ಕೊರಗ ಸಮುದಾಯದ ಯುವಜನರಿಗೆ ಸರಕಾರಿ ಉದ್ಯೋಗ: ಸರಕಾರಕ್ಕೆ ಮನವಿ

ಬೆಂಗಳೂರು: ನೇರ ನೇಮಕಾತಿ ಅಡಿಯಲ್ಲಿ ಸರಕಾರಿ ಉದ್ಯೋಗ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಯನ್ನು ಕೊರಗ ಸಮುದಾಯದ ಶಿಕ್ಷಣ ಪಡೆದ ಯುವಜನರಿಗೆ ಮಾಡಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸರಕಾರಕ್ಕೆ ಮನವಿ ಮಾಡಿದೆ.

ನಗರದಲ್ಲಿರುವ ಸಿಎಂ ನಿವಾಸ ಕಾವೇರಿಯಲ್ಲಿ ನೆನ್ನೆ ಸೋಮವಾರದಂದು  ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೂ, ಅವರು ಮನವಿ ಸಲ್ಲಿಸಿ, ಪದವಿ ಪಡೆದ ಯುವಜನರನ್ನು ಕೂಡ ಕೇವಲ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಗಳಲ್ಲಿ ಸ್ವಚ್ಛತೆ ಕೆಲಸಗಳಿಗೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ.

ಇದರಿಂದ ಸಮುದಾಯದ ಯುವಜನರು ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗಿ ಜನಸಂಖ್ಯೆ ತೀವ್ರ ಗತಿಯಲ್ಲಿ ಇಳಿಮುಖವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ನಿಯೋಗ ತಿಳಿಸಿದೆ.

ಇದನ್ನೂ ಓದಿ: ಮುಂದಿನ ತಿಂಗಳು ಸಂಸತ್​ ಸದಸ್ಯರ ವೇತನ ಏರಿಕೆ: ಗೆಜೆಟ್​ ಅಧಿಸೂಚನೆ

ಅಸ್ಪೃಶ್ಯತೆಯ ಕಾರಣದಿಂದಾಗಿ ಯಾವುದೇ ಸ್ವ-ಉದ್ಯೋಗಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರದ ಬೇರೆ ಬೇರೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೂ ಕೂಡ, ಇತರ ಬಲಾಡ್ಯ ಬುಡಕಟ್ಟು ಸಮುದಾಯಗಳ ಕಾರಣಗಳಿಂದಾಗಿ ಕೊರಗ ಸಮುದಾಯದ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಆದ್ದರಿಂದ ಸರಕಾರ ಸಮುದಾಯಕ್ಕೆ ವಿಶೇಷವಾಗಿ ನೇರ ನೇಮಕಾತಿ ಮೂಲಕ ಸರಕಾರಿ ಉದ್ಯೋಗಗಳನ್ನು ನೀಡಬೇಕು ಎಂದು ಒತ್ತಾಯಿಸಿದೆ.

ಕೊರಗ ಸಮುದಾಯದ ವಿಶೇಷ ಅಧ್ಯಯನ ಮಾಡಿರುವ ಡಾ.ಮಹಮ್ಮದ್ ಫೀರ್ ವರದಿಯಲ್ಲಿ ಕೊರಗರ ಇಂದಿನ ಪರಿಸ್ಥಿತಿಗೆ ಅವರು ಭೂಮಿಯನ್ನು ಹೊಂದದೇ ಇರುವುದು, ಕೃಷಿಕರಾಗದೇ ಇರುವುದು ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣವಾಗಿದೆ. ಅದ್ದರಿಂದ ಕೊರಗ ಸಮುದಾಯದ ಪ್ರತಿಯೊಂದು ಕುಟುಂಬಕ್ಕೆ 2.5 ಎಕರೆ ಕೃಷಿ ಭೂಮಿ ನೀಡಿ ಮಾದರಿ ಕೃಷಿಕರಾಗುವಂತೆ ಪುನರ್ವಸತಿ ವ್ಯವಸ್ಥೆಗಳನ್ನು ಮಾಡುವುದು ಅತ್ಯಗತ್ಯ ಎಂದು ಶಿಫಾರಸ್ಸು ಮಾಡಿದೆ ಎಂದು ಮನವಿಯಲ್ಲಿ ತಿಳಿಸಿದೆ.

ನಮ್ಮ ಸಂಘಟನೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಸಮುದಾಯದ ಹಾಡಿಗಳಲ್ಲಿ ಕ್ಷೇತ್ರಕಾರ್ಯ ನಡೆಸಿ ಸಂಘಟನೆಯ ವಿಶೇಷ ಸಭೆಗಳು, ಗುಂಪು ಸಭೆಗಳನ್ನು ನಡೆಸಿ ಸುಮಾರು 800 ಭೂ ರಹಿತರನ್ನು ಗುರುತಿಸಿ ಫಲಾನುಭಾವಿಗಳ ದರ್ಖಾಸು ಅರ್ಜಿಯನ್ನು ಭರ್ತಿ ಮಾಡಿ ಅಯಾ ತಾಲೂಕಿನ ತಹಶೀಲ್ದಾರರಿಗೆ ಸಲ್ಲಿಸಿರುತ್ತೇವೆ.

ಹಾಗೆಯೇ ದ.ಕ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತಗಳು ನಮ್ಮ ಅರ್ಜಿಯನ್ನು ಪರಿಗಣಿಸದೆ 1 ಎಕರೆ ಭೂಮಿಯನ್ನೂ ವಿತರಿಸದೆ ಭೂಮಿಯೇ ಇಲ್ಲ ಎಂದು ಉತ್ತರ ನೀಡಿ ನಮ್ಮನ್ನು ನಿರಾಸೆ ಹಾಗೂ ಆತಂಕಕ್ಕೆ ಒಳಪಡಿಸಿದೆ ಎಂದು ನಿಯೋಗ ಆರೋಪಿಸಿದೆ.

ಇದನ್ನೂ ನೋಡಿ: ಸದನದಲ್ಲಿ ‘ಹನಿ ಟ್ರ್ಯಾಪ್’ ಸದ್ದು! – ಮೀನಾಕ್ಷಿ ಬಾಳಿ, ಕೆ.ಎಸ್. ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *