ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ನೆಲಮಂಗಲ ತಾಲ್ಲೂಕುಗಳ 47 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 22 ರಂದು ನಡೆಯುವ ಚುನಾವಣೆಗೆ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಪಂಚಾಯಿತಿ ಮತ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ ನೌಕರರಿಗೆ ಒಂದು ದಿನದ ವೇತನ ಸಹಿತ ರಜೆಯನ್ನು ಘೊಷಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು, ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರೆ ಖಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಕರ್ನಾಟಕ ಪಂಚಾಯತ್ ರಾಜ್ ( ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 114ನ್ನು ಹೊಂದಿಕೊಂಡಂತೆ, ಪ್ರಜಾ ಪ್ರತಿನಿಧಿ ಕಾಯ್ದೆ 1954ರ ಸೆಕ್ಷನ್-135ಬಿ ಅಡಿಯಲ್ಲಿ ವೇತನ ಸಹಿತ ರಜೆ ಘೋಷಿಸುವಂತೆ ಆದೇಶ ಹೊರಡಿಸಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಈ ರಜೆಯು ಅನ್ವಯಿಸುವುದಿಲ್ಲ. ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಈ ಚುನಾವಣೆ ನಿಯೋಜಿಸಲ್ಪಟ್ಟ ಕಾರ್ಯಗಳಿಗೆ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.