ಬೆಂಗಳೂರು: ಹೋರಾಟಗಾರ್ತಿ ಹಾಗೂ ಪತ್ರಕರ್ತೆ ದಿವಂಗತ ಗೌರಿ ಲಂಕೇಶ್ ಅವರ ಕುರಿತು ಅವರ ಬದುಕು, ಹೋರಾಟದ ವಿವರಗಳು ಒಳಗೊಂಡಿರುವ ಸಾಕ್ಷ್ಯಚಿತ್ರವೊಂದನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ತಯಾರಿಸುತ್ತಿದ್ದಾರೆ.
ಸಾಮಾಜಿಕ ಚಳವಳಿಗಳಿಗೆ ಪ್ರೇರಣೆಯಾಗಿಯೂ ಪತ್ರಕರ್ತೆಯಾಗಿಯೂ ತೊಡಗಿಸಿಕೊಂಡಿದ್ದ ಗೌರಿ ಲಂಕೇಶ್ ಅವರು ಕೋಮು ಸೌಹಾರ್ದಕ್ಕಾಗಿ, ಬಹುತ್ವದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದರು. ಶೋಷಿತರ ಪರ ದನಿ ಎತ್ತಿದ ಅವರು 2017ರ ಸೆಪ್ಟಂಬರ್ 05ರಂದು ಸನಾತನಾವಾದಿಗಳ ಗುಂಡೇಟಿಗೆ ಬಲಿಯಾದರು.
ಹತ್ಯೆಯನ್ನು ಖಂಡಿಸಿ ರಾಜ್ಯ-ದೇಶ-ಪ್ರಪಂಚದೆಲ್ಲೆಡೆ ʻನಾನು ಗೌರಿ ನಾವೆಲ್ಲರೂ ಗೌರಿʼ ಎಂಬ ದನಿ ಎದ್ದಿತು. ಅದು ಇಂದಿಗೂ ಮುಂದುವರೆಯುತ್ತಿದೆ. ಅದು ಮತ್ತಷ್ಟು ಮಾರ್ಧನಿಸುವಂತೆ ಮಾಡಲು ಅವರ ಸಹೋದರಿ ಕವಿತಾ ಲಂಕೇಶ್ ಮುಂದಾಗಿದ್ದಾರೆ.
ಗೌರಿ ಲಂಕೇಶ್ ರವರ ಹತ್ಯೆಗೆ ನ್ಯಾಯ ಸಿಗಬೇಕೆಂದು ಹೋರಾಟ ನಡೆಸುವುದರೊಂದಿಗೆ, ಸಾಕ್ಷ್ಯಚಿತ್ರ ತಯಾರಿಯಲ್ಲಿಯೂ ತೊಡಗಿದ್ದಾರೆ. ಅದಕ್ಕಾಗಿ ಇಡೀ ಕರ್ನಾಟಕ ಸುತ್ತುತ್ತಿರುವ ಅವರು ಈ ತಿಂಗಳಿನಲ್ಲಿ ಸಾಕ್ಷ್ಯಚಿತ್ರ ಪೂರ್ಣಗೊಳಿಸಿ 2022ರ ಜನವರಿಯಲ್ಲಿ ಬಿಡುಗಡೆ ಮಾಡಲು ಸಿದ್ದರಾಗಿದ್ದಾರೆ.
“ಗೌರಿ ನನಗೆ ಸಹೋದರಿ ಎಂಬುದಕ್ಕಿಂತಲೂ ಮಿಗಿಲಾಗಿ ಆಕೆಯ ಜೀವನವು ಆಕೆಯ ಬಗ್ಗೆ ಚಿತ್ರ ಮಾಡಬೇಕೆಂಬ ಕಠಿಣ ನಿರ್ಧಾರಕ್ಕೆ ಕಾರಣವಾಗಿತ್ತು. ಆಕೆ ನನ್ನ ಸ್ನೇಹಿತೆ, ಮಾರ್ಗದರ್ಶಕಿಯಾಗಿದ್ದಳು. ಆಕೆ ನನ್ನ ಹತ್ತಿರದಲ್ಲಿಲ್ಲ ಎಂದು ನಾನು ಇನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ. ಚಿತ್ರ ಮಾಡುವುದು ಎಂದರೆ, ಆ ಆಘಾತಕಾರಿ ನೆನಪುಗಳಿಗೆ ಹಿಂತಿರುಗುವುದು. ಆದರೆ, ನ್ಯಾಯ ಮತ್ತು ಜನರ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವಾಗ ಯಾವುದೇ ಭಯವಿಲ್ಲದ ಆಕೆಯ ಕಥೆಯನ್ನು ನಾನು ಹೇಳಲೇಬೇಕು ಎಂದು ನಾನು ಭಾವಿಸಿದ್ದೇನೆ” ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.
2000ರಲ್ಲಿ ತಂದೆಯ ನಿಧನ ನಂತರ ʻಲಂಕೇಶ್ ಪತ್ರಿಕೆʼಯ ಜವಾಬ್ದಾರಿ ವಹಿಸಿಕೊಂಡ ಗೌರಿ ಲಂಕೇಶ್ ನಂತರದ ಅವರ ಜೀವನ ಮತ್ತು ಅವರ ಕ್ರಿಯಾಶೀಲತೆಯನ್ನು ಈ ಚಿತ್ರ ಸೆರೆಹಿಡಿಯುತ್ತದೆ. ಸಾಕ್ಷ್ಯಚಿತ್ರವು ನೆದರ್ಲ್ಯಾಂಡ್‌ನಲ್ಲಿ ನಡೆಯುವ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.