ಬೆಂಗಳೂರು: ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಸರ್ಕಾರ ವಿವಾಹ ನೊಂದಣಿ ಅಧಿಕಾರವನ್ನು ಪಿಡಿಓಗಳಿಗೆ ನೀಡಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇನ್ನು ಮುಂದೆ ಮದುವೆ ನೋಂದಣಿ ಮಾಡಿಸಬಹುದಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರವು ವಿವಾಹ ನೋಂದಣಿ ಅಧಿಕಾರವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ಆದೇಶ ಹೊರಡಿಸಿದ್ದು, ಇದರಿಂದಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಲಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಕುರಿತ ಆದೇಶ ಪ್ರಕಟವಾಗಿದೆ.
ಇಲ್ಲಿಯವರೆಗೆ, ದಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ನೋಂದಣಿಗೆ ಅವಕಾಶ ಇತ್ತು. ಮದುವೆ ನಡೆದ ಸ್ಥಳ ಅಥವಾ ಪತಿ-ಪತ್ನಿಯರು ವಾಸಿಸುವ ಸ್ಥಳದ ಅಧಿಕಾರ ವ್ಯಾಪ್ತಿ ಹೊಂದಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿತ್ತು. ಅದಕ್ಕೆ ಅಗತ್ಯವಾದ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿತ್ತು. ಇಲ್ಲವೇ ಅದನ್ನು ಇಂಟರ್ನೆಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿತ್ತು.
ಅರ್ಜಿಗಳನ್ನು ಎಚ್ಚರಿಕೆಯಿಂದ ತುಂಬಿ ನಂತರ ಮೂವರು ಸಾಕ್ಷಿಗಳು (ಸ್ನೇಹಿತರು, ಬಂಧುಗಳು) ಸಹಿ ಮಾಡಬೇಕಿತ್ತು. ಈ ಅರ್ಜಿಗೆ ವಧು-ವರ ಕೂಡ ಸಹಿ ಮಾಡಿ, ನಂತರ ಅದಕ್ಕೆ ಮೊಹರು ಹಾಕಿ ರಿಜಿಸ್ಟ್ರಾರ್ ಸಹಿ ಮಾಡುತ್ತಿದ್ದರು.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ವಿವಾಹ ನೋಂದಣಿಯಾಗುವುದರಿಂದ ಜನರ ಸಮಯ ಉಳಿತಾಯವಾಗಲಿದೆ. ಕೆಲವು ದಿನಗಳ ಹಿಂದೆ ಸರ್ಕಾರ ಜನನ-ಮರಣ ನೋಂದಣಿ ಮಾಡುವ ಅಧಿಕಾರವನ್ನು ಪಿಡಿಒಗಳಿಗೆ ನೀಡಿತ್ತು. ಈಗ ವಿವಾಹ ನೋಂದಣಿ ಅಧಿಕಾರವನ್ನು ಅವರಿಗೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಪಿಡಿಒ ನೇಮಕಗೊಂಡಿರುತ್ತಾರೆ.