ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚಿಸಲು ಸರಕಾರ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪರಿಶಿಷ್ಟ ಜಾತಿಗಳ ಮೀಸಲು ವರ್ಗೀಕರಣ ಸೂತ್ರದ ಜತೆಗೆ ಆ ಸಮುದಾಯಗಳ ಚಲನಶೀಲತೆ ಹಾಗೂ ಲಭ್ಯವಾಗುವ ದತ್ತಾಂಶ ಪರಿಶೀಲಿಸಿ ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಆಗಸ್ಟ್‌ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಆದರೆ ವರ್ಗೀ ಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಎರಡೂ ಸದನದಲ್ಲಿ ವಿಪಕ್ಷಗಳು ಪಟ್ಟು ಹಿಡಿದು ಸಭಾತ್ಯಾಗ ನಡೆಸಿವೆ.

ಭೋಜನ ವಿರಾಮದ ಬಳಿಕ ಕಲಾಪ ಪ್ರಾರಂಭ ವಾಗುತ್ತಿದ್ದಂತೆ ಸಿದ್ದರಾಮಯ್ಯ ಸಂಪುಟದ ನಿರ್ಧಾರ ವನ್ನು ಹೇಳಿಕೆ ರೂಪದಲ್ಲಿ ವಾಚಿಸಿದರು. ಬಳಿಕ ವಿಪಕ್ಷ ನಾಯಕ ಆರ್‌.ಅಶೋಕ್‌ ಈ ಬಗ್ಗೆ ಮಾತನಾಡಲು ನಮಗೂ ಅವಕಾಶ ಬೇಕು ಎಂದರು. ಇದು ಸರಕಾರದ ಹೇಳಿಕೆಯಾದ್ದರಿಂದ ಚರ್ಚೆಗೆ ಅವಕಾಶವಿಲ್ಲ ಎಂದು ಸ್ಪೀಕರ್‌ ಅವಕಾಶ ನಿರಾಕರಿಸಿದರು. ಪರಿಶಿಷ್ಟ

ಇದನ್ನೂ ಓದಿ: ದಲಿತರ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ; ವಾಗ್ವಾದ-ಚರ್ಚೆ

ಸಿದ್ದರಾಮಯ್ಯ ಕೂಡ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿ ವಿಧಾನ ಪರಿಷತ್‌ಗೆ ತೆರಳಲು ಮುಂದಾದರು. ಆಗ ಆರ್‌.ಅಶೋಕ್‌, ಅರವಿಂದ ಬೆಲ್ಲದ್‌ ಹಾಗೂ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಸಿಎಂ ಹೆದರಿ ಓಡಿ ಹೋಗುತ್ತಿದ್ದಾರೆ’ ಎಂದು ಛೇಡಿಸಿದರು. ನನಗೆ ನಿಮ್ಮಲ್ಲಿ ಯಾರನ್ನೂ ಕಂಡರೂ ಭಯವಿಲ್ಲ’ ಎಂದು ತಿರುಗೇಟು ನೀಡಿ ಸಿದ್ದರಾಮಯ್ಯ ಪರಿಷತ್ತಿಗೆ ತೆರಳಿದರು.

ಇನ್ನಷ್ಟು ಕೆರಳಿದ ಬಿಜೆಪಿ ಶಾಸಕರು ಚರ್ಚೆಗೆ ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿದರು. ಹಿಂದೆ ನಮ್ಮ ಸರಕಾರ ಮಾಡಿದ್ದನ್ನೇ ತುಸು ಮಾರ್ಪಾಡಿನೊಂದಿಗೆ ಮಾಡಿದ್ದಾರೆ. ನಮಗೆ ಕೆಲವು ಪ್ರಶ್ನೆಗಳಿವೆ. ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಅಶೋಕ ಪಟ್ಟು ಹಿಡಿದರು. ಸ್ಪೀಕರ್‌ ಒಪ್ಪದೇ ಇದ್ದಾಗ ಕ್ರಿಯಾಲೋಪ ಎತ್ತಿದ ವಿ. ಸುನಿಲ್‌ ಕುಮಾರ್‌, ನಿಯಮ 345ರ ಪ್ರಕಾರ, ಸರಕಾರದ ಹೇಳಿಕೆಗೆ ಚರ್ಚೆಗೆ ಅವಕಾಶ ಇಲ್ಲವಾದರೂ, ರಾಜ್ಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಕೇಳುವುದಕ್ಕೆ ಸದಸ್ಯರಿಗೆ ಅವಕಾಶವಿದೆ. ಸಭಾಧ್ಯಕ್ಷರು ಇದಕ್ಕೆ ಅವಕಾಶ ಕೊಡಬಹುದು’ ಎಂಬ ಸದನ ನಿಯಮಾವಳಿಯನ್ನು ಸ್ಪೀಕರ್‌ ಗಮನಕ್ಕೆ ತಂದರು. ಇದಕ್ಕೂ ಬಗ್ಗದ ಸ್ಪೀಕರ್‌ ಕೊಡಬಹುದು ಎಂದಿದೆಯೇ ವಿನಾ ಕೊಡಲೇಬೇಕು ಎಂದಿಲ್ಲ’ ಎಂದು ಸಮರ್ಥಿಸಿಕೊಂಡರು.

