ಬೆಂಗಳೂರು | ರಾಜ್ಯಪಾಲರ ಸ್ಥಾನ ಸಂವಿಧಾನಾತ್ಮಕ, ರಾಜಕೀಯವಲ್ಲ: ರಾಜಾರಾಂ ತಲ್ಲೂರು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರ ಪಾತ್ರದ ಬಗ್ಗೆ ದೇಶದ ವಿವಿಧ ರಾಜ್ಯಗಳಲ್ಲಿ ಚರ್ಚೆಗಳು ಹಾಗೂ ವಿವಾದಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರ ಹುದ್ದೆಯ ಮೂಲ ಉದ್ದೇಶ ಮತ್ತು ಜವಾಬ್ದಾರಿಗಳನ್ನು ಸಮಾಜ ಅರಿಯಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನವು ರಾಜ್ಯಪಾಲರಿಗೆ ನೀಡಿರುವ ಅಧಿಕಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂಬುದನ್ನು ಅವರು ಈ ಕೆಳಗಿನ ಬರಹದಲ್ಲಿ ತಿಳಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಅಧಿಕೃತ ಮುಖ್ಯಸ್ಥರಾಗಿರುವ ಮತ್ತು ತನ್ನ ಸೀಲು-ಸಹಿಯಡಿಯಲ್ಲೇ ರಾಜ್ಯದ ಆಡಳಿತಾತ್ಮಕ ನಿರ್ಧಾರಗಳಿಗೆ ಒಪ್ಪಿಗೆಯ ಮುದ್ರೆಯೊತ್ತಿ, ಅದನ್ನು ಅಧಿಕೃತಗೊಳಿಸುವ ರಾಜ್ಯಪಾಲರು ತಾವೇ “ಹೋಸ್ಟ್” ಆಗಿ ಕರೆದಿರುವ ವಿಧಾನಮಂಡಲ ಅಧಿವೇಶನದ ಆರಂಭದಲ್ಲಿ (ಅದರಲ್ಲೂ ವಿಧಾನಸಭೆಯ ಆರಂಭಿಕ ಅಧಿವೇಶನ ಮತ್ತು ಪ್ರತೀ ವರ್ಷದ ಆರಂಭಿಕ ಅಧಿವೇಶನಗಳು) ಉಭಯ ಸದನಗಳನ್ನು ಉದ್ದೇಶಿಸಿ ತನ್ನ ಸರ್ಕಾರದ ನೀತಿಗಳನ್ನು ಸದನಕ್ಕೆ ವಿವರಿಸುವುದು ಅವರ ಸಾಂವಿಧಾನಿಕ ಜವಾಬ್ದಾರಿ.

ಇದನ್ನೂ ಓದಿ : ಬೆಂಗಳೂರಿನಿಂದ ಮಾರಿಕುಪ್ಪಂವರೆಗೆ ಸಂಚರಿಸುತ್ತಿದ್ದ ರೈಲನ್ನು ಪುನರಾರಂಭಿಸಿ: ಪ್ರತಿಭಟನೆ

ಸಂವಿಧಾನದ 176(1) ವಿಧಿಯನ್ವಯ, ಅದು ರಾಜ್ಯಪಾಲ ಹುದ್ದೆಯಲ್ಲಿರುವವರು ನಿರಾಕರಿಸಲಾಗದ ಜವಾಬ್ದಾರಿ. ಸಂವಿಧಾನ ಸ್ಪಷ್ಟ ಶಬ್ದಗಳಲ್ಲಿ “Governor SHALL Address” ಎನ್ನುತ್ತದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದು, ಸಂವಿಧಾನದ ಪಾಲನೆಯ ಪ್ರತಿಜ್ಞೆ ಸ್ವೀಕರಿಸಿರುವ ರಾಜ್ಯಪಾಲರು ಸ್ವತಃ ತನ್ನ ಜವಾಬ್ದಾರಿಯನ್ನು ನಿರಾಕರಿಸುವುದು ಸಂವಿಧಾನಕ್ಕೆ ಅಗೌರವ ತೋರಿಸಿದಂತಾಗಬಹುದು.

