ಗ್ರಾಮ ಪಂಚಾಯಿತಿ ನೌಕರರ ಕನಿಷ್ಠ ವೇತನ ಹೆಚ್ಚಿಸಲು ಆಗ್ರಹ

ಬೆಂಗಳೂರು: ಗ್ರಾಮ ಪಂಚಾಯತಿ ನೌಕರರ ವೇತನವನ್ನು ಪರಿಷ್ಕರಣೆ ಮಾಡಿ ಕನಿಷ್ಠ ವೇತನಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಇಂದು(ಜುಲೈ 13) ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ(ರಿ.)-ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಮಿಕ ಭವನ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, ಗ್ರಾಮ ಪಂಚಾಯತಿ ನೌಕರರಾದ ಕರವಸೂಲಿಗಾರ, ಗುಮಾಸ್ತರು, ನೀರುಗಂಟಿ,ಜವಾನರು, ಕಸ ಗುಡಿಸುವವರು, ಸಹಾಯಕ ಸಿಬ್ಬಂದಿಗಳು, ಗಣಕಯಂತ್ರ ನಿರ್ವಾಹಕರು, ಸ್ವಚ್ಛತಾಗಾರರು ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ವೇತನವನ್ನು ಪರಿಷ್ಕರಿಸಬೇಕೆಂದು ಆಗ್ರಹಿಸಿದರು.

ಬೆಂಗಳೂರು ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ 2016ರಿಂದ ಕನಿಷ್ಠ ವೇತನ ಜಾರಿ ಮಾಡಿದ ಸರ್ಕಾರದ ಆದೇಶದಂತೆ ವಾರ್ಷಿಕವಾಗಿ ನೌಕರರಿಗೆ ನೀಡಬೇಕಾದ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆ ನೀಡದೆ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪೋಂದರಲ್ಲಿ ಕನಿಷ್ಠ ವೇತನ ನಿಗದಿಗೆ ಸಂಬಂಧಿಸಿದಂತೆ, ಕೆಲವು ಸೂಕ್ತ ಮಾನದಂಡಗಳನ್ನು ಗುರುತಿಸಿದೆ. ಅದರಂತೆ, ಕನಿಷ್ಠ ವೇತನವನ್ನು ನಿಗದಿಗೊಳಿಸಲಾಗುತ್ತದೆ. ನ್ಯಾಯಾಲಯದ ಮಾನದಂಡವನ್ನು ಗ್ರಾಮ ಪಂಚಾಯತಿ ನೌಕರರಿಗೆ ಅನ್ವಯಪಡಿಸದೇ ಅನ್ಯಾಯ ಎಸಗಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಾನೂನಿನ ಪ್ರಕಾರ 5 ವರ್ಷಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೆಚ್ಚಳ ಮಾಡಬೇಕಾಗಿದೆ. ಕಳೆದ 2016ರಲ್ಲಿ ವೇತನ ಪರಿಷ್ಕರಣೆಯಾಗಿದೆ. ಮತ್ತೆ ವೇತನ ಪರಿಷ್ಕರಣೆಗೆ ಕರಡು ಅಧಿಸೂಚನೆ ಹೊರಡಿಸಿದರೂ ಸಹ 2021ರಲ್ಲೇ ಮಾಡಬೇಕಾಗಿತ್ತು. ಆದರೆ ಇದುವರೆಗೂ ಹೆಚ್ಚಳ ಮಾಡಿಲ್ಲ. ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ನೌಕರರ ಬೇಡಿಕೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ದುಡಿದು ನಿವೃತ್ತಿಯಾದ ನೌಕರರಿಗೆ ಉಪಧನ ನೀಡಲು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್‌ ಹಾಗೂ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್‌ ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *