ಹಾಸನ: ರಾಜ್ಯದಲ್ಲಿ ಮಾನವ- ಪ್ರಾಣಿ ಸಂಘರ್ಷವನ್ನು ಎದುರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಈ ಸಂಘರ್ಷವನ್ನು ನಿಭಾಯಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬುಧುವಾರ ಸೆ-06 ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆನೆಗಳು ಕಾಡಿನಿಂದ ನಾಡಿಗೆ ಬರುವುದಕ್ಕೆ ಅರಣ್ಯ ಒತ್ತುವರಿ, ಅಕ್ರಮ ಗಣಿಗಾರಿಕೆಯ ಸ್ಫೋಟ, ಮಳೆಯ ಅಭಾವದಿಂದ ಆಹಾರ ಮತ್ತು ನೀರಿನ ಕೊರತೆ ಕಾರಣವಾಗಿದ್ದು, ವನ್ಯಮೃಗಳು ಕಾಡಿಗೆ ಬಾರದಂತೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅರಣ್ಯದಂಚಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಅರಣ್ಯ ಭೂಮಿಯನ್ನು ಯಾವುದೇ ರೆಸಾರ್ಟ್ ಅಥವಾ ಹೋಂಸ್ಟೇ ಒತ್ತುವರಿ ಮಾಡಿದ್ದರೆ ಸೂಕ್ತ ಕಾನೂನುಕ್ರಮ ಜರುಗಿಸಿ, ಒತ್ತುವರಿ ತೆರವು ಮಾಡಲಾಗುವುದು ಎಂದರು.
ಇದನ್ನೂ ಓದಿ:ಹಾಸನ ಜಿಲ್ಲೆಯ ವಡೂರು ಗ್ರಾಮದಲ್ಲಿ ಮತ್ತೆ ಮುಂದುವರೆದ ಕಾಡಾನೆ ದಾಳಿ ಮಹಿಳೆ ಸಾವು
ಕಾಡಿನಲ್ಲಷ್ಟೇ ಅಲ್ಲದೆ, ಖಾಸಗಿ ತೋಟದಲ್ಲೂ ಹಲವು ಆನೆಗಳು ಬೀಡು ಬಿಟ್ಟಿವೆ. ಇಂತಹ ಆನೆಗಳನ್ನು ಹಿಡಿದು ಆನೆ ಶಿಬಿರಕ್ಕೆ ಕಳುಹಿಸಬೇಕು ಎಂಬ ಬೇಡಿಕೆ ಇದೆ. ಹಾಸನದಲ್ಲಿ ಒಂದು ಆನೆ ಶಿಬಿರ ಸ್ಥಾಪಿಸಲು ಚಿಂತಿಸಲಾಗಿದೆ. ಅರಣ್ಯದಂಚಿನಲ್ಲಿರುವ ರೈತರು ಆನೆಗಳ ಹಾವಳಿಯಿಂದಾಗಿ 3 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಾರುಕಟ್ಟೆ ಬೆಲೆ ನೀಡಲು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಈ ಜಮೀನು ಸ್ವಾಧೀನಪಡಿಸಿಕೊಂಡು ಅರಣ್ಯ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಆನೆ ಪೀಡಿತ ಜಿಲ್ಲೆಗಳಾದ ಹಾಸನ, ಮಡಿಕೇರಿ, ಮೈಸೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಶಾಶ್ವತ ಪರಿಹಾರಗಳ ಕುರಿತು ಚರ್ಚಿಸುವುದಾಗಿ ಸಚಿವರು ಹೇಳಿದರು.
ಆನೆಗಳು ಜನವಸತಿ ಪ್ರದೇಶಗಳಿಗೆ ಬಾರದಂತೆ ತಡೆಯಲು ರೈಲು ತಡೆಗೋಡೆಗಳ ಮಹತ್ವವನ್ನು ತಿಳಿಸಿದ ಅವರು, ಅರಣ್ಯ ಇಲಾಖೆಯು ಇಲ್ಲಿಯವರೆಗೆ 312 ಕಿಮೀಗೂ ಹೆಚ್ಚು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಇನ್ನೂ 300 ಕಿಮೀಗೆ ಹಾಕಲಾಗುತ್ತದೆ. ಇದಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಚಿಕಿತ್ಸೆ ನೀಡಲು ಹೋಗಿದ್ದ ಅರಣ್ಯ ಸಿಬ್ಬಂದಿಯನ್ನೇ ಕೊಂದ ಕಾಡಾನೆ
11 ವರ್ಷಗಳಷ್ಟು ಹಳೆಯದಾದ ಕಸ್ತೂರಿರಂಗನ್ ವರದಿಯನ್ನು ಪರಿಶೀಲಿಸಿ, ಪರಿಸರವಾದಿಗಳು, ರೈತರು ಮತ್ತು ಸಮಾಜದ ವಿವಿಧ ವರ್ಗಗಳ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ವರದಿಯನ್ನು ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಆಲೂರು ತಾಲೂಕಿನಲ್ಲಿ ಆನೆ ಕಾರ್ಯಾಚರಣೆ ವೇಳೆ ಶಾರ್ಪ್ ಶೂಟರ್ ವೆಂಕಟೇಶ್ ಮೃತಪಟ್ಟಿದ್ದು, ಆನೆಯಿಂದ ಮೃತಪಟ್ಟಿರುವ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಹಳ್ಳಿಯೂರು ಗ್ರಾಮದಲ್ಲಿರುವ ವೆಂಕಟೇಶ್ ಕುಟುಂಬವನ್ನು ಭೇಟಿ ಮಾಡಿದ ಸಚಿವರು 10 ಲಕ್ಷ ಹೆಚ್ಚುವರಿ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಆನೆ-ಮಾನವ ಸಂಘರ್ಷ