ನವದೆಹಲಿ: ಕೇಂದ್ರ ಸರ್ಕಾರವು 10 ನಿಮಿಷದ ಡೆಲಿವರಿ ಸೇವೆಯನ್ನು ನಿಲ್ಲಿಸಲು ಇ-ಕಾಮರ್ಸ್ ವೇದಿಕೆಗಳಾದ ಬ್ಲಿಂಕಿಟ್, ಝೆಪ್ಟೋ, ಸ್ವಿಗ್ಗಿಗೆ ಮುಂತಾದವುಗಳಿಗೆ ಸೂಚನೆ ನೀಡಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯ ಇ-ಕಾಮರ್ಸ್ ವೇದಿಕೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದೂ, ಡೆಲಿವರಿ ಮಾಡುವವರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ ನಂತರ, ಬ್ಲಿಂಕಿಟ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ತಮ್ಮ 10-ನಿಮಿಷದ ಡೆಲಿವರಿ ಭರವಸೆಯ ಜಾಹೀರಾತುಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ ಡೆಲಿವರಿ ಸಮಯದ ಮಿತಿಗೆ ಸಂಬಂಧಿಸಿದ ಕಳವಳಗಳ ಕುರಿತು ಚರ್ಚಿಸಲು ಸಚಿವರು ಝೊಮ್ಯಾಟೊ, ಸ್ವಿಗ್ಗಿ, ಬ್ಲಿಂಕಿಟ್ ಮತ್ತು ಝೆಪ್ಟೋ ಸೇರಿದಂತೆ ಹಲವು ಸಂಸ್ಥೆಗಳ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು | ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆಗಸ್ಟ್ ವೇಳೆಗೆ ಬೆಂಗಳೂರಿನಲ್ಲಿ ಆರಂಭ
ಈಗಾಗಲೇ ಬ್ಲಿಂಕಿಟ್ ತನ್ನ ಟ್ಯಾಗ್‌ಲೈನ್ ಅನ್ನು 10 ನಿಮಿಷಗಳಲ್ಲಿ 10,000ಕ್ಕೂ ಹೆಚ್ಚು ಉತ್ಪನ್ನಗಳ ವಿತರಣೆ ಇಂದ ‘ನಿಮ್ಮ ಮನೆ ಬಾಗಿಲಿಗೆ 30,000ಕ್ಕೂ ಹೆಚ್ಚು ಉತ್ಪನ್ನಗಳ ವಿತರಣೆ’ ಎಂದು ಬದಲಾಯಿಸಿದೆ.
ಸುರಕ್ಷತೆಯ ಆತಂಕ
10-ನಿಮಿಷದ ಡೆಲಿವರಿ ಭರವಸೆಯು ಡೆಲಿವರಿ ಪಾಲುದಾರರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂಬ ಬಗ್ಗೆ ಸಾರ್ವಜನಿಕವಾಗಿ ತೀವ್ರ ಚರ್ಚೆಗಳು ನಡೆಯುತ್ತಿದ್ದವು.
ಅಲ್ಲದೇ ಡಿಸೆಂಬರ್ 25 ರಂದು ಗಿಗ್ ಕಾರ್ಮಿಕರ ಒಕ್ಕೂಟಗಳು ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳಿಗಾಗಿ ಪ್ರತಿಭಟನೆ ನಡೆಸಿದ್ದವು. ಸಮಯಾಧಾರಿತ ಡೆಲಿವರಿ ಗುರಿಗಳನ್ನು ಕೈಬಿಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.
ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೊ ಡೆಲಿವರಿಗಳಿಗಾಗಿ ನೀಡುವ ಪ್ರೋತ್ಸಾಹಧನವನ್ನು ಹೆಚ್ಚಿಸಿದ್ದವು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಚಳವಳಿ ಆರಂಭಿಸುವುದಾಗಿ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.
ಸಾಮಾಜಿಕ ಭದ್ರತಾ ಸಂಹಿತೆ 2020ರ ಪ್ರಕಾರ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರು ಸೇರಿದಂತೆ ಎಲ್ಲಾ ಕಾರ್ಮಿಕರು ಸಾಮಾಜಿಕ ಭದ್ರತಾ ಸೌಲಭ್ಯಗಳಿಗೆ ಅರ್ಹರಾಗಿದ್ದಾರೆ. ಈಗಾಗಲೇ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನಾಲ್ಕು ಕಾರ್ಮಿಕ ಸಂಹಿತೆಗಳ ಕರಡು ನಿಯಮಗಳನ್ನು ಪ್ರಕಟಿಸಿದೆ.
