ಬೆಂಗಳೂರು : ನವಕರ್ನಾಟಕದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಮೊದಲ ವ್ಯಕ್ತಿಗೆ ಸಿಗುವ ಸ್ಥಾನಮಾನ, ಗೌರವ, ಅವಕಾಶ ದೊರಕುವುದು ಮುಖ್ಯ ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15 ರಿಂದ ಶೇ.17 ಕ್ಕೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದ ಹಕ್ಕು 75 ವರ್ಷವಾದ ನಂತರ ಎಷ್ಟರಮಟ್ಟಿಗೆ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ಸಾಧ್ಯವಾಗಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಪ್ರತಿ ಹತ್ತು ವರ್ಷಕ್ಕೊಮ್ಮೆ ಇದರ ಪುನರ್ವಿಮರ್ಶೆಯಾಗಬೇಕು ಎಂದರು.
ಸರ್ಕಾರದ ಕಾರ್ಯಕ್ರಮಗಳ ಕುರಿತು ಸಾಮಾಜಿಕ ಲೆಕ್ಕಪರಿಶೋಧನೆಯಾಗಬೇಕು :
ಮೀಸಲಾತಿ ಮತ್ತು ಈ ಎಲ್ಲಾ ಸಮುದಾಯಗಳಿಗೆ ನೀಡಿರುವ ಸರ್ಕಾರದ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಮುಟ್ಟಿದೆ ಹಾಗೂ ಎಷ್ಟು ಜನರ ಜೀವನ ಗುಣಮಟ್ಟ ಉತ್ತಮಗೊಂಡಿದೆ, ಅವಕಾಶಗಳು ಯಾವ ಜನಾಂಗಕ್ಕೆ ದೊರೆತಿದೆ ಹಾಗೂ ಯಾರಿಗೆ ದೊರೆತಿಲ್ಲ ಎಂಬ ಸಾಮಾಜಿಕ ಲೆಕ್ಕಪರಿಶೋಧನೆಯಾಗಬೇಕು ಎಂದರು.
ನಮ್ಮ ಹಕ್ಕು ನಮಗೆ ತಿಳಿದಿಲ್ಲವೆಂದರೆ ಅದನ್ನು ಪಡೆಯುವುದು ದೂರದ ಮಾತು. ಕಾರ್ಯಕ್ರಮ ಲೋಪದೋಷಗಳಿದ್ದು ಕಟ್ಟಕಡೆಯ ವ್ಯಕ್ತಿಗೆ ಮುಟ್ಟದಂತೆ ಮಾಡಲಾಗುತ್ತದೆ. ಪ್ರಾಮಾಣಿಕವಾಗಿ ಆ ಬಗ್ಗೆ ಚಿಂತಿಸುವ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಸೌಲಭ್ಯಗಳನ್ನು ಮುಟ್ಟಿಸಲಾಗಿಲ್ಲ. ಇದಕ್ಕೆ ಯಾರು ಹೊಣೆಗಾರರು ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ ಎಂದರು.
