಾವಣೆ ಕೋರಿಕೆಗಳನ್ನು ಪರಿಶೀಲಿಸಿ ಕೆಲಸಗಾರರ ಖಾತೆಗೆ ವರ್ಗಾಯಿಸುವಲ್ಲಿ ಕೇಂದ್ರ ಸರಕಾರದ ವಿಳಂಬ. ಹೀಗೆ ವಿವಿಧ ರಾಜ್ಯಗಳಲ್ಲಿ 200 ಕೋಟಿ ರೂ.ಗಳಿಂದ 1000 ಕೋಟಿ ರೂ.ಗಳ ವರೆಗೆ ಕೂಲಿ ಪಾವತಿ ಬಾಕಿಯಿದೆ ಎಂದು ಸರಕಾರದ ದಾಖಲೆಗಳಿಂದ ಸಂಗ್ರಹಿಸಿದ ಮಾಹಿತಿಗಳು ತೋರಿಸುತ್ತವೆ.
ಡಿಸೆಂಬರ್ 14ರಂದು ಲೋಕಸಭೆಗೆ ನೀಡಿದ ಮಾಹಿತಿಗಳ ಪ್ರಕಾರ ದೇಶಾದ್ಯಂತ ಮನರೇಗ ಕೆಲಸಗಾರರು ಒಟ್ಟು 4447.72 ಕೋಟಿ ರೂ.ಗಳಷ್ಟು ಕೂಲಿಪಾವತಿಗೆ ಕಾಯುತ್ತಿದ್ದಾರೆ. ಮನರೇಗ ಕಾಮಗಾರಿಗಳಿಗೆ ಬೇಕಾದ ವಸ್ತುಗಳಿಗೆ ಪಾವತಿ ಮಾಡದೆ ಬಾಕಿಯಿರುವ ಮೊತ್ತ ನವಂಬರ್ 30ರ ವೇಳೆಗೆ 3207.43 ಕೋಟಿ. ಇದು ಬಹುಪಾಲು ಕೇಂದ್ರ ಸರಕಾರದಿಂದ ಈ ಯೋಜನೆಗೆ ನಿಧಿ ಬಿಡುಗಡೆಯಲ್ಲಿ ಆಗುವ ವಿಳಂಬದಿಂದಾಗಿ ಎಂದು ಹೇಳಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