ಗ್ರಾ. ಪಂ ಪಿಡಿಒ – ಅಧ್ಯಕ್ಷರ ವಿರುದ್ದ ಹಣ ದುರುಪಯೋಗ ಆರೋಪ: ಪಂಚಾಯಿತಿ ಸದಸ್ಯರು ಪ್ರತಿಭಟನೆ

ಗೌರಿಬಿದನೂರು: ಪಂಚಾಯಿತಿ ಸದಸ್ಯರು, “ಮಂಚೇನಹಳ್ಳಿ ತಾಲ್ಲೂಕಿನ ಮಿನಕನಗುರ್ಕಿ ಗ್ರಾಮ ಪಂಚಾಯಿತಿ ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಮತ್ತು ಪಂಚಾಯಿತಿ ಅಧ್ಯಕ್ಷ ಹಣ ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಆರೋಪಿಸಿ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಿದರು.

ಪಂಚಾಯಿತಿ ಪಿಡಿಒ ರಾಘವೇಂದ್ರ ಅನಾರೋಗ್ಯ ನಿಮಿತ್ತ ಒಂದು ತಿಂಗಳ ರಜೆ ಹಾಕಿದ್ದರು. ಆ ಜಾಗಕ್ಕೆ ಬಂದ ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಮತ್ತು ಅಧ್ಯಕ್ಷೆಯ ಪತಿ ₹2 ಲಕ್ಷದ ನಾಲ್ಕು ಚೆಕ್ ಗಳನ್ನು ಒಂದೇ ಹೆಸರಿನಲ್ಲಿ ಬರೆದು ಸರ್ಕಾರದ ಹಣ ದುರುಪಯೋಗಪಡಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಈ ಕುರಿತು ಮಾತನಾಡಿ ಸದಸ್ಯ ಕಾಂತರಾಜು ಮಾತನಾಡಿ, ಪಿಡಿಒ ಜಿಎಸ್‌ಟಿ ಬಿಲ್ ಇಲ್ಲದೆ ₹2 ಲಕ್ಷದ 5 ಚೆಕ್ ಗಳನ್ನು ಬರೆದು ಬ್ಯಾಂಕಿಗೆ ಕಳುಹಿಸಿದ್ದಾರೆ. ಅವುಗಳನ್ನು ಈಗ ತಡೆಹಿಡಿಯಲಾಗಿದೆ. ಚೆಕ್ ತೋರಿಸಿ ಎಂದರೆ ಅವರ ಬಳಿ ಇಲ್ಲ. ಇದನ್ನು ಸಿಇಒ ಗಮನಕ್ಕೆ ತರಲಾಗುವುದು ಎಂದರು.

ಇದನ್ನೂ ಓದಿ: ಎ.ಐ.ನಂತಹ ತಾಂತ್ರಿಕ ಪ್ರಗತಿ ಮತ್ತು ಸಮಾಜವಾದಿ ವ್ಯವಸ್ಥೆಯ ಅಗತ್ಯ

ಸದಸ್ಯ ನಾಗರಾಜ್ ಮಾತನಾಡಿ, ಅಧ್ಯಕ್ಷರ ಅವಧಿ ನಿನ್ನೆಗೆ ಮುಕ್ತಾಯವಾಗಿದೆ. ಈ ಬಗ್ಗೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹಣವನ್ನು ಅವರಿಗೆ ಬೇಕಾದ ಖಾತೆಗೆ ತುಂಬಿಸಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮತ್ತೊಬ್ಬ ಸದಸ್ಯ ವೆಂಕಟೇಶ್, ಚಾರ್ಜ್ ಪಿಡಿಒ ಚಂದ್ರಶೇಖರ್ ಅಕ್ರಮವಾಗಿ ನಮ್ಮ ಪಂಚಾಯಿತಿ ಹಣವನ್ನು ಡ್ರಾ ಮಾಡಿದ್ದು ಯಾವುದೇ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಪಂಚಾಯಿತಿ ಹಣ ದುರುಪಯೋಗವಾಗಿದೆ ಎಂದರು.

ಮಂಗಳವಾರ ವಿಷಯ ತಿಳಿದ ಪಿಡಿಒ ರಾಘವೇಂದ್ರ, ಹೆಚ್ಚುವರಿ ಪಿಡಿಒ ಚಂದ್ರಶೇಖರ್ ಅವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು. ಅದರೆ, ಅವರು ಸರಿಯಾದ ಮಾಹಿತಿ ನೀಡಲಿಲ್ಲ ಎಂದರು.

ಈ ವೇಳೆ ಬಾಲಕೃಷ್ಣ, ಮಂಜುನಾಥ್, ರಾಘವೇಂದ್ರ, ಸುಬ್ರಮಣಿ, ಅಮೀರ್, ನಾಗರಾಜು ಸೇರಿದಂತೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ನೋಡಿ: “ವಿಕಸಿತ ಭಾರತ ಯಾರಿಗೆ? ಬ್ಯಾಂಕಿಂಗ್–ವಿಮಾ ವಲಯದಲ್ಲಿ ಜನಸಾಮಾನ್ಯರ ಹಿತ ಕಣ್ಮರೆಯೇ?” Janashakthi Media

Donate Janashakthi Media

Leave a Reply

Your email address will not be published. Required fields are marked *