ಆಗ ಸದಸ್ಯರು ಸ್ಪೀಕರ್‌ ಮೇಲೆ ಒತ್ತಡ ಹಾಕುವುದಕ್ಕೆ ಅವಕಾಶವಿಲ್ಲ ಎಂದು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ್‌ ಪ್ರತಿಪಾದಿಸಿದರೆ, ಸದಸ್ಯರು ಮಾಹಿತಿ ಕೇಳಬಾರದು ಎಂದಾದರೆ ಸರಕಾರ ಸದನದಲ್ಲಿ ಯಾಕೆ ಈ ವಿಚಾರವನ್ನು ಪ್ರಸ್ತಾವಿಸಬೇಕು? ಎಂದು ಸುನಿಲ್‌ ಆಕ್ಷೇಪಿಸಿದರು. ಏನನ್ನೋ ಮುಚ್ಚಿಡಬೇಕೆಂಬ ಉದ್ದೇಶ ಸರಕಾರಕ್ಕೆ ಇದೆ. ಸಿದ್ದರಾಮಯ್ಯನವರು ಇಷ್ಟು ವೇಗವಾಗಿ ಕಲಾಪದಿಂದ ತೆರಳಿದ್ದನ್ನು ಎಂದಾದರೂ ನೋಡಿದ್ದೀರಾ? ಎಂದು ಬಿ.ವೈ. ವಿಜಯೇಂದ್ರ ಕಾಲೆಳೆದರೆ, ಮುಖ್ಯಮಂತ್ರಿಗಳು ವಿಪಕ್ಷಗಳ ಸಭಾತ್ಯಾಗದ ಹಕ್ಕನ್ನು ತಾವೇ ಅಪಹರಿಸಿದ್ದಾರೆ. ನಮ್ಮ ಮಾತುಗಳನ್ನು ಕೇಳಿಸಿಕೊಳ್ಳದೆ ಖುದ್ದು ಸಭಾತ್ಯಾಗ ಮಾಡಿದ್ದಾರೆ’ ಎಂದು ಹಿರಿಯ ಸದಸ್ಯ ಎಸ್‌.ಸುರೇಶ್‌ ಕುಮಾರ್‌ ಟೀಕಿಸಿದರು.

ಈಗ ಸದನದಲ್ಲಿ ಸಿಎಂ ಇಲ್ಲ. ಸ್ಪಷ್ಟೀಕರಣ ಕೇಳಿದರೆ ಹೇಗೆ? ಎಂದು ಸ್ಪೀಕರ್‌ ಹೊಸ ವಾದ ಮಂಡಿಸಿದರೆ, ನಮಗೆ ಈಗ ಡಿ.ಕೆ. ಶಿವಕುಮಾರ್‌ ಅವರೇ ಸಿಎಂ. ಅವರೇ ಉತ್ತರಿಸಲಿ ಎಂದು ಅಶೋಕ ಪಟ್ಟು ಹಿಡಿದರು. ಆದರೆ ಸ್ಪೀಕರ್‌ ಅವಕಾಶ ನೀಡದ್ದರಿಂದ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು. ಪರಿಷತ್ತಿನಲ್ಲೂ ಇದೇ ಸನ್ನಿವೇಶ ನಿರ್ಮಾಣವಾಗಿತ್ತು.

ಒಳಮೀಸಲು ಬಗ್ಗೆ ಸಿಎಂ ಉತ್ತರ ಏನು?

1. ನಾಗಮೋಹನ್‌ ದಾಸ್‌ ಆಯೋಗ ಪರಿಶಿಷ್ಟ ಜಾತಿ ಗಳಿಗೆ ಸೇರಿದ 1,05,09,871 ಜನರ ದತ್ತಾಂಶಗಳನ್ನು ಸಂಗ್ರಹಿಸಿದೆ. ಶೇ. 93ರಷ್ಟು ಪರಿಶಿಷ್ಟ ಜಾತಿಗಳ ಜನಸಂಖ್ಯೆಯು ಈ ಸಮೀಕ್ಷೆಗೆ ಲಭ್ಯವಾಗಿದೆ. ಸರಕಾರ ವರದಿಯ ಶಿಫಾರಸುಗಳನ್ನು ಮಾರ್ಪಾಡುಗಳೊಂ ದಿಗೆ ಅಂಗೀಕರಿಸಿದೆ.

