ಹಸಿವು ಮುಕ್ತ ಕರ್ನಾಟಕ ರಾಜ್ಯ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಲಿದೆ :ರಾಜ್ಯಪಾಲ ಥಾವರಚಂದ್‌ ಗೆಹಲೋತ್‌

ಬೆಂಗಳೂರು: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಮಂಡಲ ಜಂಟಿ ಅಧಿವೇಶನ ಇಂದು ಜುಲೈ 3ರಂದು ಆರಂಭವಾಗಿದೆ. ಜನಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿಯೊಂದನ್ನು ನನ್ನ ಸರ್ಕಾರ ದೇಶಕ್ಕೆ ಪರಿಚಯಿಸಲಿದೆ ಎಂದು ರಾಜ್ಯಪಾಲ ಥಾವರಚಂದ್‌ ಗೆಹೆಲೋತ್‌ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಶಾಂತಿಯುತವಾದ, ಸಮೃದ್ಧವಾದ, ಸೌಹರ್ದಯುತವಾದ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಲು ಬದ್ಧರಾಗಿದ್ದೇವೆ. ಯಾರನ್ನೂ ಹೊರಗಿಡದೆ ಎಲ್ಲಾರನ್ನೂ ಒಳಗೊಂಡು ಇವ ನಮ್ಮವ ಎಂದು ಕೊಡಿ ಬಾಳುವ ನಮ್ಮ ಹಿರಿಯರ ಕನಸನ್ನು ನನಸು ಮಾಡಲು ನನ್ನ ಸರ್ಕಾರ ಬದ್ಧವಾಗಿದೆ ಎಂದರು.

ಇದನ್ನೂ ಓದಿ:ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ; ಸರ್ಕಾರದ ಕಾರ್ಯಗಳ ವರದಿ ಮಂಡನೆ

ಜಾತಿ-ಧರ್ಮಗಳ ಹೆಸರಿನಲ್ಲಿನ ಭೇದವನ್ನು ತೊಡೆದು ಹಾಕಲಾಗುವುದು. ದ್ವೇಷರಹಿತ , ಪ್ರೀತಿಯುಕ್ತ ಸಮಾಜ ನಿರ್ಮಾಣ ಮಾಡಲು ಈ ಸರ್ಕಾರವು ಹಲವು ಬಗೆಯ  ಕ್ರಮ ಕೈಗೊಳ್ಳಲಿದೆ ಎಂದು  ಹೇಳಿದರು. ರಾಜ್ಯವು ಒಂದು ರೀತಿಯ ಆರ್ಥಿಕ ಸಂಕಟದ ಸ್ಥಿತಿಯಲ್ಲಿ ನಿಂತಿದೆ. ಈ ಸ್ಥಿತಿಯಿಂದ ರಾಜ್ಯವನ್ನು ಮೇಲೆತ್ತುವುದು ಸರ್ಕಾರದ ಆದ್ಯತೆಯಾಗಲಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಣೆಗೆ ಅಕ್ಕಿಯ ಕೊರತೆ ಎದುರಾಗಿದೆ. ಅಕ್ಕಿ ಲಭ್ಯವಾಗುವವರೆಗೂ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು. ಇಂದಿರಾ ಕ್ಯಾಂಟೀನ್‌ಗಳನ್ನು ಇನ್ನೂ ಸಮರ್ಥವಾಗಿ ನಡೆಸಲಾಗುವುದು ಎಂದು ರಾಜ್ಯಪಾಲರು ಹೇಳಿದರು. ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಹಸಿವು ಮುಕ್ತ ಕರ್ನಾಟಕ ರಾಜ್ಯ ಸ್ಥಾಪನೆ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲು ಮುಂದಾಗಿದೆ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್​ವರೆಗೆ ಉಚಿತ ವಿದ್ಯುತ್​ ಕೊಡಲಾಗುತ್ತದೆ. ಈ ಯೋಜನೆಯಿಂದ ಸುಮಾರು 2.14 ಕೋಟಿ ಕುಟುಂಬಕ್ಕೆ ಅನುಕೂಲ ಆಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಾಕಲಾಗುತ್ತದೆ. ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತದೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಎಂದರು. ಸಾರ್ವಜನಿಕ ಸಂಪತ್ತನ್ನು ಎಲ್ಲಾರಿಗೂ ಹಂಚಿಕೆ ಮಾಡುವ ಉದ್ದೇಶದಿಂದ ಜನಕೇಂದ್ರಿತ ಆರ್ಥಿಕತೆಯನ್ನು ಜಾರಿಗೆ  ತರಲಾಗುವುದು.ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ಸಮಾನ ದೃಷ್ಟಿಯಲ್ಲಿ ಪರಿಗಣಿಸಿ ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲಾಗುವುದು ಎಂದರು.

ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜನಸ್ನೇಹಿ ಮತ್ತು ನಿಷ್ಪಕ್ಷಪಾತವಾದ ಪೋಲಿಸರು ಅಗತ್ಯ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುವುದು.

ಇದಕ್ಕಾಗಿ ಪೊಲೀಸ್‌ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಸ್ನೇಹಿಯಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಜ್ಯಪಾಲರು, ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಜನರ ಬದುಕು ಸುಧಾರಣೆ ಆಗಲಿದೆ ಎಂದರು.

ಇದನ್ನೂ ಓದಿಕಾಂಗ್ರೆಸ್‌ನ ಮೂವರು ವಿಧಾನಪರಿಷತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

 

ಪ್ರಮುಖ ಘೋಷಣೆಗಳು

  • 2013-18ರ ಅವಧಿಯ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ್ದ ಪಶು ಭಾಗ್ಯ, ಅನುಗ್ರಹ ಯೋಜನೆಗಳ ಮರು ಜಾರಿ.
  • ಪರಿಶಿಷ್ಟರ ಜಮೀನು ರಕ್ಷಣೆಗೆ ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ.
  • ಕೃಷಿ ಉತ್ಪನ್ನ ನಿಯಂತ್ರಣ ಮಾರುಕಟ್ಟೆ  ಸಮಿತಿಗಳ ಬಲವರ್ಧನೆಗೆ ಕಾಯ್ದೆ ತಿದ್ದುಪಡಿ.
  • ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೂ ಐದು ವರ್ಷಗಳ ಅವಧಿಯಲ್ಲಿ ಪಕ್ಕಾ ಮನೆ ನಿರ್ಮಾಣ.
  • ಬಾಕಿ ಉಳಿದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಐದು ವರ್ಷಗಳೊಳಗೆ ಪೂರ್ಣಗೊಳಿಸಲಾಗುವುದು.
  • ಅಲೆಮಾರಿ ಕುರಿಗಾರರ ಹಿತರಕ್ಷಣೆಗೆ ಪ್ರತ್ಯೇಕ ಕಾಯ್ದೆ.
  • ಪ್ರವಾಸೋದ್ಯಮ ಕ್ಷೇತ್ರದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿ.
  • ಕೃತಕ ಬುದ್ಧಿಮತ್ತೆಯನ್ನು ಜನಹಿತಕ್ಕೆ ಸೀಮಿತವಾಗಿ ಬಳಸುವಂತೆ ನಿಯಂತ್ರಣ ಕ್ರಮ.
  • ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಲವರ್ಧನೆ.
Donate Janashakthi Media

Leave a Reply

Your email address will not be published. Required fields are marked *