ಅಲ್ಪಸಂಖ್ಯಾತ ಇಲಾಖೆಯ ಫೇಸ್‌ಬುಕ್ ಪೇಜ್‌ನಲ್ಲಿ ವಿವಾದಾತ್ಮಕ ಉದ್ಯೋಗ ಮಾಹಿತಿ
ಮಂಗಳೂರು: “ಸಂಘಪರಿವಾರದ ಕಾರ್ಯಕರ್ತರಾಗಿದ್ದರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು” ಎಂಬ ಮಾಹಿತಿಯನ್ನು “ಜಿಲ್ಲಾ ಮಾಹಿತಿ ಕೇಂದ್ರ, ದ.ಕ” ಎಂಬ ಸರ್ಕಾರಿ ಫೇಸ್‌ಬುಕ್ ಶುಕ್ರವಾರ ಹಂಚಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಈ ಪೇಜ್ ಅನ್ನು ಸ್ವತಃ ತಾನೆ ನಿರ್ವಹಿಸುತ್ತಿರುವುದಾಗಿ “ಜನಶಕ್ತಿ ಮೀಡಿಯಾ”ಗೆ ಹೇಳಿದರು.
2022ರ ನವೆಂಬರ್‌ನಲ್ಲಿ ಪೇಜ್ ಅನ್ನು ತೆರೆಯಲಾಗಿದ್ದು, “ವಿದ್ಯಾರ್ಥಿ ವೇತನ ಮತ್ತು ಸರ್ಕಾರಿ-ಖಾಸಗಿ ಉದ್ಯೋಗ ಮಾಹಿತಿ ನೀಡಲಾಗುವುದು” ಎಂದು ಬಯೋದಲ್ಲಿ ಬರೆಯಲಾಗಿದೆ. ಪೇಜ್‌ನ ಡಿಪಿಯಲ್ಲಿ ಕರ್ನಾಟಕ ಸರ್ಕಾರದ ಅಧೀಕೃತ ಲಾಂಛನವಿದ್ದು, ತನ್ನನ್ನು ತಾನು “Government Official” ಎಂದು ಅದು ಹೇಳಿಕೊಂಡಿದೆ.
ಶುಕ್ರವಾರ ಸಂಜೆ 5 ಗಂಟೆಗೆ ಎರಡು ಉದ್ಯೋಗ ಮಾಹಿತಿ ಹಂಚಿಕೊಂಡಿರುವ ಪೇಜ್, “ಉದ್ಯೋಗಕ್ಕೆ ಅರ್ಹತೆಯಾಗಿ ಸಂಘಪರಿವಾರದ ಕಾರ್ಯಕರ್ತನಾಗಿರುವುದು” ಎಂದು ಹೇಳಿಕೊಂಡಿದೆ.
ಮೊದಲ ಪೋಸ್ಟ್‌ನಲ್ಲಿ, “ಶಾಲಾ ವಾಹನಕ್ಕೆ (ವಾಹನ ಸಾರಥಿ) ಡ್ರೈವರ್ ಬೇಕಾಗಿದ್ದಾರೆ. ಲಘು ವಾಹನ ಮತ್ತು ಭಾರೀ ವಾಹನ ( heavy vehicle) ಲೈಸನ್ಸ್ ಹೊಂದಿದವರು ಅರ್ಜಿ ಸಲ್ಲಿಸಬಹುದು. ಸಂಘ ಪರಿವಾರದ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದು.” ಎಂದು ಬರೆದಿದೆ.
ಎರಡನೆ ಪೋಸ್ಟ್‌ನಲ್ಲಿ, “ಹೈಸ್ಕೂಲ್ ಮತ್ತು ಕಾಲೇಜು ಹುಡುಗರ ಹಾಸ್ಟೆಲ್ ಗೆ ವಾರ್ಡನ್ ಬೇಕಾಗಿದ್ದಾರೆ. ಡಿಗ್ರಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಘ ಪರಿವಾರದ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದು.” ಎಂದು ಬರೆದಿದೆ.