ಇವು ಕನಿಷ್ಠ ವೇತನ, ಆರೋಗ್ಯ, ಔದ್ಯೋಗಿಕ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯಂತಹ ಸೌಲಭ್ಯಗಳ ವ್ಯಾಪ್ತಿಗೆ ಗಿಗ್ ಕೆಲಸಗಾರರನ್ನೂ ಒಳಪಡಿಸುತ್ತವೆ. ಏಪ್ರಿಲ್ 1 ರಿಂದ ಈ ನಾಲ್ಕೂ ಕಾರ್ಮಿಕ ಸಂಹಿತೆಗಳ ಸಂಪೂರ್ಣ ಪ್ಯಾಕೇಜ್ ಅನ್ನು ಜಾರಿಗೆ ತರಲು ಸರ್ಕಾರ ಗುರಿ ಹೊಂದಿದೆ.
ರಾಘವ್ ಚಡ್ಡಾ ಪ್ರತಿಕ್ರಿಯೆ
ಎಎಪಿ ಸಂಸದ ರಾಘವ್ ಚಡ್ಡಾ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಇದು ಅತ್ಯಗತ್ಯವಾದ ಕ್ರಮವಾಗಿತ್ತು. ರೈಡರ್‌ನ ಟಿ-ಶರ್ಟ್ ಅಥವಾ ಬ್ಯಾಗ್ ಮೇಲೆ 10 ನಿಮಿಷ ಎಂದು ಮುದ್ರಿಸಿದಾಗ ಮತ್ತು ಗ್ರಾಹಕರ ಸ್ಕ್ರೀನ್ ಮೇಲೆ ಟೈಮರ್ ಓಡುತ್ತಿರುವಾಗ, ಅದು ಡೆಲಿವರಿ ಮಾಡುವವರ ಮೇಲೆ ಅಪಾಯಕಾರಿ ಒತ್ತಡವನ್ನು ಹೇರುತ್ತದೆ. ರಸ್ತೆಯಲ್ಲಿ ಸಂಚರಿಸುವ ಇತರರ ಸುರಕ್ಷತೆಗೆ ಮಾರಕವಾಗಿತ್ತು” ಎಂದು ಹೇಳಿದ್ದಾರೆ.
ಅವರು ತಮ್ಮ ಪೋಸ್ಟ್‌ನಲ್ಲಿ, “ಸತ್ಯಮೇವ ಜಯತೇ. ನಾವೆಲ್ಲರೂ ಒಟ್ಟಾಗಿ ಗೆದ್ದಿದ್ದೇವೆ. ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ 10-ನಿಮಿಷದ ಡೆಲಿವರಿ ಬ್ರ್ಯಾಂಡಿಂಗ್ ಅನ್ನು ತೆಗೆದುಹಾಕುವಂತೆ ಜಾರಿಗೆ ತಂದ ನಿರ್ಣಯ ಸಕಾಲಿಕ. ಇದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಇದು ಅತ್ಯಗತ್ಯವಾದ ಕ್ರಮವಾಗಿತ್ತು” ಎಂದು ತಿಳಿಸಿದ್ದಾರೆ.
“ಕಳೆದ ಕೆಲವು ತಿಂಗಳುಗಳಿಂದ ನಾನು ನೂರಾರು ಡೆಲಿವರಿ ಪಾಲುದಾರರೊಂದಿಗೆ ಮಾತನಾಡಿದ್ದೇನೆ. ಅನೇಕರು ಅತಿಯಾದ ಕೆಲಸದ ಒತ್ತಡದಲ್ಲಿದ್ದಾರೆ, ಅವರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಮತ್ತು ಅವರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ನಮ್ಮೊಂದಿಗೆ ನಿಂತ ಪ್ರತಿಯೊಬ್ಬ ನಾಗರಿಕರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನೀವು ಸುರಕ್ಷತೆ ಮತ್ತು ಘನತೆಯ ಪರವಾಗಿ ದೃಢವಾಗಿ ನಿಂತಿದ್ದೀರಿ ಮತ್ತು ಪ್ರತಿಯೊಬ್ಬ ಗಿಗ್ ಕೆಲಸಗಾರರಿಗೆ ನಾನು ಹೇಳುವುದೇನೆಂದರೆ ನೀವು ಒಂಟಿಯಲ್ಲ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ” ಎಂದು ಪೋಸ್ಟ್ ಹಾಕಿದ್ದಾರೆ.
ಇದನ್ನೂ ನೋಡಿ: ವೆನೆಜುವೆಲಾ | ಅಮೆರಿಕ ಪುಂಡಾಟವನ್ನು ಖಂಡಿಸಿ ಭಾರತದಾದ್ಯಂತ ಪ್ರತಿಭಟನೆ Janashakthi Media
