ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತನ್ನ ಸ್ಟೇಷನ್ ಮ್ಯಾನೇಜರ್ ಜಿಕೋ ಸೋರೆಸ್ ವಿರುದ್ಧ ಏರ್ ಏಷ್ಯಾ ಇಂಡಿಯಾ ಶಿಸ್ತು ಕ್ರಮ ಕೈಗೊಂಡಿದ್ದು, ಅವರನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದೆ. ಜುಲೈ 27ರ ಗುರುವಾರದಂದು ಹೈದರಾಬಾದ್‌ಗೆ ಹೊರಟಿದ್ದ ವಿಮಾನಕ್ಕೆ ತಡವಾಗಿ ಬಂದರು ಎಂದು ಹೇಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ವಿಮಾನ ಹತ್ತಲು ನಿರಾಕರಿಸಲಾಗಿತ್ತು. ಘಟನೆಯು ತೀವ್ರ ವಿವಾರವನ್ನು ಸೃಷ್ಟಿಸಿದ್ದು, ಪ್ರೋಟೊಕಾಲ್ ಉಲ್ಲಂಘನೆ ಆರೋಪ ಮಾಡಲಾಗಿತ್ತು.
ಘಟನೆಗೆ ಪ್ರತಿಕ್ರಿಯೆಯಾಗಿ, ಜುಲೈ 28ರ ಶುಕ್ರವಾರದಂದು ಏರ್ ಏಷ್ಯಾ ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿತು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜಭವನದ ರಾಜ್ಯಪಾಲರ ಕಚೇರಿ, “ರಾಜ್ಯಪಾಲರು ಸಮಯಕ್ಕೆ ಸರಿಯಾಗಿ ಬಂದಿದ್ದಾರೆ. ಆದರೆ ಆದರೆ ಏರ್‌ಲೈನ್‌ನ ಗ್ರೌಂಡ್ ಸಿಬ್ಬಂದಿಯ ಕೊರತೆಯಿಂದಾಗಿ ಅವರು ವಿಮಾನವನ್ನು ತಪ್ಪಿಸಿಕೊಂಡರು. ಇನ್ನೊಂದು ವಿಮಾನಕ್ಕಾಗಿ 90 ನಿಮಿಷಗಳ ಕಾಲ ಕಾಯಬೇಕಾಯಿತು” ಎಂದು ಹೇಳಿತ್ತು.
ಇದನ್ನೂ ಓದಿ: ಉಡುಪಿ ಪ್ರಕರಣದಲ್ಲಿ ಬಿಜೆಪಿ ಇಷ್ಟೆಲ್ಲಾ ರಾದ್ಧಾಂತ ಮಾಡುತ್ತಿರುವುದೇಕೆ?
ಸ್ಟೇಷನ್ ಮ್ಯಾನೇಜರ್ ಜಿಕೋ ಸೋರೆಸ್ ಅವರ ಅಮಾನತು ಜುಲೈ 29ರ ಶನಿವಾರದಿಂದ ಜಾರಿಗೆ ಬಂದಿದೆ. ಸೋಮವಾರ ಏರ್‌ಏಷಿಯಾ ಅಧಿಕಾರಿಗಳು ಮತ್ತು ಗವರ್ನರ್ ಕಚೇರಿಯ ನಡುವೆ ಸಭೆ ಇದ್ದು, ಬಾಕಿ ಉಳಿದಿರುವ ಇಬ್ಬರು ಏರ್‌ಲೈನ್ ಉದ್ಯೋಗಿಗಳು ಅಮಾನತುಗೊಳ್ಳುವ ಸಾಧ್ಯತೆಯಿದೆ.
ವಿಮಾನಯಾನ ಸಂಸ್ಥೆಯು ಪ್ರಾಥಮಿಕ ತನಿಖೆಯನ್ನು ನಡೆಸಿದ್ದು ಹಾಗಾಗಿ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು, ಏರ್ ಏಷ್ಯಾದ ಹಿರಿಯ ಪ್ರತಿನಿಧಿಗಳು ಸೋಮವಾರ ಗವರ್ನರ್ ಗೆಹ್ಲೋಟ್ ಅಥವಾ ಅವರ ತಂಡವನ್ನು ಭೇಟಿ ಮಾಡಲು ನಿರ್ಧರಿಸಿತ್ತು.
ವಿಡಿಯೊ ನೋಡಿ: ನ್ಯಾಷನಲ್ ಕೊ – ಆಪರೇಟಿವ್ ಬ್ಯಾಂಕ್ ವಿವಾದ : ದುಡಿದು ಕೂಡಿಟ್ಟ ದುಡ್ಡಿಗಾಗಿ ಪರದಾಡುತ್ತಿರುವ ಠೇವಣಿದಾರರು