ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾ.ಪಂ ಚುನಾವಣಾ ಮತದಾನ ಮುಗಿದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಆಯಾ ತಾಲೂಕಿನಲ್ಲಿ ಬೆಳಗ್ಗೆ 8ಕ್ಕೆ ಮತ ಪೆಟ್ಟಿಗೆಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳನ್ನು ಭದ್ರತೆಯೊಂದಿಗೆ ಅಭ್ಯರ್ಥಿಗಳ ಎಜೆಂಟರ ಎದುರಿನಲ್ಲಿ ತೆರೆಯಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 8ಕ್ಕೆ ಆರಂಭವಾಗುವ ಮತ ಎಣಿಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ಮುಗಿಯಲಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಂತರ ಎರಡು ಹಂತಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು 30 ಜಿಲ್ಲೆಗಳ 5,728 ಗ್ರಾಮ ಪಂಚಾಯಿತಿಗಳ 35,884 ಕ್ಷೇತ್ರಗಳಿಂದ ಒಟ್ಟು 92,121 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಸರಾಸರಿ ಶೇಕಡಾ 81.42 ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯದ ಎಲ್ಲ 30 ಜಿಲ್ಲೆಗಳ 226 ತಾಲೂಕುಗಳ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 5,728 ಪಂಚಾಯಿತಿಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಎರಡು ಹಂತಗಳಲ್ಲಿ ನಡೆದ ಚುನಾವಣೆಗೆ ಒಟ್ಟು 3,11,887 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಅವರಲ್ಲಿ 2,97,281 ಅಭ್ಯರ್ಥಿಗಳ ನಾಮಪತ್ರ ಕಮಬದ್ಧವಾಗಿದ್ದವು. ಕೊನೆಗೆ 74,467 ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದಾರೆ. 8,074 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು.
ನಗರ ಸಭೆ, ಪುರಸಭೆ ಘೋಷಣೆಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಟ್ಟು 648 ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ. ಹೀಗಾಗಿ ಅಷ್ಟು ಸ್ಥಾನಗಳಿಗೆ ಚುನಾವಣೆ ನಡೆಯದೆ ಖಾಲಿ ಉಳಿದಿವೆ. ಇಂದು ಮತ ಎಣಿಕೆ ನಡೆಯಲಿದ್ದು ಒಟ್ಟು 2,22,814 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬ್ಯಾಲೇಟ್ ಪೇಪರ್ ಕೌಂಟಿಂಗ್ ಮಾಡುವುದು ನಿಧಾನಗತಿಯ ಕೆಲಸವಾಗಿದ್ದು ಫಲಿತಾಂಶ ರಾತ್ರಿಯವರೆಗೆ ನಡೆಯುವ ಸಾಧ್ಯತೆ ಇದೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ವಿದ್ಯುತ್ ಮತಯಂತ್ರ ಅಳವಡಿಸಲಾಗಿದೆ.