ಉಡುಪಿ: ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರು ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷರಾದ ದಾಸ್ ಭಂಡಾರಿ(80 ವರ್ಷ) ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ರಿ)-(ಸಿಐಟಿಯು) ರಾಜ್ಯ ಸಮಿತಿ ಭಾವಪೂರ್ಣ ನಮನಗಳು ಸಲ್ಲಿಸಿದೆ.
ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅವರು, ದಾಸ ಭಂಡಾರಿಯವರು ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಗ್ರಾಮದ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿನ್ನೆ ರಾತ್ರಿ ನಿಧರಾಗಿದ್ದಾರೆ. ಉಡುಪಿ ಜಿಲ್ಲೆ ಸಿಪಿಐ(ಎಂ) ಪಕ್ಷದ ಮಾಜಿ ಜಿಲ್ಲಾ ಸಮಿತಿ ಸದಸ್ಯರಾಗಿದ್ದ ಅವರು ಕುಂದಾಪುರ ತಾಲೂಕಿನಲ್ಲಿ ಭೂ ಸುಧಾರಣೆಗಾಗಿ ತೀವ್ರ ಹೋರಾಟ ನಡೆಸಿದ್ದಾರೆ ಎಂದು ಸ್ಮರಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಅವರು, ಉಡುಪಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸುವಲ್ಲಿ ದಾಸ ಭಂಡಾರಿಯವರ ಪ್ರಯತ್ನ ಸ್ಮರಣಿಯವಾದುದ್ದು. ಗ್ರಾಮ ಘಟಕಗಳ ಮೂಲಕ ಸಂಘಟಿಸಿ ಅಲ್ಲಿಯೇ ನಾಯಕತ್ವವನ್ನು ಪ್ರೇರೇಪಿಸಿ ಆ ಮೂಲಕ ಸ್ಥಳೀಯ ಸಮಸ್ಯೆಗಳ ಕುರಿತು ಹೋರಾಟ ಸಂಘಟಿಸುವ ಅವರು ಪ್ರಮುಖ ಪಾತ್ರವಹಿಸಿದ್ದರು. ತೀರ ಅಸಂಘಟಿರಾಗಿದ್ದ ಕಟ್ಟಡ ಕಾರ್ಮಿಕರ ಮನವೊಲಿಸಿ ಅವರಿಗೆ ಸಂಘಟನೆಯ ಅಗತ್ಯವನ್ನು ಮನಗಾಣಿಸಿ ಅವರು ಸಂಘಟಿತರಾಗಿ ತಮ್ಮ ಹಕ್ಕು ಹಾಗೂ ಸೌಲಭ್ಯಗಳಿಗಾಗಿ ಹೋರಾಡುವಂತೆ ಜಾಗೃತಿ ಮೂಡಿಸಿದ್ದರು. ಅದರ ಪರಿಣಾಮವೇ ಇಂದು ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಗಳು ರಾಜ್ಯಕ್ಕೆ ಮಾದರಿಗಳಾಗಿವೆ. ಇದರ ಹಿಂದೆ ದಾಸ ಭಂಡಾರಿಯವರ ಪ್ರಾಮಾಣಿಕತೆ, ಬದ್ದತೆ ಮತ್ತು ಅವರು ಅಳವಡಿಸಿಕೊಂಡಿದ್ದ ದುಡಿಯುವ ವರ್ಗದ ಚಿಂತನೆಗಳು ಪ್ರಮುಖ ಪಾತ್ರವಹಿಸಿವೆ ಎಂದು ತಿಳಿಸಿದ್ದಾರೆ.
ದಾಸ ಭಂಡಾರಿಯವರ ನಿಧನ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕ ಚಳವಳಿಗೆ ಮತ್ತು ರಾಜ್ಯದ ದುಡಿಯುವ ವರ್ಗದ ಚಳವಳಿಗೆ ಅಪಾರ ನಷ್ಟ ಉಂಟುಮಾಡಿದೆ. ಅವರ ಶ್ರೀಮತಿ ಹಾಗೂ ಅವರ ಮಕ್ಕಳು ಹಾಗೂ ಅವರ ಬಂಧುಗಳಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ತನ್ನಅತೀವ ಸಾಂತ್ವಾನ ಹೇಳಿದೆ. ಮತ್ತು ದಾಸ ಭಂಡಾರಿಯವರ ಆದರ್ಶಗಳನ್ನು ಸಂಘಟನೆಯ ಎಲ್ಲ ಹಂತಗಳಲ್ಲಿ ಅಳವಡಿಸಿಕೊಂಡು ಮುನ್ನಡೆಸಲು ಸಿಡಬ್ಲ್ಯೂಎಫ್‌ಐ ಸಂಘಟನೆಯು ಕರೆ ನೀಡಿದೆ.