17 ಸಾವಿರ ಜನರಿಗೆ ಗಂಗಾಕಲ್ಯಾಣ ಮಂಜೂರು :
ನಮ್ಮ ಸರ್ಕಾರ ವಿಭಿನ್ನವಾಗಿ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ. 17 ಸಾವಿರ ಜನರಿಗೆ ಗಂಗಾಕಲ್ಯಾಣ ಮಂಜೂರಾಗಿದೆ. 595 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡು ಅನುದಾನ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 8 ಸಾವಿರ ಫಲಾನುಭವಿಗಳಿಗೆ 75 ಸಾವಿರ ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅನುಮೋದನೆ ಪಡೆದುಕೊಂಡ ಫಲಾನುಭವಿಯ ಹೊಲದಲ್ಲಿಯೇ ಕೊಳವೆಬಾವಿ ಕೊರೆಸಬೇಕು. ಸ್ಥಳ ಪರಿಶೀಲನೆ ಮಾಡಬೇಕು ಆಗ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ವ್ಯಾಪಾರದ ಉದ್ದೇಶದಿಂದ ವಾಹನ ಸೌಲಭ್ಯ ಹೆಚ್ಚು ಉಪಯುಕ್ತ :
ಎಸ್ಸಿ-ಎಸ್ಟಿ ಸಮುದಾಯದವರಿಗೆ ವ್ಯಾಪಾರ ಮಾಡಲು ವಾಹನ ನೀಡಬೇಕು ಎಂದು ಬಜೆಟ್‍ನಲ್ಲಿ ಇಲ್ಲದಿದ್ದರೂ 250 ಕೋಟಿಗಿಂತ ಹೆಚ್ವು ಹಣವನ್ನು ಅಧಿಕವಾಗಿ ಒದಗಿಸಿ ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ಒದಗಿಸಲಾಗುತ್ತಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡವರು ಬಹಳ ಜನ ಇದ್ದಾರೆ. ಯುವಕರ ಜೀವನದಲ್ಲಿ ಇದು ಬಹಳ ದೊಡ್ಡ ಬದಲಾವಣೆ ಆಗುತ್ತದೆ ಎಂದು ತಿಳಿಸಿದರು.
ವಿದ್ಯಾಸಿರಿ ಯೋಜನೆಯಡಿ ಸುಮಾರು 59 ಕೋಟಿಗಿಂತ ಅನುದಾನ :
ಈ ವರ್ಷ ನೂರು ಎಸ್ಸಿ-ಎಸ್ಟಿ ಹಾಸ್ಟೆಲ್ ಹಾಗೂ 50 ಕನಕದಾಸ ಹಾಸ್ಟೆಲ್‍ಗಳಿಗೆ ಮಂಜೂರಾತಿ ನೀಡಲಾಗಿದೆ. ವಿದ್ಯಾಸಿರಿ ಯೋಜನೆಯಡಿ 33 ಸಾವಿರ ವಿದ್ಯಾರ್ಥಿಗಳಿಗೆ ಸುಮಾರು 59 ಕೋಟಿಗಿಂತ ಹೆಚ್ಚಿನ ಅನುದಾನ ನೀಡಿ ಹಾಸ್ಟೆಲ್‍ಗಳಲ್ಲಿ ಪ್ರವೇಶ ನೀಡಲಾಗಿದೆ ಎಂದು ವಿವರಿಸಿದರು.
ಮೆಗಾ ಹಾಸ್ಟೆಲ್:
ಬೆಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ ಧಾರವಾಡ, ಮಂಗಳೂರಿಗೆ ಸುತ್ತಲಿನ ಗ್ರಾಮಗಳ ಮಕ್ಕಳು ಬರುತ್ತಾರೆ ಅವರಿಗೆ ಪ್ರವೇಶ ಸಿಕ್ಕರೂ ಹಾಸ್ಟೆಲ್‍ಗಳಿರುವುದಿಲ್ಲ. ಅದಕ್ಕಾಗಿ 5 ಮೆಗಾ ಹಾಸ್ಟೆಲ್‍ಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ಕಲಬುರಗಿಯಲ್ಲಿ ತೆರೆಯಲಾಗುತ್ತಿದೆ.
ಪ್ರತಿ ಹಾಸ್ಟೆಲ್‍ನಲ್ಲಿ ಒಂದು ಸಾವಿರ ಮಕ್ಕಳ ಸಾಮರ್ಥ್ಯ ಹೊಂದಿದೆ. ಪ್ರತಿ ವರ್ಷ ಮಂಜೂರಾಗಿ ಮುಂದಿನ 5 ವರ್ಷ 5 ಸಾವಿರ ಮಕ್ಕಳು ಸೇರಿ 25 ಸಾವಿರ ಮಕ್ಕಳಿಗೆ ಅನುಕೂಲವಾಗಬೇಕು. 640 ಕೋಟಿ ರೂ. ವೆಚ್ಚದಲ್ಲಿ ನೂರು ಹಾಸ್ಟೆಲ್‍ಗಳು ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.