ರಾಜ್ಯಪಾಲರಿಗೆ ತಾವು ಓದಬೇಕಾಗಿರುವ ಭಾಷಣದಲ್ಲಿ 11 ಪಾರಾಗ್ರಾಫ್‌ಗಳಿಗೆ ಆಕ್ಷೇಪ ಇದೆಯಂತೆ. ಅದರಲ್ಲಿ ಒಕ್ಕೂಟ ಸರ್ಕಾರವು MGNREGA ಕಾಯಿದೆ ಬದಲಾಯಿಸಿ VB GRAM G ಕಾಯಿದೆ ತಂದಿರುವುದು ಸೇರಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಅವರ ಈ ಭಾಷಣ, ಅವರ ಸ್ವಂತದ ಭಾಷಣ ಅಲ್ಲ. ಸಾಂವಿಧಾನಿಕವಾಗಿ ಆಯ್ಕೆಯಾದ ಸರ್ಕಾರವೊಂದರ ನಿರ್ಣಯಗಳನ್ನು ಔಪಚಾರಿಕವಾಗಿ ಸದನಕ್ಕೆ ತಿಳಿಸುವ ಪ್ರಕ್ರಿಯೆ. ಇದರಲ್ಲಿ ರಾಜ್ಯಪಾಲರಿಗೆ ವೈಯಕ್ತಿಕವಾದ ಪಾತ್ರ ಏನೂ ಇರುವುದಿಲ್ಲ.

ತಮಿಳುನಾಡಿನಲ್ಲಿ ಮೊನ್ನೆ ಇಂತಹದೇ ಸನ್ನಿವೇಶದಲ್ಲಿ ನಡೆದ ಪ್ರಹಸನದ ಮುಂದುವರಿಕೆಯಾಗಿ ಕರ್ನಾಟಕದಲ್ಲೂ “ಸಾಂವಿಧಾನಿಕ ಬಿಕ್ಕಟ್ಟನ್ನು” ಕೈಯಾರೆ ಸೃಷ್ಟಿಸುವ ಇಂತಹ ತೀರ್ಮಾನಗಳು ದೇಶದ ಸಂವಿಧಾನಕ್ಕೆ ಅಪಾಯಕಾರಿ. ದೇಶದ ಮೇಲೆ ಭಕ್ತಿ, ಸಂವಿಧಾನದ ಮೇಲೆ ಗೌರವ ಇರುವ ಯಾರೂ ಕೂಡ ಇದನ್ನು ಸಮರ್ಥಿಸಬಾರದು. ಇವೆಲ್ಲ ಸಂವಿಧಾನವನ್ನು ತಿರುಚುವ, ಶಿಥಿಲಗೊಳಿಸುವ ಪ್ರಯತ್ನದ ಭಾಗಗಳೇ ಎಂದು ಪರಿಗಣಿತವಾಗಬೇಕು.

ಒಕ್ಕೂಟ ವ್ಯವಸ್ಥೆಯಲ್ಲಿ, ಒಂದು ರಾಜ್ಯ ಸರ್ಕಾರಕ್ಕೆ ಒಕ್ಕೂಟ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳಲ್ಲಿ ರಾಜ್ಯದ ಹಿತ ಕಡೆಗಣನೆ ಆಗಿದೆ ಎಂದು ಅನ್ನಿಸಿದರೆ ಅದನ್ನು ಸಾಂವಿಧಾನಿಕ ಚೌಕಟ್ಟಿನ ಒಳಗೆ ವಿರೋಧಿಸುವ, ವ್ಯವಸ್ಥೆಯ ಮುಖ್ಯಸ್ಥರಾದ ರಾಜ್ಯಪಾಲರ ಬಾಯಿಯಿಂದ ಅದನ್ನು ಹೇಳಿಸುವ ಹಕ್ಕು ಇದೆ. ರಾಜ್ಯಪಾಲರು ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರೇ ಹೊರತು ಭಾರತ ಸರ್ಕಾರದ ಲೋಕಲ್ ಏಜಂಟರಲ್ಲ.

ಇದನ್ನೂ ನೋಡಿ : “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media

Donate Janashakthi Media

Leave a Reply

Your email address will not be published. Required fields are marked *