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಜಿನೇಂದ್ರ ಕೋಟ್ಯಾನ್, “ಇಲಾಖೆಯಲ್ಲಿ ಜಿಲ್ಲಾ ಮಾಹಿತಿ ಕೇಂದ್ರವಿದೆ. ಇಲಾಖೆಯ ವತಿಯಿಂದ ಈ ಪೇಜ್ ಅನ್ನು ಮಾಡಲಾಗಿದೆ. ನಾನೆ ಅದರ ನಿರ್ವಹಣೆ ಖಾಸಗಿಯಾಗಿ ಮಾಡುತ್ತಿದ್ದೇನೆ. ಉದ್ಯೋಗ ಮಾಹಿತಿಯನ್ನು ಚೆನ್ನಾಗಿಯೆ ನೀಡುತ್ತಿದ್ದೇನೆ. ಆದರೆ ಈ ಎರಡು ಪೋಸ್ಟ್ ಕಾಪಿ ಪೇಸ್ಟ್ ಮಾಡುವಾಗ ಸರಿಯಾಗಿ ಓದಿರಲಿಲ್ಲ. ಈಗ ಅದನ್ನು ಡಿಲೀಟ್ ಮಾಡಿದ್ದೇನೆ” ಎಂದು ಹೇಳಿದರು.
“ವಾಟ್ಸಪ್ ಅಲ್ಲಿ ಬಂದಿರುವ ಮಾಹಿತಿಯನ್ನು ನಾನು ಹಾಗೆ ಕಾಪಿ-ಪೇಸ್ಟ್ ಮಾಡಿದ್ದೆ. ‘ಸಂಘ ಪರಿವಾರದ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದು‘ ಎಂಬ ವಾಕ್ಯವನ್ನು ಓದಿರಲಿಲ್ಲ. ಹಾಗಾಗಿ ತಪ್ಪಾಗಿದೆ, ಇದು ಉದ್ದೇಶಪೂರ್ವಕ ಅಲ್ಲ” ಎಂದು ಜಿನೇಂದ್ರ ಕೋಟ್ಯಾನ್ ಹೇಳಿದರು.
ಈ ಬಗ್ಗೆ ವಿದ್ಯಾರ್ಥಿ ಸಂಘಟನೆ SFI ರಾಜ್ಯ ಕಾರ್ಯದರ್ಶಿ ಭೀಮನಗೌಡ ಆಕ್ರೋಶ ವ್ಯಕ್ತಪಡಿಸಿದ್ದು,”ದಕ್ಷಿಣ ಕನ್ನಡ ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ಖಾಸಗಿ ಉದ್ಯೋಗದ ಮಾಹಿತಿಯನ್ನು ಹಾಕಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದಂತೇ. ಏನಿದು ಸರ್?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪ್ರಶ್ನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ಖಾಸಗಿ ಉದ್ಯೋಗದ ಮಾಹಿತಿಯನ್ನು ಹಾಕಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದಂತೇ @siddaramaiah @DKShivakumar @DrParameshwara ಏನಿದು ಸರ್ ? @DCDK9 pic.twitter.com/TPajT32U31
— Bheemanagowda Sunkeshwarahal ಭೀಮನಗೌಡ ಸುಂಕೇಶ್ವರಹಾಳ (@bgs_sfi) June 23, 2023
“ಜನರು ಕೋಮುವಾದಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೂ ಸರ್ಕಾರಿ ಅಧಿಕಾರಿಗಳು ಮಾತ್ರ ಇನ್ನೂ ಭಾಜಪ ಭಜನೆಯಲ್ಲಿಯೇ ಇದ್ದಾರೆ. ಮಾನ್ಯ @siddaramaiah ನವರೇ ಮೊದಲು ಅಧಿಕಾರಿಗಳಿಗೆ ಬೆಂಡೆತ್ತುವ ಕೆಲಸ ಮಾಡಿ. ಭಾಜಪ ಪಕ್ಷದ ಬಾಲಂಗೋಚಿಗಳನ್ನೇ ಅಧಿಕಾರದಲ್ಲಿ ಮುಂದುವರೆಸಿದರೇ ಜನರು ಪರ್ಯಾಯವಾಗಿ ಆಲೋಚಿಸಿದದ್ದಾರೂ ಏತಕ್ಕೆ?” ಎಂದು ಭೀಮನಗೌಡ ಕೇಳಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಅವರೊಂದಿಗೆ ಸ್ಪಷ್ಟನೆ ಕೇಳಿದ ನಂತರ ಪೇಜ್‌ನ ಹೆಸರನ್ನು ಬದಲಾಯಿಸಲಾಗಿದ್ದು, ಹೆಸರನ್ನು ಕೂಡಾ “ಮಾಹಿತಿ ಕೇಂದ್ರ” ಎಂದು ಬದಲಾಯಿಸಲಾಗಿದೆ.