ಬೆಂಗಳೂರು: ರಾಜ್ಯ ಸರಕಾರವನ್ನು ಪ್ರತಿನಿಧಿಸುವ ರಾಜ್ಯಪಾಲರು ಸರಕಾರ ನಡೆಸುವ ಪ್ರತಿವರ್ಷದ ಮೊದಲ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ಮಂತ್ರಿಮಂಡಲ ಸಿದ್ಧಪಡಿಸಿದ ವರದಿ ಓದುವುದನ್ನು ಸಂವಿಧಾನದ ಕಲಂ 176 ವಿಧಿಸುತ್ತದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಪ್ರಕಾಶ್ ಕೆ ಹೇಳಿದರು.
ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಸಿಪಿಐ(ಎಂ) ಕಚೇರಿಯ ಮುಂಬಾಗ ಪ್ರತಿಭಟನೆ ನಡೆಸಿ ರಾಜ್ಯ ಪಾಲರ ನಡೆಯನ್ನು ಖಂಡಿಸಿದರು.
ರಾಜ್ಯದ ರಾಜ್ಯಪಾಲರಾದ ತಾವರಚಂದ್ ಗೆಹ್ಲೋಟ್ ಸಂವಿಧಾನದ ವಿಧಿಯಂತೆ ನಡೆದುಕೊಳ್ಳದೆ, ಜಂಟಿ ಸದನ ಅಧಿವೇಶನದಲ್ಲಿ ಸರಕಾರದ ಭಾಷಣ ಓದದೆ ತನ್ನದೆ ಮಾತುಗಳನ್ನಾಡಿ ನಿರ್ಗಮಿಸಿರುವುದು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆಯೆಂದು ಪ್ರಕಾಶ್ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: ಜಂಟಿ ಅಧಿವೇಶನ | ಭಾಷಣ ಮಾಡದೆ ಹೊರಟು ಹೋದ ರಾಜ್ಯಪಾಲರು!
ರಾಜ್ಯಪಾಲರು, ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆ ಹೊರತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಂತ್ರಿಮಂಡಲದ ಮೇಲಿನ ಸೂಪರ್ ಮುಖ್ಯ ಮಂತ್ರಿಯಲ್ಲ! ರಾಜ್ಯಪಾಲರು ಕೇಂದ್ರ ಸರಕಾರದ ಮೂಲಕ ನೇಮಕಗೊಂಡವರು, ಅವರು ಚುನಾಯಿತ ಪ್ರತಿನಿಧಿಗಳು ಅಲ್ಲ. ಬದಲಿಗೆ, ರಾಜ್ಯ ಸರಕಾರವು, ರಾಜ್ಯದ ಜನತೆಯ ಮತದಾನದ ಮೂಲಕ ಆಯ್ಕೆಯಾದ ಜನ ಪ್ರತಿನಿಧಿಗಳಾದ ಶಾಸಕರು, ಅದರಲ್ಲು ಬಹುಮತ ಪಡೆದ ಪಕ್ಷದ ಶಾಸಕರು ಸರಕಾರ ರಚನೆಗೆ ತನ್ನ ನಾಯಕನನ್ನು ಆಯ್ಕೆ ಮಾಡಿಕೊಂಡು ಸರಕಾರ ರಚಿಸಲು ಅವಕಾಶ ಮಾಡಿಕೊಡುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದದ್ದು ಎಂಬುದನ್ನು ಜನತೆ ಇಲ್ಲಿ ಗಮನಿಸಬೇಕಾಗಿದೆ.
ಹೀಗಾಗಿ, ರಾಜ್ಯ ಸರಕಾರದ ಅಥವಾ ಮಂತ್ರಿಮಂಡಲ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣವನ್ನು, ರಾಜ್ಯ ಸರಕಾರವನ್ನು ಪ್ರತಿನಿಧಿಸಿ ಜಂಟಿ ಸದನದಲ್ಲಿ ರಾಜ್ಯಪಾಲರು ಓದುವುದು ಅವರ ಕರ್ತವ್ಯವಾಗಿದೆ. ಅದನ್ನು ತಮ್ಮ ಮನಬಂದಂತೆ ತಿದ್ದುಪಡಿಗೆ ಕ್ರಮವಹಿಸುವುದುಕ್ಕೆ ಮತ್ತು ವ್ಯತಿರಿಕ್ತವಾಗಿ ತಮ್ಮದೆ ಭಾಷಣ ಮಾಡಲು ಅದು ರಾಜ್ಯಪಾಲರ ವೈಯ್ಯಕ್ತಿಕ ಭಾಷಣವಲ್ಲವೆಂಬುದನ್ನು ಇಲ್ಲಿ ಗಮನಿಸಬೇಕಾಗಿದೆ ಎಂದರು.

ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆಂಬುದನ್ನು ಮರೆತು ಕೇಂದ್ರ ಸರಕಾರದ ಪ್ರತಿನಿಧಿಗಳೆಂಬಂತೆ ಅಥವಾ ರಾಜಕೀಯ ಪ್ರತಿನಿಧಿಗಳೆಂಬಂತೆ ವರ್ತಿಸುತ್ತಿರುವುದು, ರಾಜ್ಯ ಸರಕಾರಗಳ ಜತೆ ನಿತ್ಯ ತಿಕ್ಕಾಟಕ್ಕೆ ನಿಲ್ಲುವುದು ಕಂಡುಬಂದಿದೆ. ಅದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಿಪಿಐ(ಎಂ) ಮುಖಂಡರು ಆರೋಪಿಸಿದರು.
ದೇಶದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸುವ ದಿಶೆಯಲ್ಲಿ ಕೇಂದ್ರ ಹಾಗು ರಾಜ್ಯ ಸಂಬAಧಗಳನ್ನು ಬಲಗೊಳಿಸುವ ಬದಲು ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ, ಅವರ ನೇತೃತ್ವದ ಸರಕಾರವು, ರಾಜ್ಯ ಸರಕಾರಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ನಿರತವಾಗಿರುವುದು ಅದಕ್ಕಾಗಿ ರಾಜ್ಯಪಾಲರ ಕಛೇರಿ ಹಾಗು ಸ್ಥಾನವನ್ನು ದುರುಪಯೋಗ ಮಾಡುತ್ತಿರುವುದನ್ನು ನಾವೀಗಾಗಲೆ ಗಮನಿಸಿದ್ದೇವೆ. ಜನತೆ ಇದನ್ನು ತಡೆಯಬೇಕಾಗಿದೆ.
ರಾಜ್ಯ ಪಾಲರು ಸಂವಿಧಾನವನ್ನು ಗೌರವಿಸದೇ ಜಂಟಿ ಸದನದ ಅಧಿವೇಶನದಲ್ಲಿ ಸಾಂವಿಧಾನಿಕ ಕ್ರಮದಂತೆ ಸರಕಾರದಿಂದ ಸಿದ್ಧಪಡಿಸಿಕೊಟ್ಟ ಭಾಷಣ ಓದದೇ ನಾಲ್ಕು ವಾಕ್ಯಗಳನ್ನು ಹೇಳಿ ನಿರ್ಗಮಿಸಿದ್ದು ಸರಿಯಾದ ಕ್ರಮವಲ್ಲವೆಂದು ಸಿಪಿಐ(ಎಂ) ಅರೊಪಿಸಿದೆ.
ಇದೇ ವೇಳೆಗೆ ಅಧಿಕೃತ ವಿರೋಧ ಪಕ್ಷ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ.ಜೆ.ಪಿ. ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದೆ. ಇದು ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದಿರುವ ಸಿಪಿಐ(ಎಂ) ಬಿಜೆಪಿ ನಡೆಯನ್ನು ಖಂಡಿಸಿದೆ.
ಮನರೇಗ ರದ್ಧತಿ ವಿರುದ್ದ ಜ.30ರಿಂದ ವಾರಾಚರಣೆ ನಡೆಸಲಾಗುತ್ತಿದೆ. ಒಂದು ಹೊಸ ಕಾಯ್ದೆಯನ್ನು ತಂದು ಸೀಮಿತ ಉದ್ಯೋಗದ ಹಕ್ಕನ್ನು ಒದಗಿಸುವ ಸಾರ್ವತ್ರಿಕ, ಬೇಡಿಕೆ ಆಧಾರಿತ ಕಾನೂನಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯ ನಾಶದ ವಿರುದ್ಧ ಪಕ್ಷವು ತೀವ್ರ ಅಭಿಯಾನವನ್ನು ಕೈಗೊಳ್ಳಲಿದೆ. ಈ ಅಭಿಯಾನವು ಜನವರಿ 30 (ಮಹಾತ್ಮ ಗಾಂಧಿಯವರ ಮರಣ ವಾರ್ಷಿಕ) ರಿಂದ ಪ್ರಾರಂಭವಾಗಿ ಫೆಬ್ರವರಿ 5 ರವರೆಗೆ ಒಂದು ವಾರ ನಡೆಸಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ನಾಯಕರು ಭಾಗವಹಿಸಿದ್ದರು.
ಇದನ್ನೂ ನೋಡಿ: Karnataka Legislative Assembly Day 01 Live | 16 ನೇ ವಿಧಾನ ಸಭೆಯ 9ನೇ ಅಧಿವೇಶನದ ನೇರಪ್ರಸಾರ
