ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳು 2017ರ ಏಪ್ರಿಲ್ ಮತ್ತು 2022 ರ ಜೂನ್ ತಿಂಗಳ ನಡುವೆ ಆಧಾರ್ ಉಪಕ್ರಮ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಐದು ಪ್ರಮುಖ ಜಾಗತಿಕ ಸಲಹಾ ಸಂಸ್ಥೆಗಳಿಗೆ 500 ಕೋಟಿ ಭಾರಿ ಮೊತ್ತವನ್ನು ನೀಡಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಾಹಿತಿ ಹಕ್ಕು ಕಾಯಿದೆಯ ಮೂಲಕ ಪಡೆದ ಮಾಹಿತಿಯ ಆಧಾರದ ಮೇಲೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಜಾಗತಿಕ ಸಲಹಾ ಸಂಸ್ಥೆಗಳಾದ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್, ಡೆಲಾಯ್ಟ್ ಟಚ್ ಟೊಹ್ಮಾಟ್ಸು ಲಿಮಿಟೆಡ್, ಅರ್ನ್ಸ್ಟ್ & ಯಂಗ್ ಗ್ಲೋಬಲ್ ಲಿಮಿಟೆಡ್, ಕೆಪಿಎಂಜಿ ಇಂಟರ್‌ನ್ಯಾಶನಲ್ ಲಿಮಿಟೆಡ್ ಮತ್ತು ಮೆಕಿನ್ಸೆ & ಕಂಪನಿಯು ಒಟ್ಟಾರೆಯಾಗಿ ಕೇಂದ್ರ ಸರ್ಕಾರದಿಂದ ಕನಿಷ್ಠ 308 ಕಾರ್ಯಯೋಜನೆಗಳನ್ನು ಪಡೆದುಕೊಂಡಿದೆ ಎಂದು ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ಅಧಿಕಾರ ದುರ್ಬಳಕೆ ಆರೋಪ| ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ವರ್ಗಾವಣೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಇಲಾಖೆ, ರಕ್ಷಣಾ ಇಲಾಖೆ, ವಿದ್ಯುತ್ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ 16 ಸಚಿವಾಲಯಗಳು ಇದರಲ್ಲಿ ಸೇರಿವೆ. ಅದರಲ್ಲೂ ಪೆಟ್ರೋಲಿಯಂ ಸಚಿವಾಲಯವು 170 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಹೊರಗುತ್ತಿಗೆ ನಿಯೋಜನೆಗಳಿಗೆ ನೀಡಿ ಅತಿ ಹೆಚ್ಚು ಖರ್ಚು ಮಾಡಿರುವ ಇಲಾಖೆಯಾಗಿ ಹೊರಹೊಮ್ಮಿದೆ. ಈ ಅವಧಿಯಲ್ಲಿ ಸಲಹಾ ಸೇವೆಗಳು, ತಾಂತ್ರಿಕ ಸಲಹೆಗಾರರನ್ನು ನೇಮಿಸಿಕೊಳ್ಳುವುದು ಮತ್ತು ಇ-ಆಡಳಿತ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗಳ ಮೌಲ್ಯಮಾಪನ ಸೇರಿದಂತೆ ಹಲವಾರು ಸೇವೆಗಳನ್ನು ಸಂಸ್ಥೆಗಳಿಂದ ಸರ್ಕಾರ ಪಡೆದುಕೊಂಡಿದೆ.
ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ ಕನ್ಸಲ್ಟಿಂಗ್ 156 ಕೋಟಿ ಮೌಲ್ಯದ 92 ಒಪ್ಪಂದಗಳನ್ನು ಸರ್ಕಾರದ ಜೊತೆಗೆ ಮಾಡಿದ್ದು ಅತೀ ಹೆಚ್ಚು ಹಣವನ್ನು ಪಡೆದುಕೊಂಡಿದೆ. ಡೆಲಾಯ್ಟ್ 130.13 ಕೋಟಿ ರೂ. ಮೌಲ್ಯದ 59 ಕಾರ್ಯಯೋಜನೆಗಳನ್ನು ಪಡೆದುಕೊಂಡರೆ, ಅರ್ನ್ಸ್ಟ್ & ಯಂಗ್ ಮತ್ತು ಕೆಪಿಎಂಜಿಗೆ ಕ್ರಮವಾಗಿ 88.05 ಕೋಟಿ ರೂ. ಮೌಲ್ಯದ 87 ಗುತ್ತಿಗೆಗಳನ್ನು ಮತ್ತು 68.46 ಕೋಟಿ ರೂ. ಮೌಲ್ಯದ 66 ಗುತ್ತಿಗೆಗಳನ್ನು ಪಡೆದುಕೊಂಡಿದೆ. ಅಮೆರಿಕದ ಸಲಹಾ ಸಂಸ್ಥೆ ಮೆಕಿನ್ಸೆ 50.09 ಕೋಟಿ ಮೊತ್ತದ ಮೂರು ಒಪ್ಪಂದಗಳನ್ನು ಸರ್ಕಾರದಿಂದ ಪಡೆದುಕೊಂಡಿದೆ.
ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಂದ ನೇಮಕಗೊಂಡ ಸಲಹೆಗಾರರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಲು ಹಣಕಾಸು ಸಚಿವಾಲಯವು ಈಗಷ್ಟೆ ಹೊರಟಿದೆ. ಈ ಬಗ್ಗೆ ಹಣಕಾಸು ಸಚಿವಾಲಯದ ಅಪರಿಚಿತ ಹಿರಿಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದು, “ಹೊರಗಿನ ವೃತ್ತಿಪರರ ಸಾಮರ್ಥ್ಯದ ಬಗ್ಗೆ ನಮಗೆ ಸ್ಪಷ್ಟವಾದ ಕಲ್ಪನೆ ಇಲ್ಲ. ಕೆಲವು ಇಲಾಖೆಗಳ ಅಡಿಯಲ್ಲಿ ನೂರಾರು ಜನರು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ತುಂಬಾ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು Janashakthi Media