2. ಎಡಗೈ ಸಂಬಂಧಿತ ಜಾತಿಗಳೆಂದು ಆಯೋಗವು ಗುರುತಿಸಿರುವ ಸಮುದಾಯಗಳಿಗೆ ಶೇ. 6ರಷ್ಟು ಒಳಮೀಸಲಾತಿ

3. ಆಯೋಗವು ಪರಯ, ಮೊಗೇರ ಮುಂತಾದ ಬಲಗೈ ಸಂಬಂಧಿತ ಜಾತಿಗಳನ್ನು ಎಡಗೈ ಸಂಬಂಧಿತ ಜಾತಿಗಳ ಜೊತೆ ಸೇರಿಸಿದ್ದನ್ನು ಗಮನಿಸಿದ ಸಂಪುಟ ಈ ಜಾತಿಗಳನ್ನು ಬಲಗೈಗೆ ಸೇರಿಸಿ ಬಲಗೈ ಸಂಬಂಧಿತ ಜಾತಿಗಳ ಸಮೂಹಕ್ಕೆ ಶೇ. 6ರಷ್ಟು ಮೀಸಲಾತಿ ಕಲ್ಪಿಸಿದೆ

4. ಸ್ಪೃಶ್ಯ ಜಾತಿಗಳ ಗುಂಪಿಗೆ ಆಯೋಗ ಶೇ.4ರಷ್ಟು ಮೀಸಲಾತಿ ಶಿಫಾರಸು ಮಾಡಿತ್ತು. ಹಾಗೆಯೇ 59 ಜಾತಿಗಳ 5,22,099 ಜನಸಂಖ್ಯೆಯನ್ನು ಪ್ರವರ್ಗ-ಎ ಎಂದು ತೀರ್ಮಾನಿಸಿ ಶೇ. 1ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತ್ತು ಕೆಲವು ತಾಂತ್ರಿಕ ಕಾರಣಗಳಿಂದ ಈ ಎರಡೂ ಗುಂಪುಗಳನ್ನು ಒಟ್ಟಿಗೆ ಸೇರಿಸಿ ಶೇ. 5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ

5. ಆಯೋಗವು ಎ,ಬಿ,ಸಿ,ಡಿ,ಇ ಎಂದು ಪ್ರವರ್ಗಗಳ ನ್ನಾಗಿ ವಿಭಾಗೀಕರಿಸಿ ಮಾಡಿದ್ದ ಶಿಫಾರಸನ್ನು ಸಚಿವ ಸಂಪುಟವು ಎ,ಬಿ,ಸಿ ಎಂದು 3 ಪ್ರವರ್ಗಗಳನ್ನಾಗಿ ವಿಭಾಗಿಸಿದೆ.

ವಿಪಕ್ಷ ಬೇಡಿಕೆ ಏನು?

  • ಗಳಿವೆ. ಚರ್ಚೆಗೆ ಅವಕಾಶ ನೀಡಲೇಬೇಕು ಮೀಸಲು ವರ್ಗೀಕರಣ ಬಗ್ಗೆ ಕೆಲವು ಪ್ರಶ್ನೆ
  • ಹೊಸದಾಗಿ ಏನು ಮಾಡಿದ್ದೇವೆ ಎಂದು ಸರಕಾರ ಹೇಳಲಿ
  • ಹೆಚ್ಚಿನ ಮಾಹಿತಿ ಕೇಳುವುದಕ್ಕೆ ಅವಕಾಶ ಇದೆ
  • ಒಳಮೀಸಲು ವಿಚಾರದಲ್ಲಿ ಸರಕಾರ ಏನನ್ನೋ ಮುಚ್ಚಿಡುತ್ತಿದೆ

ಅಗತ್ಯವಿದ್ದರೆ ಮಾರ್ಪಾಡು: ಸಿಎಂ

ಈಗಿನ ತೀರ್ಮಾನದಲ್ಲಿ ಮಾರ್ಪಾಡುಗಳ ಅಗತ್ಯತೆ ಕಂಡು ಬಂದರೆ ಅವುಗಳನ್ನು ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದೆ.

ನಮ್ಮ ಈ ತೀರ್ಮಾನವು ಒಳಮೀಸಲಾತಿ ಕುರಿತ ದಶಕಗಳ ಹೋರಾಟಕ್ಕೆ ನ್ಯಾಯ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇವೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕವು ಸಾಮಾಜಿಕ ನ್ಯಾಯದ ವಿಚಾರದಲ್ಲೂ ಮುಂಚೂಣಿಯಲ್ಲಿದೆ ಎಂಬುದನ್ನು ನಮ್ಮ ಸರಕಾರವು ಸಾಬೀತು ಮಾಡಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಇದನ್ನೂ ನೋಡಿ: ಧರ್ಮಸ್ಥಳ | ಪಂಚಾಯಿತಿಯಲ್ಲಿ ದಾಖಲೆಗಳನ್ನು ಸುಟ್ಟು ಹಾಕಿರಬಹುದು. ಆದರೆ ನ್ಯಾಯಾಲಯದಲ್ಲಿ ದಾಖಲೆಗಳು ಇವೆ – ಜಯನ್

Donate Janashakthi Media

Leave a Reply

Your email address will not be published. Required fields are marked *