ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಕೆ.ಆರ್.ಪುರಂನ ಬಿಜೆಪಿಯ ಶಾಸಕ ಬೈರತಿ ಬಸವರಾಜ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಗಿದ್ದು, ರಾಜ್ಯ ಸರ್ಕಾರವು ಈ ಆರೋಪಿಗೆ ಬಂಧನದಿಂದ ನೀಡಿರುವ ರಕ್ಷಣೆಯನ್ನು ವಿಸ್ತರಿಸಬಾರದು ಎಂದು ಹೈಕೋರ್ಟ್ಗೆ ಮನವಿ ಮಾಡಿತು.
ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜನವರಿ 6ರಂದು ನಡೆಯಿತು. ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ರಾಜ್ಯ ಸರ್ಕಾರದ ಪರ ವಾದಿಸಿದರು.
ಸರ್ಕಾರದ ಪರ ಹಾಜರಾದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಕಳೆದ ವಿಚಾರಣೆಯಲ್ಲಿ ಅರ್ಜಿಯ ಪ್ರತಿಯನ್ನು ಎಸ್ಪಿಪಿ ಕಚೇರಿಗೆ ನೀಡಲಾಗಿದೆ ಎಂಬ ತಪ್ಪು ಮಾಹಿತಿಯನ್ನು ರಜಾಕಾಲೀನ ಪೀಠಕ್ಕೆ ನೀಡಿ ಪೂರಕ ಆದೇಶ ಪಡೆಯಲಾಗಿದೆ ಎಂದು ಆಕ್ಷೇಪಿಸಿದರು. ಅರ್ಜಿದಾರರ ವಿರುದ್ಧ ಸಮರ್ಪಕ ತನಿಖೆ ನಡೆಯಬೇಕಾಗಿದ್ದು ಕಸ್ಟಡಿ ವಿಚಾರಣೆ ಅನಿವಾರ್ಯ ಎಂದು ಪೀಠಕ್ಕೆ ಅವರು ಮನವಿ ಮಾಡಿಕೊಂಡರು.
ಇದನ್ನೂ ಓದಿ: “ಸ್ವಾರ್ಥಿ” ಮತ್ತು “ಪರಾವಲಂಬಿ” ಪಕ್ಷಿ! ಕೋಗಿಲೆ
ಶಾಸಕರ ಪರ ಹಿರಿಯ ವಕೀಲ ಸಂದೇಶ್ ಚೌಟ, ಅರ್ಜಿಯ ಪ್ರತಿಯನ್ನು ಸರ್ಕಾರಿ ವಕೀಲರಿಗೆ ನೀಡಲಾಗಿತ್ತು. ಅವರು ಮೆಮೊ ಸಲ್ಲಿಸಿ ಎಸ್ಪಿಪಿ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದರು; ಹೀಗಾಗಿ ನಮ್ಮಿಂದ ಲೋಪವಾಗಿಲ್ಲ ಎಂದು ಪ್ರತಿವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿಯನ್ನು ಮೆರಿಟ್ ಆಧಾರದಲ್ಲಿ ಪರಿಗಣಿಸುವುದಾಗಿ ತಿಳಿಸಿ ಮುಂದಿನ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.
18 ಆರೋಪಿಗಳ ಜಾಮೀನು ಅರ್ಜಿ ವಜಾ!
ಬಿಕ್ಲು ಶಿವ ಭೀಕರ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳಿಗೆ ನ್ಯಾಯಾಲಯ ಕಳೆದ ವರ್ಷ ಡಿಸೆಂಬರ್ 26ರಂದು ಶಾಕ್ ನೀಡಿತ್ತು.
ಬಿಕ್ಲು ಶಿವ ಕೊಲೆ ಪ್ರಕರಣದ ಒಟ್ಟು 20 ಆರೋಪಿಗಳ ಪೈಕಿ A-1 ಆರೋಪಿ ಜಗದೀಶ್ ಸೇರಿ 18 ಆರೋಪಿಗಳ ಬಂಧನ ಈಗಾಗಲೇ ಆಗಿದ್ದು, ಹದಿನೆಂಟು ಆರೋಪಿತರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿತ್ತು.
ಬಂಧಿತ 18 ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ 42ನೆ ಎಸಿಎಂಎಂ ಕೋರ್ಟ್ ಈ ಆದೇಶವನ್ನು ನೀಡಿತ್ತು. ಚಾರ್ಜ್ಶೀಟ್ ಪ್ರಕ್ರಿಯೆ ತಡವಾದ ಹಿನ್ನೆಲೆಯಲ್ಲಿ ಆರೋಪಿಗಳು ಡೀಫಾಲ್ಟ್ ಜಾಮೀನು ಕೋರಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ನೋಡಿ: ವೆನೆಜುವೆಲಾ | ಅಮೆರಿಕ ಪುಂಡಾಟವನ್ನು ಖಂಡಿಸಿ ಭಾರತದಾದ್ಯಂತ ಪ್ರತಿಭಟನೆ Janashakthi Media
