ವಿದ್ಯಾರ್ಥಿಗಳು ಶಾಲೆ ತೆರವುಗೊಳಸಿದ ಅರ್ಧ ಗಂಟೆಯಲ್ಲಿ ಶಾಲಾ ಚಾವಣಿ ಕುಸಿತ

ಅಥಣಿ: ಮಳೆಗೆ ನೆನೆದಿದ್ದ ಶಾಲಾ ಕೊಠಡಿಯಿಂದ ವಿದ್ಯಾರ್ಥಿಗಳನ್ನು ಬೇರೆಡೆ ಕರೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಚಾವಣಿ ಕುಸಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದಿದೆ.

ಶಿಕ್ಷಕರ ಸಮಯ ಪ್ರಜ್ಞೆಯಿಂದ ಘಟಿಸಬಹುದಾಗಿದ್ದ ಅನಾಹುತ ತಪ್ಪಿದಂತಾಗಿದೆ. ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ 82 ವಿದ್ಯಾರ್ಥಿಗಳು ಓದುತ್ತಿರುವ ಕೋಣೆಯಲ್ಲಿ ಚಾವಣಿಯ ಪದರು ಕಳಚುತ್ತಿರುವುದನ್ನು ಕಂಡು ವರ್ಗ ಶಿಕ್ಷಕರು ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದಾರೆ. ಆಗ ಮುಖ್ಯ ಶಿಕ್ಷಕ ಎಸ್‌.ಎಂ.ರಾಠೋಡ ಅವರು ಮಕ್ಕಳ ಮೇಲೆ ಬೀಳುವ ಸ್ಥಿತಿಯನ್ನು ಅರಿತು ತಕ್ಷಣವೇ ಎಲ್ಲ ಮಕ್ಕಳನ್ನು ಬೇರೊಂದು ಕೊಠಡಿಗೆ ಸ್ಥಳಾಂತರಿಸಿ ಅಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಿದರು. ಮಕ್ಕಳನ್ನು ಈ ಕೋಣೆಯಿಂದ ಸ್ಥಳಾಂತರಿಸಿದ ಅರ್ಧಗಂಟೆಯಲ್ಲಿ ಕೋಣೆಯ ಚಾವಣಿ ಪದರು ಕುಸಿದುಬಿದ್ದಿದೆ.

ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಸಮಯೋಚಿತವಾಗಿ ಸ್ಪಂದಿಸದೇ ಹೋಗಿದ್ದರೇ ಮಕ್ಕಳಿಗೆ ಅಪಾಯ ಕಾದಿತ್ತು. ಶಿಕ್ಷಕರ ಕಾರ್ಯಕ್ಕೆ ಮಕ್ಕಳ ಪಾಲಕರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ 238ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ.

ಜಿಲ್ಲೆಯಲ್ಲಿ ಇಂತಹ ಅನೇಕ ಶಾಲೆಗಳು ಇವು. ಸರಕಾರಿ ಶಾಲೆಗಳನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕನಿಷ್ಠ ಮೂಲ ಸೌಲಭ್ಯಗಳನ್ನು ನೀಡದೆ ಹೋದರೆ‌ ಮಕ್ಕಳು ಕಲಿಯುವುದು ಹೇಗೆ? ಮಳೆಗಾಲಾದಲ್ಲಿ ದುರಸ್ತಿಯಲ್ಲಿರುವ ಶಾಲೆಗಳಿಂದ ಅನಾಹುತ ಸಂಭವಿಸುತ್ತದೆ ಎಂದು ಶಿಕ್ಷಣ ಇಲಾಖೆಗೆ ಗೊತ್ತಿಲ್ಲವೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಶಿಥಿಲಾವಸ್ಥೆಯ ಕೋಣೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕೂಡಲೇ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *