ಕೊರೊನಾ ಸೋಂಕು: ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಎರಡು ಪ್ರತ್ಯೇಕ ಆಸ್ಪತ್ರೆ ಮೀಸಲು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಮಹಿಳೆಯರಿಗಾಗಿ ನಗರದಲ್ಲಿ ಎರಡು ಆಸ್ಪತ್ರೆಗಳನ್ನು ಕಾಯ್ದಿರಿಸಲಾಗಿದೆ.

ಈ ಬಗ್ತಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸೋಂಕಿತ ಮಕ್ಕಳು ಮತ್ತು ಗರ್ಭಿಣಿಯರ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಹಾಗೂ ಗೌಸಿಯಾ ಹೆರಿಗೆ ಆಸ್ಪತ್ರೆ(ಶಿವಾಜಿನಗರ)ಯನ್ನು ಕಾಯ್ದಿರಿಸಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಮಕ್ಕಳು ಮತ್ತು ಗರ್ಭಿಣಿಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಕೇವಲ ಐದೇ ದಿನದಲ್ಲಿ 5,263 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಈಗಾಗಲೇ 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡಲಾಗಿದೆ. ಆದರೆ, ಮನೆಯಲ್ಲಿದ್ದರೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. 3ನೇ ಅಲೆಯಲ್ಲಿ ಮಕ್ಕಳಿಗೆ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಜನವರಿ 1ರಂದು ನಗರದಲ್ಲಿ ಕೇವಲ 99 ಮಕ್ಕಳಿಗೆ ಸೋಂಕು ತಗುಲಿತ್ತು ಆದರೆ ಈಗ 5,263 ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರೆಡ್​ ಜೋನ್ ನಿರ್ಮಾಣವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲಿ 2ನೇ ಸ್ಥಾನದಲ್ಲಿದೆ.

ವೇಗವಾಗಿ ಹೆಚ್ಚಾಗುತ್ತಿರುವ ಕೊರೊನಾ ತಡೆಗೆ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ಹೇರಿದೆ. ವಾರಾಂತ್ಯದ ಕರ್ಫ್ಯೂ ಹೇರುವುದರೊಂದಿಗೆ ಕೊರೊನಾ ತಡೆಗೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ.

Donate Janashakthi Media

Leave a Reply

Your email address will not be published. Required fields are marked *