ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್‌ರವರ ಹತ್ಯೆ ಆರೋಪಿಯ ವಿರುದ್ಧ ಕೋಕಾ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮರುಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಗೌರಿ ಲಂಕೇಶ್ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಆರೋಪಿ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಯಡಿ ಹೇರಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಈ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ತೀರ್ಪು ಕಾಯ್ದರಿಸಿದ ಸುಪ್ರೀಂ ಕೋರ್ಟ್
ಆರೋಪಿ ಮೋಹನ್ ನಾಯಕ್ ವಿರುದ್ಧ ಕೋಕಾ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ. ಈ ಕುರಿತು ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರ ಪೀಠ ಇಂದು ಆದೇಶ ಹೊರಡಿಸಿದೆ.
2017ರಲ್ಲಿ ನಡೆದಿದ್ದ ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳ ವಿರುದ್ಧ ಸಲ್ಲಿಸಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 ಅಡಿಯಲ್ಲಿನ ಆರೋಪಗಳನ್ನು ವಜಾಗೊಳಿಸಿದ್ದ ಹೈಕೋರ್ಟ್ ಹತ್ಯೆಯನ್ನು ಸಾಮಾನ್ಯ ಕೊಲೆಯಂತೆ ವಿಚಾರಣೆ ನಡೆಸಲು ಮುಂದಾಗಿತ್ತು. ಆ ಸಂದರ್ಭದಲ್ಲಿ ಮೋಹನ್ ನಾಯಕ್ ತನಗೆ ಜಾಮೀನು ನೀಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ.
ಆರೋಪಿ ಮೋಹನ್ ನಾಯಕ್ ಗೌರಿ ಲಂಕೇಶ್ ಹತ್ಯೆಯಲ್ಲಿ ಯೋಜನೆ ರೂಪಿಸಿ ನೇರ ಭಾಗಿಗಳಾಗಿದ್ದ ಅಮೋಲ್ ಕಾಳೆ ಮತ್ತು ರಾಜೇಶ್ ಬಂಗಾರರ ನಿಕಟವರ್ತಿಯಾಗಿದ್ದಾನೆ.
ಬೆಂಗಳೂರು ಪೊಲೀಸ್ ಆಯುಕ್ತರು 2018ರಲ್ಲಿ ಆದೇಶ ಹೊರಡಿಸಿ ಮೋಹನ್ ನಾಯಕ್ ವಿರುದ್ಧ ಕಾಯಿದೆಯ ಸೆಕ್ಷನ್ 3(1)(ಐ), 3(2), 3(3) ಹಾಗೂ 3(4) ಅನ್ವಯ ಪ್ರಕರಣ ದಾಖಲಿಸಿದ್ದರಲ್ಲದೆ ಈ ಕುರಿತು ಪೂರಕ ಚಾರ್ಜ್‍ಶೀಟ್ ಕೂಡ ಸಲ್ಲಿಸಲಾಗಿತ್ತು. ಆದರೆ ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎಪ್ರಿಲ್ 22, 2021ರ ಆದೇಶದಲ್ಲಿ ರದ್ದುಗೊಳಿಸಿತ್ತು.
ಗೌರಿ ಲಂಕೇಶ್ ಅವರ ಹತ್ಯೆಗೈದವರಿಗೆ ಘಟನೆಗಿಂತ ಮುನ್ನ ಹಾಗೂ ನಂತರದಲ್ಲಿ ಆರೋಪಿ ಮೋಹನ್ ನಾಯಕ್ ಆಶ್ರಯ ನೀಡಿದ್ದರು ಎಂದು ಕವಿತಾ ಲಂಕೇಶ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಲ್ಲಿ ಹೇಳಿದ್ದರು. ಎಡಿಜಿಪಿ ಶ್ರೇಣಿಗಿಂತ ಕಡಿಮೆಯಿರದ ಶ್ರೇಣಿಯ ಅಧಿಕಾರಿಯ ಪೂರ್ವಾನುಮತಿಯಿಲ್ಲದೆ ಕಾಯಿದೆಯ ಸೆಕ್ಷನ್ 24 ಅಡಿಯ ಆರೋಪದ ಕುರಿತಂತೆ ಯಾವುದೇ ವಿಶೇಷ ನ್ಯಾಯಾಲಯ ನಿರ್ಧರಿಸುವಂತಿಲ್ಲವಾದರೂ, ಅದನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ತಪ್ಪು ಮಾಡಿದೆ ಎಂಬುದನ್ನೂ ಕವಿತಾ ಲಂಕೇಶ್ ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಹೇಳಿದ್ದರು.
ಕವಿತಾ ಲಂಕೇಶ್ ಪರವಾಗಿ ಹಿರಿಯ ವಕೀಲ ಹುಜೀಫಾ ಅಹ್ಮದಿ ಅವರು ವಾದಿಸಿದ್ದರು. ಆರೋಪಿ ಪರವಾಗಿ ಬಸವ ಪ್ರಭು ಎಸ್ ವಾದಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಪೀಠದ ನ್ಯಾಯಾಧೀಶರು ಸೆಪ್ಟಂಬರ್ 21ರಂದು ಉಭಯ ಕಕ್ಷಿದಾರರ ಪರ ವಾದವನ್ನು ವಾದವನ್ನು ಆಲಿಸಿ ಆದೇಶ ಕಾಯ್ದಿರಿಸಿತ್ತು. ಅದರಂತೆ ಇಂದು ಕೋಕಾ ಕಾಯ್ದೆಯಡಿ ಆರೋಪಿ ಮೋಹನ್ ನಾಯಕ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.