ಬೆಂಗಳೂರು :ಮಾಜಿ ಕಾರ್ಪೋರೇಟರ್ ಪುತ್ರನ ಸಾವಿನ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಆತ ಗುತ್ತಿಗೆದಾರನಲ್ಲ, ಮಾನಸಿಕವಾಗಿ ಕುಗ್ಗಿದ ಕಾರಣ ನೇಣಿಗೆ ಕೊರಳೊಡ್ಡಿದ್ದಾಗಿ ಪೋಷಕರು ಸ್ಪಷ್ಟ ಪಡಿಸಿದ್ದಾರೆ.
ಅತ್ತಿಗುಪ್ಪೆ ವಾರ್ಡ್ ಮಾಜಿ ಕಾರ್ಪೋರೇಟರ್ ಕೆ. ದೊಡ್ಡಣ್ಣ ಅವರ ಪುತ್ರ ಗೌತಮ್, ಯಾವುದೇ ಗುತ್ತಿಗೆದಾರನಲ್ಲ ಹಾಗೆ ಅವರ ಹೆಸರಲ್ಲಿ ಯಾವುದೇ ಪರವಾನಗಿ ಕೂಡ ಇರಲಿಲ್ಲ.
ಯಾವುದೇ ಕೆಲಸ ಮಾಡುತ್ತಿರಲಿಲ್ಲ. 3-4 ತಿಂಗಳಿಂದ ಮಾನಸಿಕವಾಗಿ ಕುಗ್ಗಿದ್ದ ಗೌತಮ್, ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮದುವೆ ಮಾಡಿಕೊಳ್ಳುವುದಾಗಿ ಪಾಲಕರ ಬಳಿ ಹೇಳಿಕೊಂಡಿದ್ದ. ನಾಲ್ಕೈದು ಯುವತಿಯರ ಫೋಟೋಗಳನ್ನು ತೋರಿಸಿದ್ದರು. ಓರ್ವ ಯುವತಿ ಫೋಟೋ ನೋಡಿ ಒಪ್ಪಿಕೊಂಡಿದ್ದ. ಇದರ ನಡುವೆ ಬುಧವಾರ ಮಧ್ಯಾಹ್ನ 1 ಗಂಟೆಯಲ್ಲಿ ಊಟ ಮಾಡಿಕೊಂಡು ತನ್ನ ಕೊಠಡಿಗೆ ಹೋಗಿದ್ದ. ರಾತ್ರಿ ಊಟಕ್ಕೆ ಮತ್ತು ಗುರುವಾರ ಬೆಳಗ್ಗೆ ತಿಂಡಿ ತಿನ್ನಲು ಬಂದಿರಲಿಲ್ಲ.
ಮಧ್ಯಾಹ್ನ 1.30ರಲ್ಲಿ ಗೌತಮ್‌ನನ್ನು ಕರೆಯುವಂತೆ ಆತನ ಸಹೋದರನಿಗೆ ಪಾಲಕರು ಹೇಳಿದ್ದರು. ರೂಮ್ ಬಳಿಗೆ ಹೋಗಿ ನೋಡಿದಾಗ ಲಾಕ್ ಆಗಿತ್ತು. ಮೊಬೈಲ್ ಸಹ ಸ್ವೀಚ್ ಆಗಿದ್ದು, ಕೊನೆಗೆ ಕೊಠಡಿ ಬಾಗಿಲು ಹೊಡೆದು ಒಳಗೆ ನೋಡಿದಾಗ ಗೌತಮ ನೇಣಿಗೆ ಕೊರಳೊಡ್ಡಿದ್ದ ಎಂದು ಪೋಷಕರು ಸ್ಪಷ್ಟಪಡಿಸಿದ್ದಾರೆ.
ಗೌತಮ್ ಗುತ್ತಿಗೆದಾರ ಆತ್ಮಹತ್ಯೆಗೆ ಶರಣು ಎನ್ನುವುದು ಎಲ್ಲಾ ಸುಳ್ಳು ಮಾಹಿತಿಯಾಗಿದೆ. ನಾವು ಕಾಂಗ್ರೆಸ್ ನವರಾದ ಕಾರಣ ಬಿಜೆಪಿಯವರು ಪಿತೂರಿ ಮಾಡಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.